ಶಿರಸಿ: ಹೊಂಡಗುಂಡಿಗಳಿಂದ ಕೂಡಿರುವ ಕಚ್ಚಾ ರಸ್ತೆಗಳು, ಅಲ್ಲಲ್ಲಿ ಬೇಕಿರುವ ಕಾಲುಸಂಕಗಳು, ಅರೆಬರೆಯಾಗಿರುವ ಜೆಜೆಎಂ ಕಾಮಗಾರಿಗಳು, ಬರದ ಸಮರ್ಪಕ ಅನುದಾನ... ಇಂಥ ಹಲವು ಸಮಸ್ಯೆಗಳು ತಾಲ್ಲೂಕಿನ ಕಾನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಣುತ್ತವೆ.
ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿಮೀ ಅಂತರದಲ್ಲಿರುವ ಕಾನಗೋಡ ಗ್ರಾಮ ಪಂಚಾಯಿತಿಯು ಹನ್ನೊಂದುಗುಡ್ಡೆ, ಬಿಸ್ಲಕೊಪ್ಪ, ಜಾಗನಳ್ಳಿ, ಕಾನಗೋಡ, ಅಂಬ್ಲಿಹೊಂಡ, ಕರೂರ, ಅಜ್ಜಿಬಳ, ಬಾಳಗಾರ, ಮಶೀಗದ್ದೆ ಗ್ರಾಮಗಳನ್ನು ಒಳಗೊಂಡಿದೆ.
ಶಿರಸಿ– ಸಿದ್ದಾಪುರ ಮುಖ್ಯರಸ್ತೆಯು ಈ ಪಂಚಾಯಿತಿ ಪ್ರದೇಶವನ್ನು ವಿಭಜಿಸಿದೆ. ಆದರೂ ಬಹುತೇಕ ಗ್ರಾಮಗಳು ಇಂದಿಗೂ ಕಚ್ಚಾ ರಸ್ತೆಯಿಂದ ಕೂಡಿವೆ. ಇಲ್ಲಿನ ಗ್ರಾಮಸ್ಥರು ಇದೇ ರಸ್ತೆಗಳನ್ನೇ ಬಳಸಿ ನಿತ್ಯವೂ ಕೆಲಸ, ಶಾಲೆ ಕಾಲೇಜು ಸೇರಿ ಇನ್ನಿತರ ಕಾರ್ಯಗಳಿಗೆ ತೆರಳುವ ಅನಿವಾರ್ಯತೆ ಅನುಭವಿಸುತ್ತಿದ್ದಾರೆ.
'ಹಲವು ವರ್ಷಗಳಿಂದ ಸರ್ವಋತು ರಸ್ತೆಗೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಆದರೆ ಈವರೆಗೆ ಬೇಡಿಕೆಗೆ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ಮಳೆಗಾಲದಲ್ಲಂತೂ ಈ ರಸ್ತೆಗಳಲ್ಲಿ ಸಂಚಾರ ದುಸ್ತರ' ಎನ್ನುತ್ತಾರೆ ಗ್ರಾಮಸ್ಥರು.
‘ಗ್ರಾಮದಲ್ಲಿ ರಸ್ತೆ, ಬೀದಿ ದೀಪಗಳ ಸೌಲಭ್ಯವಿಲ್ಲ. ಜಲ ಜೀವನ ಮಿಷನ್ ಯೋಜನೆ ಜಾರಿಗೊಳಿಸಿದ್ದು, ಜಲಮೂಲದ ಕೊರತೆ ಇಲ್ಲದಿದ್ದರೂ ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ವಸತಿ ಯೋಜನೆಯಡಿ 40 ಮಂದಿ ಮನೆಗೆ ಅರ್ಜಿ ಸಲ್ಲಿಸಿ ವರ್ಷಗಳು ಕಳೆದಿವೆ. ಆದರೂ ಮಂಜೂರಾಗಿಲ್ಲ. ಈ ಹಿಂದೆ 62 ಮನೆಗಳು ಮಂಜೂರಾಗಿದ್ದು, ಇನ್ನೂ ಕಾಮಗಾರಿ ಮುಗಿದಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆ ಆಗದಿರುವುದು ಇದಕ್ಕೆ ಕಾರಣ’ ಎಂಬುದು ಗ್ರಾಮಸ್ಥರ ದೂರಾಗಿದೆ.
'ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಆದರೂ ಕರೂರು-ಬಾಳಗಾರ, ಹಳದೋಟ, ಅಜ್ಜಿಬಳ-ಸೊಂಡಿಲಬೈಲ್, ಆಲ್ಮನೆ, ಬಿಸ್ಲಕೊಪ್ಪ, ಕೊಪ್ಪಲತೋಟ, ಮಿಸಗುಂದ್ಲಿ ಭಾಗದಲ್ಲಿ ರಸ್ತೆ ಹದಗೆಟ್ಟಿದೆ. ಕರೂರು-ಮಶಿಗದ್ದೆ, ಕರೂರು-ಅಜ್ಜಿಬಳಗದ್ದೆ, ಬಿಸ್ಲಕೊಪ್ಪ- ನೆಲ್ಲಿಮಡಿಕೆ ಭಾಗದಲ್ಲಿ ಕಾಲುಸಂಕ, ಕಿರು ಸೇತುವೆ ಅಗತ್ಯತೆಯಿದೆ. ಪಂಚಾಯಿತಿ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ಚರಂಡಿ ನಿರ್ಮಾಣ ಆಗಬೇಕಿದೆ' ಎಂದು ಪಂಚಾಯಿತಿ ಸದಸ್ಯ ದತ್ತಾತ್ರೇಯ ಮಡಿವಾಳ ಮಾಹಿತಿ ನೀಡಿದರು.
'ಕಸೇಕೈ, ಕರೂರಿನಲ್ಲಿ ಸಭಾಭವನ ಬೇಡಿಕೆಯಿದೆ. ಹಲವೆಡೆ ವಿದ್ಯುತ್ ಕಂಬಗಳಿದ್ದರೂ ಬೀದಿ ದೀಪ ಅಳವಡಿಕೆ ಆಗಿಲ್ಲ. ಅನುದಾನಕ್ಕೆ ಸೀಮಿತವಾಗಿ ಕಾಮಗಾರಿ ಮಾಡಲಾಗುತ್ತಿದೆ. ಕೆಲವೆಡೆ ಜಲ ಜೀವನ್ ಮಿಷನ್ ಕಾಮಗಾರಿ ಅರೆಬರೆಯಾಗಿದ್ದು, ಸಮಸ್ಯೆಗೆ ಕಾರಣವಾಗಿದೆ' ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ ಹೆಗಡೆ.
ಬಿಡುಗಡೆಯಾದ ಅನುದಾನಕ್ಕೆ ಸೀಮಿತವಾಗಿ ಕೆಲವು ಕಾಮಗಾರಿಗಳ ಕ್ರಿಯಾಯೋಜನೆ ಮಾಡಲಾಗಿದೆ. ಅನುದಾನಕ್ಕಿಂತ ಬೇಡಿಕೆ ಹೆಚ್ಚಿರುವ ಕಾರಣ ಅಭಿವೃದ್ಧಿ ಕಾಮಗಾರಿಗೆ ತೊಡಕಾಗುತ್ತಿದೆ.ರಾಜಾರಾಮ ಭಟ್ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.