ADVERTISEMENT

ಶಿರಸಿ: ಕಾಳುಮೆಣಸಿಗೆ ಎಲೆ ಕೊಳೆ ಕಂಟಕ

ರಾಜೇಂದ್ರ ಹೆಗಡೆ
Published 8 ಆಗಸ್ಟ್ 2024, 5:33 IST
Last Updated 8 ಆಗಸ್ಟ್ 2024, 5:33 IST
ಶಿರಸಿಯ ಸಾಲಕಣಿ ಭಾಗದ ತೋಟದಲ್ಲಿ ಕಾಳುಮೆಣಸು ಬಳ್ಳಿಯಲ್ಲಿ ಕಾಣಿಸಿಕೊಂಡ ಎಲೆ ಕೊಳೆ ರೋಗ
ಶಿರಸಿಯ ಸಾಲಕಣಿ ಭಾಗದ ತೋಟದಲ್ಲಿ ಕಾಳುಮೆಣಸು ಬಳ್ಳಿಯಲ್ಲಿ ಕಾಣಿಸಿಕೊಂಡ ಎಲೆ ಕೊಳೆ ರೋಗ    

ಶಿರಸಿ: ಕಾಳುಮೆಣಸು ಬಳ್ಳಿಗೆ ತಗುಲಿದ ಎಲೆ ಕೊಳೆ ರೋಗದಿಂದ ಜಿಲ್ಲೆಯ ಕಾಳುಮೆಣಸು ಬೆಳೆಗಾರರು ಕಂಗಾಲಾಗಿದ್ದಾರೆ. ತೋಟಗಳಲ್ಲಿ ಬಲಿತ ಬಳ್ಳಿಗಳು ಕೂಡ ಕೊಳೆಯುತ್ತಿದ್ದು, ರೋಗ ನಿವಾರಣೆಗೆ ರೈತರು ಪರದಾಡುತ್ತಿದ್ದಾರೆ.

ಉತ್ತರ ಕನ್ನಡದ ತೋಟಗಾರಿಕಾ ಕ್ಷೇತ್ರದಲ್ಲಿ ಅಡಿಕೆ ನಂತರದ ಸ್ಥಾನವನ್ನು ಕಾಳುಮೆಣಸು ಹೊಂದಿದೆ. ಇಲ್ಲಿನ ಗುಣಮಟ್ಟದ ಕಾಳು ಮೆಣಸಿಗೆ ದೇಶಾದ್ಯಂತ ಬೃಹತ್ ಮಾರುಕಟ್ಟೆಯಿದೆ. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾಳುಮೆಣಸು ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಬೆಳೆ ಪ್ರಮಾಣ ಹೆಚ್ಚಿದೆ.

ಆದರೆ, ಕಾಳುಮೆಣಸಿನ ಬಳ್ಳಿಗೆ ಬಂದ ರೋಗದಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಶ್ರಮಕ್ಕೆ ತಕ್ಕಷ್ಟು ಬೆಲೆ ದೊರೆಯದೆ ನಷ್ಟದ ಸುಳಿಗೆ ಸಿಲುಕುವ ಆತಂಕ ಎದುರಾಗಿದೆ. ಮಳೆ ಹೆಚ್ಚಾಗಿ ತೇವಾಂಶ ಹೆಚ್ಚಿದ ಪರಿಣಾಮ ಫೈಟೋಪೋರಾ ಕ್ಯಾಪ್ಪಿಸಿ ಶಿಲೀಂಧ್ರ ಬಳ್ಳಿಗಳಿಗೆ ಹರಡಿದೆ. ಇದರಿಂದ ಎಲೆ ಕೊಳೆಯುವ ರೋಗ ಕಾಣಿಸಿಕೊಂಡಿದೆ. ತೋಟಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಶೇ 25ರಷ್ಟು ಪ್ರದೇಶಕ್ಕೆ ರೋಗ ವ್ಯಾಪಿಸಿದೆ.

ADVERTISEMENT

ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ಶಿರಸಿ ತಾಲ್ಲೂಕಿನಲ್ಲಿ ಈ ರೋಗ ವ್ಯಾಪಕವಾಗಿದೆ. ವಾನಳ್ಳಿ, ಸಾಲಕಣಿ, ಬನವಾಸಿ, ಮತ್ತಿಘಟ್ಟ ಸೇರಿದಂತೆ ಹಲವೆಡೆ ಬಳ್ಳಿಗಳನ್ನು ನಾಶವಾಗುತ್ತಿವೆ. ಆರಂಭಿಕ ಹಂತದಲ್ಲಿ ಎಲೆ ಕೊಳೆಯುತ್ತದೆ. ಒಂದೊಮ್ಮೆ ರೋಗ ಉಪಶಮನ ಆಗದಿದ್ದರೆ, ವಾರದೊಳಗೆ ನಿಧಾನವಾಗಿ ಸುಳಿ, ಕಾಂಡಗಳು ಕೊಳೆತು ತಿಂಗಳೊಳಗೆ ಇಡೀ ಬಳ್ಳಿ ನಾಶವಾಗುತ್ತವೆ.

‘ನೂರಾರು ಬಳ್ಳಿಗಳು ಏಕಕಾಲಕ್ಕೆ ಸೊರಗಿವೆ. ಈ ವರ್ಷ ಹಾನಿ , ರೋಗ ಹರಡುವಿಕೆ ಪ್ರಮಾಣ ಹೆಚ್ಚಿದೆ. ನಮ್ಮ ತೋಟದಲ್ಲಿರುವ ಸ್ಥಿತಿಯೇ ನೂರಾರು ಕಾಳುಮೆಣಸು ಕೃಷಿಕರ ತೋಟದಲ್ಲಿಯೂ ಕಾಣಸಿಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದ ಕಾಳುಮೆಣಸು ಬಳ್ಳಿ ಮೂರೇ ವರ್ಷಕ್ಕೆ ಹಾಳಾಗುತ್ತಿದೆ’ ಎಂದು ರೈತ ರಾಮನಾಥ ಹೆಗಡೆ ಬೇಸರದಿಂದ ನುಡಿದರು. 

‘ಕೊಳೆರೋಗ ವ್ಯಾಪಕ ಪ್ರಮಾಣದಲ್ಲಿ ಉಲ್ಬಣಿಸುತ್ತಿದ್ದರೂ, ಅದರ ಬಗ್ಗೆ ಸೂಕ್ತ ಸಂಶೋಧನೆ ನಡೆಸಿ, ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿಲ್ಲ. ಬೆಳೆ ಹಾನಿ ಸಮೀಕ್ಷೆಯನ್ನೂ ನಡೆದಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು. ರೈತರಿಗೆ ಉಂಟಾದ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು. ರೋಗ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ಕಾಳುಮೆಣಸಿಗೆ ಉತ್ತಮ ದರ ಸಿಗುತ್ತಿಲ್ಲ. ಇದೀಗ ರೋಗ ಆವರಿಸಿದ್ದು ಕಾಳುಮೆಣಸು ಬೆಳೆಗಾರರಿಗೆ ದೊಡ್ಡ ಹೊಡೆತವಾಗಿದೆ
ಅಭಿನವ್ ಎಸ್. ಕಾಳುಮೆಣಸು ಬೆಳೆಗಾರ

ರೋಗ ನಿಯಂತ್ರಣಕ್ಕೆ ತಜ್ಞರ ಸಲಹೆ: 

‘ಕಾಳು ಮೆಣಸಿನ ಬಳ್ಳಿಗೆ ಮುಂಜಾಗ್ರತೆಯಾಗಿ ಶೇ 1ರಷ್ಟು ಬೋಡೋ ದ್ರಾವಣ ಸಿಂಪಡಿಸಬೇಕು. ಬುಡ ಕೊಳೆ ನಿಯಂತ್ರಣಕ್ಕಾಗಿ 5 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಶಿಲೀಂಧ್ರನಾಶಕವನ್ನು ಪ್ರತಿ ಲೀಟ‌ರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು’ ಎಂದು ತಜ್ಞರು ಸಲಹೆ ನೀಡಿದ್ದಾರೆ.

‘ರೋಗ ಪ್ರಾರಂಭಿಕ ಹಂತದಲ್ಲಿದ್ದರೆ ಬಳ್ಳಿಗಳಿಗೆ ಮಾತ್ರ 2 ಗ್ರಾಂ ಮೆಟಾಲಾಕ್ಸಿಲ್ ಎಂ. ಜೆಡ್. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ನಂತರ ಶೇ 1ರಷ್ಟು ಬೋಡೋ ದ್ರಾವಣ ಸಿಂಪಡಿಸಬೇಕು. ನೆಲದ ಮೇಲೆ ಹಬ್ಬಿರುವ ಕುಡಿಗಳನ್ನು ಬಳ್ಳಿಯ ಬುಡದಿಂದ ಒಂದು ಗಣ್ಣು ಬಿಟ್ಟು ಕತ್ತರಿಸಿ ಆ ಭಾಗಕ್ಕೆ ಬೋರ್ಡೋ ಪೇಸ್ಟ್ ಹಚ್ಚಬೇಕು. ಕತ್ತರಿಸಿ ತೆಗೆದ ಕುಡಿ ಮತ್ತು ಎಲೆಗಳನ್ನು ತೋಟದಿಂದ ಹೊರ ಹಾಕಬೇಕು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.