ಶಿರಸಿ: ನಿಗದಿಪಡಿಸಿದ ಸಮಯಕ್ಕಿಂತ ಎರಡು ಗಂಟೆ ವಿಳಂಬವಾದರೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಧ್ಯಕ್ಷತೆಯಲ್ಲಿ ನಡೆಯುವ ಜನತಾ ದರ್ಶನ ಆರಂಭವಾಗದ ಕಾರಣ ಹತ್ತಾರು ಸಾರ್ವಜನಿಕರು ಕಾದು ಕಾದು ವಾಪಸ್ ತೆರಳಿದ ಘಟನೆ ಬನವಾಸಿಯಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಲಕ್ಷ್ಮೀನಾರಾಯಣ ಮಂಗಳೂರು ಸ್ಮಾರಕ ಸಭಾಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ 10.15ರಿಂದ ಆರಂಭವಾಗಬೇಕಿತ್ತು. ದೂರದ ಊರುಗಳಿಂದ ಸಾರ್ವಜನಿಕರು ಸ್ಥಳಕ್ಕಾಗಮಿಸಿದ್ದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಕೂಡ ಬೆಳಿಗ್ಗೆಯೇ ಆಗಮಿಸಿದ್ದರು. ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಸರಿಯಾದ ಸಮಯಕ್ಕೆ ಹಾಜರಿದ್ದರು. ಮಹಿಳೆಯರು, ವಯೋವೃದ್ಧರು ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಲು ಬಂದಿದ್ದರು. ಆದರೆ 12.30 ಗಂಟೆಯಾದರೂ ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಆಗಮಿಸಿರಲಿಲ್ಲ. ಸ್ಥಳದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲದ ಕಾರಣ ವಯಸ್ಸಾದ ಕೆಲವು ಅರ್ಜಿದಾರರು ಅರ್ಜಿ ಸಲ್ಲಿಸಲಾಗದೆ ವಾಪಸ್ ತೆರಳಿದರು.
'ಜನತಾ ದರ್ಶನ ಕಾರ್ಯಕ್ರಮ ನಿಗದಿತ ಸಮಯದಲ್ಲಿ ಆರಂಭವಾಗದ ಕಾರಣ ಅರ್ಜಿ ಸಲ್ಲಿಸಲಾಗಿಲ್ಲ. ಕಾದು ಸುಸ್ತಾಗಿ ವಾಪಸ್ ಹೋವುವಂತಾಗಿದೆ' ಎಂದು ಸಮಸ್ಯೆ ಹೊತ್ತು ಬಂದ ಕೆಲವು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮ ವಿಳಂಬದ ಬಗ್ಗೆ ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.