ಶಿರಸಿ: ಸಾಗರಮಾಲಾ ಯೋಜನೆಯಡಿ ಶಿರಸಿ-ಹಾವೇರಿ (766ಇ) ಹೆದ್ದಾರಿ ವಿಸ್ತರಣೆ ಕಾಮಗಾರಿಯ ಫಾರೆಸ್ಟ್ ಕ್ಲಿಯರೆನ್ಸ್ ಕೊನೆಯ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಕೇಂದ್ರ ಸರ್ಕಾರದ ಖಾತೆಗೆ ಹಣ ಸಂದಾಯ ಮಾಡದ ಕಾರಣ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ಇದು ತೀರಾ ಹದಗೆಟ್ಟ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ.
ಸಾಗರಮಾಲಾ ಯೋಜನೆಯಡಿ 766ಇ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದ್ದು, ಎರಡು ವಿಭಾಗದಲ್ಲಿ ಕಾಮಗಾರಿ ನಡೆದಿದೆ. ಅದರಲ್ಲಿ ಶಿರಸಿ ಅಗಸೇಬಾಗಿಲು ಮೀನು ಮಾರುಕಟ್ಟೆಯಿಂದ ಹಾವೇರಿ ನಾಲ್ಕರ ಕ್ರಾಸ್‌ವರೆಗಿನ ಹೆದ್ದಾರಿ ವಿಸ್ತರಣೆ ಆಗಬೇಕಿದೆ. ಅಮ್ಮಾಪುರ ಕನ್‌ಸ್ಟ್ರಕ್ಷನ್ ಗುತ್ತಿಗೆ ಪಡೆದಿದ್ದು, ಕಾಮಗಾರಿ ನಿಂತ ನೀರಾಗಿದೆ. ಹಲವು ವರ್ಷಗಳಿಂದ ಫಾರೆಸ್ಟ್ ಕ್ಲಿಯರೆನ್ಸ್ ಸಿಗದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ.
‘ಇತ್ತೀಚೆಗೆ ಕೇಂದ್ರ ಪರಿಸರ ಮಂತ್ರಾಲಯದ ಬೆಂಗಳೂರಿನ ರಿಜನಲ್ ಕಚೇರಿಯಲ್ಲಿ ಆರ್‌ಇಸಿ ಮೀಟಿಂಗ್ ನಡೆದು ಕೆಲವು ಮಾಹಿತಿಯನ್ನು ಅರಣ್ಯ ಇಲಾಖೆಗೆ ಕೇಳಲಾಗಿತ್ತು. ಅದಕ್ಕೆ ಸಂಬಂಧಿಸಿದ ಮಾಹಿತಿ ಈಗಾಗಲೇ ಒದಗಿಸಲಾಗಿದೆ. ಹೆದ್ದಾರಿಯ ಭೂಕುಸಿತ ಆಗುವ ಸ್ಥಳಗಳಿದ್ದರೆ ಪರಿಹಾರ ಕ್ರಮವೇನು? ಅರಣ್ಯ ಹೋದರೆ ಬೇರೆ ಕಡೆ ಎಲ್ಲಿ ಅರಣ್ಯ ಬೆಳೆಸುತ್ತೀರಿ?, ರಸ್ತೆ ಕೆಲಸ ಮಾಡುವ ಸಂದರ್ಭದಲ್ಲಿ ತೆಗೆಯುವ ಮಣ್ಣು ಎಲ್ಲಿ ಹಾಕುತ್ತೀರಿ? ಎಂಬ ಪ್ರಶ್ನೆ ಕೇಳಲಾಗಿತ್ತು. ಆ ಪ್ರಕಾರ ಮಾಹಿತಿ ನೀಡಲಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಮರು ಅರಣ್ಯೀಕರಣ ಸೇರಿ ಸಸ್ಯ ಬೆಳೆಸಲು ಅಂದಾಜು ₹12 ಕೋಟಿ ಹಣ ಭಾರತ ಸರ್ಕಾರದ ಖಾತೆಗೆ ಜಮಾ ಆಗಬೇಕು. ಈವರೆಗೆ ಜಮಾವಣೆಯಾಗದ ಕಾರಣ ಕ್ಲಿಯರೆನ್ಸ್ ಸಿಕ್ಕಿಲ್ಲ’ ಎಂಬುದು ಅರಣ್ಯ ಇಲಾಖೆ ಮೂಲದ ಮಾಹಿತಿ.
‘ಒಟ್ಟು ಈ ಮಾರ್ಗದ ರಸ್ತೆ 74 ಕಿ.ಮೀ ರಸ್ತೆ ಸುಧಾರಣೆಯಾಗಬೇಕಿದ್ದು, ಅದರಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ 22 ಕಿಮೀ ಕಾಮಗಾರಿ ನಡೆಯಬೇಕಿದೆ. ತಾಲ್ಲೂಕಿನ ಮಳಲಗಾಂವ, ದನಗನಹಳ್ಳಿ, ದಾಸನಕೊಪ್ಪ ಹೀಗೆ ಹೆದ್ದಾರಿಗಾಗಿ ಅಲ್ಲಲ್ಲಿ ಕಲ್ವರ್ಟ್ ಚರಂಡಿ (ಸಿ.ಡಿ) ಕಾಮಗಾರಿ ಮುಗಿದಿದೆ. ಅದು ಸರಿಯಾದ ನಿರ್ವಹಣೆಯಿಲ್ಲದೇ ಅಸ್ತವ್ಯಸ್ತವಾಗಿದೆ. ಇನ್ನು ರಸ್ತೆ ಕಾಮಗಾರಿ ಆರಂಭವಾಗದೇ ಇರುವುದು ಈ ಸಿ.ಡಿ ಮೇಲೆ ರಸ್ತೆ ಸೇರಿದಂತೆ ಎಲ್ಲೆಡೆ ರಸ್ತೆ ದೂಳು ಎನ್ನುವಂತಾಗಿದ್ದು, ಜನರನ್ನು ಹೈರಾಣಾಗಿಸಿದೆ. ಪ್ರಸ್ತುತ ಕಾಮಗಾರಿಗೆ ಇನ್ನೂ ಹಸಿರು ನಿಶಾನೆ ಸಿಗದ ಕಾರಣ ಸಮಸ್ಯೆ ಹೆಚ್ಚುತ್ತಿದೆ’ ಎಂಬುದು ಸಾರ್ವಜನಿಕರ ಮಾತು.
‘ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಆಗಿರುವುದರಿಂದ ಪಿಡಬ್ಲುಡಿ ಇಲಾಖೆ ಅತ್ತ ಲಕ್ಷ್ಯ ಹಾಕದ ಸ್ಥಿತಿ ಪರಿಸ್ಥಿತಿ ಎದುರಾಗಿದೆ. ಅತ್ತ ಎನ್‌ಎಚ್‌ಎಐನವರು ರಸ್ತೆ ಸುಧಾರಿಸುತ್ತಿಲ್ಲ, ಇತ್ತ ಪಿಡಬ್ಲ್ಯುಡಿ ಇಲಾಖೆ ಜವಾಬ್ದಾರಿ ಇಲ್ಲದಾಗಿದೆ’ ಎಂಬುದು ಪ್ರಯಾಣಿಕರ ದೂರು.
ಪ್ರಾಧಿಕಾರದ ವತಿಯಿಂದ ಹಣ ಸಂದಾಯವಾದ ನಂತರವಷ್ಟೇ ಅನುಮತಿ ಸಿಗುತ್ತದೆ. ಶೀಘ್ರದಲ್ಲೇ ಹಣ ಸಂದಾಯ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಅಜ್ಜಯ್ಯ ಜಿ.ಆರ್. ಡಿಸಿಎಫ್ ಶಿರಸಿ
ಹಳೆ ದರಪಟ್ಟಿಗೆ ಒಪ್ಪದ ಗುತ್ತಿಗೆದಾರ
ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗದ ಗುತ್ತಿಗೆದಾರರು ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಅಲ್ಲಲ್ಲಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಆದರೆ ಈ ಹಿಂದಿನ ದರವಾರು ಪಟ್ಟಿ ಪ್ರಕಾರ ಈಗ ಕಾಮಗಾರಿ ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದು ಹೊಸ ದರಪಟ್ಟಿ ಪ್ರಕಾರ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕಾಮಗಾರಿ ಆರಂಭಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.