ADVERTISEMENT

ಸಿಟಿ ಸರ್ವೆಗೆ ‘ವೆಚ್ಚ ವಿನಾಯಿತಿ’ ತೊಡಕು

ನಗರಸಭೆ ಬರೆದ ಪತ್ರಕ್ಕೆ ಪ್ರತಿಕ್ರಿಯಿಸದ ಭೂಮಾಪನ ಇಲಾಖೆ

ರಾಜೇಂದ್ರ ಹೆಗಡೆ
Published 29 ಆಗಸ್ಟ್ 2024, 6:10 IST
Last Updated 29 ಆಗಸ್ಟ್ 2024, 6:10 IST
ಶಿರಸಿ ನಗರದ ನೋಟ
ಶಿರಸಿ ನಗರದ ನೋಟ   

ಶಿರಸಿ: ನಗರ ಮಾಪನಾ ವ್ಯಾಪ್ತಿ (ಸಿಟಿ ಸರ್ವೆ ಬೌಂಡರಿ) ವಿಸ್ತರಣೆಗೆ ತಗಲುವ ವೆಚ್ಚದಲ್ಲಿ ವಿನಾಯಿತಿ ನೀಡುವಂತೆ ಭೂ ಮಾಪನಾ ಇಲಾಖೆಗೆ ನಗರಸಭೆ ಕೋರಿದ್ದರೂ ಈವರೆಗೆ ಪ್ರತ್ಯುತ್ತರ ಬಂದಿಲ್ಲ. ಹೀಗಾಗಿ ಶಿರಸಿ ಸಿಟಿ ಸರ್ವೆ ಕಾರ್ಯ ನಡೆಯುವುದು ವಿಳಂಬವಾಗಿದೆ. 

ಏಳುವರೆ ದಶಕದ ಹಿಂದೆ ಶಿರಸಿಯ ಅಂದಿನ ಜನಸಂಖ್ಯೆ ಹಾಗೂ ವಸತಿ ಪ್ರದೇಶದ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿಟಿಎಸ್ ವ್ಯಾಪ್ತಿಯನ್ನು ಘೋಷಣೆ ಮಾಡಲಾಗಿತ್ತು. 1937ರಲ್ಲಿ ಆರಂಭವಾದ ನಗರದ ಸರ್ವೆ ಕಾರ್ಯವು 1939ರಲ್ಲಿ ಪೂರ್ಣಗೊಂಡಿತ್ತು. ಆನಂತರ ನಗರ ನೂರಾರು ಪಟ್ಟು ಬೆಳೆದರೂ ಒಮ್ಮೆಯೂ ನಗರ ಮಾಪನಾ ವ್ಯಾಪ್ತಿ ವಿಸ್ತರಣೆ ಕಾರ್ಯವಾಗಿರಲಿಲ್ಲ.

ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 18 ಸಾವಿರಕ್ಕೂ ಹೆಚ್ಚು  ಆಸ್ತಿಗಳಿವೆ. ಆದರೆ ನಗರ ಪ್ರದೇಶದಲ್ಲಿನ ಹಲವು ಆಸ್ತಿಗಳು ಇಂದಿಗೂ ಸಿಟಿ ಸರ್ವೆ ವ್ಯಾಪ್ತಿ ಸೇರಿಲ್ಲ. ಹೀಗಾಗಿ ನಗರಸಭೆ ವ್ಯಾಪ್ತಿಯೊಳಗೆ ಸೇರಿದ ಭೂ ಮಾಲಿಕರು ಸಿಟಿಎಸ್‌ ವ್ಯಾಪ್ತಿಯೊಳಗೆ ಬರದೆ ಖಾತಾ ಬದಲಾವಣೆ, ಫಾರಂ ನಂ.3 ಸಮಸ್ಯೆ ಎದುರಿಸುವಂತಾಗಿದೆ.

ADVERTISEMENT

ಶಾಸಕ ಭೀಮಣ್ಣ ನಾಯ್ಕ ಸೂಚನೆ ಮೇರೆಗೆ ನಗರಸಭೆಯು ಸ್ವಂತ ಖರ್ಚಿನಲ್ಲಿ ಸಿಟಿ ಸರ್ವೆಗೆ ಮುಂದಡಿಯಿಟ್ಟಿದ್ದು, ಸರ್ವೆ ಕಾರ್ಯಕ್ಕೆ ವೆಚ್ಚವಾಗುವ ಭಾಗಶಃ ಮೊತ್ತವನ್ನು ಸರ್ವೆ ಇಲಾಖೆಗೆ ನಗರಸಭೆಯಿಂದ ಭರಿಸಲು ನಿರ್ಧರಿಸಿದೆ. ಆದರೆ, ಅದರಲ್ಲಿ ವಿನಾಯಿತಿ ಕೋರಿ ಭೂ ಮಾಪನಾ ಇಲಾಖೆಗೆ ಪತ್ರ ಬರೆದು ತಿಂಗಳುಗಳೇ ಕಳೆದಿವೆ.

‘ಭೂ ಮಾಪನ ಇಲಾಖೆ ಸಿಟಿ ಸರ್ವೆಗೆ ₹60 ಲಕ್ಷ ನಿಗದಿ ಪಡಿಸಿದೆ. ನಗರಸಭೆಯಲ್ಲಿ ಸಿಟಿ ಸರ್ವೆಗಾಗಿ ಪ್ರತ್ಯೇಕ ಅನುದಾನವಿಲ್ಲ. ಯಾವುದಾದರೂ ಅಭಿವೃದ್ಧಿ ಅನುದಾನ ಇದಕ್ಕಾಗಿ ಮೀಸಲಿಡಬೇಕು. ಹೀಗಾಗಿ ವಿನಾಯಿತಿ ನೀಡುವಂತೆ ಕೋರಲಾಗಿದೆ’ ಎನ್ನುತ್ತಾರೆ ನಗರಸಭೆಯ ಹಿರಿಯ ಅಧಿಕಾರಿಯೊಬ್ಬರು.

‘ನಗರ ವ್ಯಾಪ್ತಿಯ ಆಸ್ತಿಗಳ ಲೆಕ್ಕ ಹಾಗೂ ನಕ್ಷೆಗೆ ಪೂರಕವಾಗಿ ಕಂದಾಯ ಇಲಾಖೆ ಅಧೀನದ ಭೂ ಮಾಪನಾ ಇಲಾಖೆಯು ಪ್ರತಿ 10 ವರ್ಷಕ್ಕೊಮ್ಮೆ ನಗರ ಮಾಪನಾ ವ್ಯಾಪ್ತಿ ವಿಸ್ತರಣೆ ಮಾಡುವ ಕಾರ್ಯ ಮಾಡಬೇಕು. ಆದರೆ ಸರ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಈವರೆಗೂ ಸರ್ವೆ ಕಾರ್ಯ ನಡೆದಿಲ್ಲ. 2008ರಲ್ಲಿ ಭೂಮಾಪನಾ ಇಲಾಖೆ ಆಯುಕ್ತರು ಸಿಟಿಎಸ್ ವಿಸ್ತೀರ್ಣದ ಕುರಿತು ಸರ್ವೆಯರ್ ಗಳನ್ನು ನೇಮಿಸುವಂತೆ ಸ್ಥಳೀಯ ತಹಶೀಲ್ದಾರರಿಗೆ ಆದೇಶಿಸಿದ್ದರು. ಈವರೆಗೆ ಸರ್ವೆ ಕಾರ್ಯ ಈವರೆಗೆ ನಡೆದಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಎನ್.ಭಟ್.

ಸರ್ವೆಗೆ ಖರ್ಚಾಗುವ ₹60 ಲಕ್ಷ ವೆಚ್ಚದಲ್ಲಿ ವಿನಾಯಿತಿ ನೀಡುವಂತೆ ಕೋರಿ ಪತ್ರ ಬರೆಯಲಾಗಿದೆ. ಅದಕ್ಕೆ ಈವರೆಗೆ ಉತ್ತರ ಬಂದಿಲ್ಲ.
–ಕಾಂತರಾಜ್, ಶಿರಸಿ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.