ಶಿರಸಿ: ‘ಕನ್ನಡ ಕೇವಲ ಭಾಷೆಯಲ್ಲ, ಬದಲಾಗಿ ಅದೊಂದು ಜೀವನ ಶೈಲಿಯಾಗಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲ್ಲೂಕು ಆಡಳಿತ, ವಿವಿಧ ಇಲಾಖೆ ಸಹಯೋಗದಲ್ಲಿ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಎಲ್ಲ ಕ್ಷೇತ್ರದಲ್ಲೂ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಅನ್ಯಭಾಷೆಯ ಅರ್ಭಟದಲ್ಲಿ ಕನ್ನಡ ಕಳೆದುಹೋಗದಂತೆ ಎಲ್ಲರೂ ಲಕ್ಷ್ಯವಹಿಸಬೇಕು. ಮಾತೃಭಾಷೆಗೆ ಗೌರವ ನೀಡಬೇಕು. ಶಿರಸಿ ಕ್ಷೇತ್ರದ ಯಕ್ಷಗುರು ಕೇಶವ ಹೆಗಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿರುವುದು ಸಂತಸ ತಂದಿದೆ’ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯರಾಣಿ, ‘ಕರ್ನಾಟಕ ರಾಜ್ಯವು ಶ್ರೀಮಂತ ಪರಂಪರೆ ಹೊಂದಿದ, ನೈಸರ್ಗಿಕ ಸಂಪತ್ತಿನ ನಾಡಾಗಿದೆ. ಕನ್ನಡದ ಜನರು ಜಗತ್ತಿನಾದ್ಯಂತ ವಾಸಿಸುತ್ತಿರುವುದು ಕನ್ನಡ ನಾಡಿನ ಶಕ್ತಿಯನ್ನು ತೋರಿಸುತ್ತದೆ. ಕನ್ನಡಿಗರು ಕೇವಲ ಕನ್ನಡ ರಾಜ್ಯವಲ್ಲ ಇಡೀ ಜಗತ್ತಿನ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಯಲ್ಲಿ ಗುರುತರವಾದ ಕೊಡುಗೆ ನೀಡುತ್ತಿದ್ದಾರೆ’ ಎಂದರು.
ನಿವೃತ್ತ ಪ್ರಾಚಾರ್ಯ ಡಿ.ಎಂ.ಭಟ್ ಕುಳವೆ, ಕರಕುಶಲ ಕಲಾವಿದೆ ಶಾರದಾ ಕಳಸಣ್ಣನವರ ಅವರನ್ನು ಗೌರವಿಸಲಾಯತು.
ನಗರಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕಾಂತರಾಜ, ಡಿವೈಎಸ್ಪಿ ಗಣೇಶ ಕೆ.ಎಲ್, ಸಿಪಿಐ ಸೀತಾರಾಮ, ಬಿಇಒ ನಾಗರಾಜ ನಾಯ್ಕ, ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ, ಬರಹಗಾರ ಆರ್.ಡಿ.ಹೆಗಡೆ, ಅರಣ್ಯ ಕಾಲೇಜು ಡೀನ್ ಆರ್.ವಾಸುದೇವ, ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸಮನಿ, ನಗರಸಭಾ ಸದಸ್ಯೆ ಗೀತಾ ಶೆಟ್ಟಿ ಇತರರು ಇದ್ದರು.
ಶಿಕ್ಷಕ ನಾರಾಯಣ ಭಾಗ್ವತ ನಿರ್ವಹಿಸಿದರು. ಇದಕ್ಕೂ ಮುನ್ನ ಪಿಎಸೈ ರತ್ನಾ ಕುರಿ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ಸ್ತಬ್ಧ ಚಿತ್ರ, ರೂಪಕಗಳ ಸಹಿತ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.