ಶಿರಸಿ: ಅರಣ್ಯ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಿಗೆ ಆಟದ ಮೈದಾನ ಸೇರಿ ಅಗತ್ಯ ಜಾಗ ಮಂಜೂರು ಮಾಡುವಂತೆ ಅರಣ್ಯ ಇಲಾಖೆಗೆ ಶಿಕ್ಷಣ ಇಲಾಖೆ ನೀಡಿದ್ದ 50ರಷ್ಟು ಅರ್ಜಿಗಳಿಗೆ ಎರಡು ವರ್ಷ ತುಂಬಿದರೂ ಮಂಜೂರಾತಿ ಸಿಕ್ಕಿಲ್ಲ. ಇದರಿಂದ ಶಾಲೆಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂಬ ದೂರು ವ್ಯಕ್ತವಾಗುತ್ತಿದೆ.
ತಾಲ್ಲೂಕು ಬಹುತೇಕ ಅರಣ್ಯದಿಂದ ಆವೃತವಾಗಿರುವ ಪ್ರದೇಶವಾಗಿದೆ. ದಶಕಗಳಿಂದ ಸರ್ಕಾರಿ ಶಾಲೆಗಳು ಅರಣ್ಯ ಭೂಮಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಶಾಲೆಗಳ ಅಭಿವೃದ್ಧಿ, ಶಾಲಾ ಆಟದ ಮೈದಾನ ಅಭಿವೃದ್ಧಿ, ರಂಗ ಮಂದಿರ ನಿರ್ಮಾಣ ವಿಚಾರದಲ್ಲಿ ಆಯಾ ಶಾಲೆಗಳ ಅಭಿವೃದ್ಧಿ ಸಮಿತಿ ಹಾಗೂ ಅರಣ್ಯ ಇಲಾಖೆ ನಡುವೆ ವಿವಾದಗಳು ಸೃಷ್ಟಿಯಾಗುತ್ತಿವೆ. ಇಂಥ ಸನ್ನಿವೇಶ ತಪ್ಪಿಸುವ ಸಲುವಾಗಿ ಶಿಕ್ಷಣ ಇಲಾಖೆಯಿಂದ ಅರಣ್ಯ ಇಲಾಖೆಗೆ ಶಾಲೆ ಜಾಗ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ.
‘ತಾಲ್ಲೂಕಿನಲ್ಲಿ ಒಟ್ಟೂ 84 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಅರಣ್ಯ ಭೂಮಿಯಲ್ಲಿದ್ದು, ಇದರಲ್ಲಿ 2022ರ ಪೂರ್ವ 34 ಶಾಲೆಗಳಿಗೆ ಮಾತ್ರ ಅರಣ್ಯ ಜಾಗ ಮಂಜೂರು ಮಾಡಲಾಗಿದೆ. ಉಳಿದಂತೆ 50 ಶಾಲೆಗಳಿಗೆ ಇನ್ನೂ ಜಾಗದ ಭಾಗ್ಯ ಲಭಿಸಿಲ್ಲ. ಅರಣ್ಯ ಭೂಮಿಯಲ್ಲಿರುವ ಶಾಲೆಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ, ಅವುಗಳಿರುವ ಸರ್ವೆ ನಂಬರ್, ಮಂಜೂರು ಮಾಡಬೇಕಾದ ಜಾಗದ ವಿಸ್ತೀರ್ಣ ಎಲ್ಲವನ್ನೂ ಒಳಗೊಂಡ ಅರ್ಜಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ. ಕಳೆದೆರಡು ವರ್ಷಗಳಿಂದ ಯಾವ ಶಾಲೆಗೂ ಜಾಗ ಮಂಜೂರಾತಿ ನೀಡಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಮಾಹಿತಿ.
‘ಶಾಲೆಯ ಸುತ್ತಮುತ್ತ ಅನಗತ್ಯ ಮರಗಳಿವೆ. ಅವುಗಳನ್ನು ಕತ್ತರಿಸಿ ಮಕ್ಕಳಿಗೆ ಆಟದ ಮೈದಾನ, ರಂಗ ಮಂದಿರ ನಿರ್ಮಾಣ ಮಾಡುವ ಉದ್ದೇಶ ಸಮಿತಿಗಿತ್ತು. ಆದರೆ ಅದಕ್ಕೆ ಅರಣ್ಯ ಜಾಗ ಎಂಬ ಒಂದೇ ಕಾರಣಕ್ಕೆ ಅನುಮತಿ ಸಿಗುತ್ತಿಲ್ಲ. ಇದು ಮಕ್ಕಳ ಕ್ರೀಡಾ, ಸಾಂಸ್ಕೃತಿಕ ಪ್ರಗತಿಗೆ ತೊಡಕಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೊಬ್ಬರು ದೂರಿದರು.
‘ಈ ಹಿಂದೆ ಶಾಲೆ ಪಕ್ಕ ಅಕೇಶಿಯಾ ನೆಡುತೋಪಿತ್ತು. ಅದನ್ನು ಕಟಾವು ಮಾಡಿದ ನಂತರ ಆ ಜಾಗ ಶಾಲೆ ಆಟದ ಮೈದಾನ ಮಾಡಿಕೊಳ್ಳಲು ಇಚ್ಛಿಸಿದ್ದೆವು. ಆದರೆ ಅದಕ್ಕೆ ಅವಕಾಶ ನೀಡದೆ ಅಲ್ಲಿ ಗಿಡಗಳ ಮರು ನಾಟಿ ಮಾಡಲಾಗಿದೆ. ಕುಡಿಯುವ ನೀರಿಗಾಗಿ ತೆರೆದ ಬಾವಿ ತೋಡಲೂ ಅರಣ್ಯ ಇಲಾಖೆ ಅನುಮತಿಗೆ ಕಾಯುವ ಸ್ಥಿತಿಯಿದೆ’ ಎಂದೂ ಆರೋಪಿಸಿದರು.
‘ಶಾಲೆಗಳಿಗೆ ಜಾಗ ಮಂಜೂರು ನೀಡುವಂತೆ ಶಿಕ್ಷಣ ಇಲಾಖೆಯಿಂದ ಅರ್ಜಿ ನೀಡಲಾಗಿದೆ. ಆ ಅರ್ಜಿಗಳು ಅರಣ್ಯ ಭವನದ ಹಂತದಲ್ಲಿದ್ದು, ಅಲ್ಲಿನ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.
ಶಿರಸಿ ತಾಲ್ಲೂಕಿನಲ್ಲಿ 50 ಶಾಲೆಗಳು ಅರಣ್ಯ ಇಲಾಖೆ ಜಾಗದಲ್ಲಿದ್ದು ಮಂಜೂರಾತಿ ನೀರೀಕ್ಷೆಯಲ್ಲಿವೆನಾಗರಾಜ ನಾಯ್ಕ ಬಿಇಒ ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.