ಶಿರಸಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಪ್ರತಿಶತ ಸಾಧನೆ ಮಾಡಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ.
ಒಂದರಿಂದ ಹತ್ತನೆ ತರಗತಿವರೆಗೆ ಸದ್ಯಕ್ಕೆ 1,10,828 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 1,10,759 ಇತ್ತು. ಅದೇ ಗುರಿಯನ್ನು ಈ ಬಾರಿ ನೀಡಲಾಗಿತ್ತು. ಅದನ್ನು ತಲುಪಿರುವ ಶಾಲೆಗಳು ಮತ್ತಷ್ಟು ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ನೀಡುವ ಪ್ರಕ್ರಿಯೆ ಮುಂದುವರಿಸಿವೆ.
ಕೋವಿಡ್ ಆತಂಕದ ನಡುವೆಯೂ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಚುರುಕುಗೊಳಿಸಿದ್ದವು. 41 ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದ ಇಂಗ್ಲಿಷ್ ಮಾಧ್ಯಮ ತರಗತಿಗೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶೈಕ್ಷಣಿಕ ಜಿಲ್ಲೆಯ 1,359 ಶಾಲೆಗಳು ಸಕಾಲಕ್ಕೆ ಮಾಹಿತಿ ಒದಗಿಸಿವೆ. ಪರಿಣಾಮ ದಾಖಲಾತಿ ಮಾಹಿತಿಯನ್ನು ಇಲಾಖೆಯ ಎಸ್.ಎ.ಟಿ.ಎಸ್. ತಂತ್ರಾಂಶಕ್ಕೆ ದಾಖಲಿಸುವಲ್ಲಿಯೂ ಶಿರಸಿಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದ್ದು, ಅನುದಾನಿತ ಶಾಲೆಗಳಲ್ಲಿ ಏರಿಕೆ ಕಂಡಿದೆ. ವಸತಿ ಶಾಲೆಗಳಿಗೆ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಪ್ರಮಾಣ ಇಳಿಕೆಯಾಗಿದೆ. ಕೋವಿಡ್‍ನಿಂದ ಎದುರಾದ ಆರ್ಥಿಕ ಸಂಕಷ್ಟಕ್ಕೆ ಹಲವು ಪಾಲಕರು ಮಕ್ಕಳನ್ನು ಖಾಸಗಿ ಶಾಲೆ ಬದಲು ಅನುದಾನಿತ ಶಾಲೆಗೆ ದಾಖಲಿಸಿದ ಸಾಧ್ಯತೆ ಇದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
‘ದಾಖಲಾತಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಆದರೆ, ಗುರಿಯನ್ನು ತಲುಪಿದ್ದೇವೆ. ವಿದ್ಯಾರ್ಥಿನಿಲಯಗಳು ಆರಂಭಗೊಂಡ ಬಳಿಕ ಹೊರಜಿಲ್ಲೆಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಶಿರಸಿ, ಜೋಯಿಡಾ ಮತ್ತು ಸಿದ್ದಾಪುರದ ಸರ್ಕಾರಿ ಶಾಲೆಗಳಲ್ಲಿ ಸಂಖ್ಯೆ ಏರಿಕೆಯಾಗಬಹುದು’ ಎನ್ನುತ್ತಾರೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಎಚ್. ದಿವಾಕರ ಶೆಟ್ಟಿ.
‘ಬಸ್ ಸೌಕರ್ಯದ ಕೊರತೆಯಿಂದ ಗ್ರಾಮೀಣ ಭಾಗದ ಹಲವು ವಿದ್ಯಾರ್ಥಿಗಳು ಸಮೀಪದ ಅನುದಾನಿತ ಶಾಲೆಗೆ ದಾಖಲಾದ ಸಾಧ್ಯತೆ ಇದೆ. ಹೀಗಾಗಿ ಅನುದಾನಿತ ಶಾಲೆಗಳಿಗೆ ಕಳೆದ ಬಾರಿಗಿಂತ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದು ಹೇಳಿದರು.
ಅಂಕಿ–ಅಂಶ
ಶಾಲೆ; 2020–21; 2021–22
ಸರ್ಕಾರಿ;75,696 ;74,448
ಅನುದಾನಿತ;13,798 ;14,238
ಖಾಸಗಿ;18,597 ;17,422
ವಸತಿ ಶಾಲೆ;2644; 2930
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.