ADVERTISEMENT

ಶಿರಸಿ: ಸಾರಿಗೆ ಬಸ್‍ನಲ್ಲಿ ಡಿಜಿಟಲ್ ಪೇಮೆಂಟ್

ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಎಲ್ಲ ಬಸ್‍ಗಳಲ್ಲಿ ವ್ಯವಸ್ಥೆ

ರಾಜೇಂದ್ರ ಹೆಗಡೆ
Published 13 ಫೆಬ್ರುವರಿ 2024, 7:54 IST
Last Updated 13 ಫೆಬ್ರುವರಿ 2024, 7:54 IST
ಶಿರಸಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ಮೊತ್ತ ಪಾವತಿಸುತ್ತಿರುವುದು.
ಶಿರಸಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕ್ಯೂ ಆರ್ ಕೋಡ್ ಮೂಲಕ ಟಿಕೆಟ್ ಮೊತ್ತ ಪಾವತಿಸುತ್ತಿರುವುದು.   

ಶಿರಸಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ಬಳಸಿ ಹಣ ಪಡೆದು ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಿದೆ.

ಶಿರಸಿ ವಿಭಾಗದ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಗದು ಕಳ್ಳತನ, ಚಿಲ್ಲರೆ ಸಮಸ್ಯೆ ನೀಗಿಸುವ ಹಾಗೂ ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಿ ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಯುಪಿಐ ಮುಖಾಂತರ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಂಡಿದೆ. ವಿಭಾಗದ ಎಲ್ಲ ಬಸ್‍ಗಳಲ್ಲೂ ಈ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಿವೆ.  

‘ಬಸ್ ನಿರ್ವಾಹಕರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂಆರ್ ಕೋಡ್ ನೀಡಲಾಗಿದೆ. ಪ್ರಯಾಣಿಕರಿದ್ದಲ್ಲೇ ನಿರ್ವಾಹಕರು ಬಂದು ಕ್ಯೂಆರ್ ಕೋಡ್ ತೋರಿಸಿ ಟಿಕೆಟ್ ಮೊತ್ತ ಪಡೆದು, ನಂತರ ಟಿಕೆಟ್ ನೀಡುತ್ತಾರೆ. ಬಸ್ ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಸೇರಿದಂತೆ ವಿವಿಧ ಯುಪಿಐ ಅಪ್ಲಿಕೇಷನ್ ಬಳಕೆ ಮಾಡಿಕೊಂಡು ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದಾಗಿದ್ದು, ಈ ಮೊತ್ತ ಉತ್ತರ ಕನ್ನಡ ಡಿಪೊ ಖಾತೆಗೆ ನೇರವಾಗಿ ಜಮಾ ಆಗುತ್ತದೆ’ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘2024ರ ಫೆಬ್ರವರಿ ಅಂತ್ಯದೊಳಗೆ ನಿಗಮದ ಎಲ್ಲಾ ಬಸ್‌ಗಳಲ್ಲಿ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಈಗ ಉತ್ತರ ಕನ್ನಡದಲ್ಲೂ ಸಹ ಈ ವ್ಯವಸ್ಥೆ ಜಾರಿಗೊಳಿಸಿದೆ. ವಿಭಾಗದಿಂದ ನಿತ್ಯ ಸಂಚರಿಸುವ 515ಕ್ಕೂ ಹೆಚ್ಚು ಬಸ್‍ಗಳಲ್ಲಿ ನೂತನ ವ್ಯವಸ್ಥೆ ಅನುಷ್ಠಾನ ಮಾಡಲಾಗಿದೆ’ ಎಂದರು.

‘ಶಕ್ತಿ ಯೋಜನೆಯ ನಂತರ ನಿರ್ವಾಹಕರ ಕೈಯಲ್ಲೂ ನಗದು ಹಣ ಕಡಿಮೆಯಾಗಿದೆ. ಇದರಿಂದ ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆಯುವ ಘಟನೆ ಹೆಚ್ಚಿದೆ. ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಯಿಂದ ಈ ಸಮಸ್ಯೆ ನೀಗುವ ಸಾಧ್ಯತೆಯಿದೆ’ ಎಂಬುದು ನಿರ್ವಾಹಕ ಚಂದ್ರಶೇಖರ ನಾಯ್ಕ ಅಭಿಪ್ರಾಯ.ಹೊಸ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲರ ಬಳಿ ಮೊಬೈಲ್ ಇರುವುದರಿಂದ ಈ ವ್ಯವಸ್ಥೆ ಸಹಕಾರಿಯಾಗಲಿದೆ ಕೆ.ಎಚ್.ಶ್ರೀನಿವಾಸ್ ವಾ.ಕ.ರ.ಸಾ.ಸಂ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಹೊಸ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಲ್ಲರ ಬಳಿ ಮೊಬೈಲ್ ಇರುವುದರಿಂದ ಈ ವ್ಯವಸ್ಥೆ ಸಹಕಾರಿಯಾಗಲಿದೆ
ಕೆ.ಎಚ್.ಶ್ರೀನಿವಾಸ್ ವಾ.ಕ.ರ.ಸಾ.ಸಂ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.