ಶಿರಸಿ: ಕೃಷಿ ಹಾಗೂ ತೋಟಗಾರಿಕೆಯಲ್ಲಿ ಯಂತ್ರೋಪಕರಣಗಳ ಬಳಕೆ ಜೊತೆಗೆ ಸ್ವತಃ ಅವುಗಳ ದುರಸ್ತಿ ಮೂಲಕ ತಮ್ಮ ಕೃಷಿ ಬದುಕಿನಲ್ಲಿ ಕೂಲಿಕಾರ್ಮಿಕರ ಕೊರತೆಯಂಥ ಸಂದಿಗ್ಧ ಇಲ್ಲದೆ ಸ್ವಾವಲಂಬಿಯಾದವರು ತಾಲ್ಲೂಕಿನ ಕಾನಕೊಪ್ಪದ ಪ್ರಗತಿಪರ ಕೃಷಿಕ ಸುಭಾಶ್ ಶಿರಾಲಿ.
ತಾಲ್ಲೂಕಿನ ಹಲಗದ್ದೆ (ಕೊರ್ಲಕಟ್ಟಾ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕೊಪ್ಪದಲ್ಲಿ ಇರುವ 19 ಎಕರೆ ಜಮೀನಿನಲ್ಲಿ 5 ಎಕರೆ ಅಡಿಕೆ, ಬಾಳೆ, ಕಾಳುಮೆಣಸು, 8 ಎಕರೆ ಭತ್ತ, 2 ಎಕರೆ ಕಬ್ಬು ಹಾಗೂ ಇತರ ಕ್ಷೇತ್ರದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಇವುಗಳಿಗೆ ಗೊಬ್ಬರ, ಔಷಧ ಸಿಂಪಡಣೆ, ಕಟಾವು ಸೇರಿ ಬಹುತೇಕ ಕಾರ್ಯವನ್ನು ಯಂತ್ರಗಳ ಮೂಲಕವೇ ಮಾಡುತ್ತಾರೆ. ಇವರ ಜಮೀನಿನ ವಿಸ್ತಾರಕ್ಕೆ ಹೋಲಿಸಿದರೆ ಕೂಲಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ.
ಯಂತ್ರಗಳ ಸಹಾಯದಿಂದಲೇ ಇವರ ಕೃಷಿ ವ್ಯವಸ್ಥೆ ಸಾಗುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್, ಕಬ್ಬಿನ ಗಾಣ, ಕರೆಂಟ್ ಮೋಟಾರ್‌ಗಳು, ಪವರ್ ವೀಡರ್, ಸ್ಪ್ರೇಯರ್, ಟಿಲ್ಲರ್ ಟ್ರೇಲರ್ ಸೇರಿದಂತೆ ಮನೆ ಬಳಕೆ, ಕೃಷಿ ಬಳಕೆಗೆ ಯಂತ್ರೋಪಕಣಗಳನ್ನೇ ಹೆಚ್ಚಾಗಿ ಅವಲಂಬಿಸಿರುವ ಕಾರಣ ಎಂದಿಗೂ ಕಾರ್ಮಿಕರ ಕೊರತೆ ಬಾಧಿಸಿಲ್ಲ. ಸ್ವಂತ ಖರ್ಚಿನಲ್ಲಿ ಒಂದು ಕೃಷಿ ಯಂತ್ರೋಪಕರಣಗಳ ದುರಸ್ತಿ ಕಾರ್ಯಾಗಾರವನ್ನೂ ಹೊಂದಿದ್ದು, ಯಂತ್ರೋಕರಣಗಳನ್ನು ಸ್ವತಃ ದುರಸ್ತಿ ಮಾಡಿಕೊಳ್ಳುವುದರಿಂದ ಸಾಕಷ್ಟು ಹಣ ಉಳಿತಾಯ ಆಗುತ್ತಿದೆ. ಇವರ ಯಾಂತ್ರೀಕೃತ ಬೇಸಾಯ ವ್ಯವಸ್ಥೆಗೆ ಮೆಚ್ಚಿ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರಿಗೆ ‘ಕೃಷಿ ಕುಶಲಕರ್ಮಿ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
‘20 ಕ್ವಿಂಟಲ್ ಅಡಿಕೆ, 2–3 ಕ್ವಿಂ. ಕಾಳುಮೆಣಸು ಉತ್ಪಾದನೆ ಆಗುತ್ತದೆ. ತೋಟಕ್ಕೆ ಗೊಬ್ಬರ ಸಾಗಿಸಲು, ಗೊನೆಗಳನ್ನು ಕೊಯ್ಯಲು ಯಂತ್ರಗಳ ಬಳಕೆ ಮಾಡಲಾಗುತ್ತದೆ. 8 ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಮನೆ ಬಳಕೆ ಆಗಿ ಹೆಚ್ಚುವರಿ ಭತ್ತ ಮಾರುತ್ತೇನೆ. ಬೆಳೆದ ಭತ್ತದ ಹುಲ್ಲನ್ನು ಅಗತ್ಯವಿದ್ದಷ್ಟು ಮನೆಬಳಕೆಗೆ ಇಟ್ಟುಕೊಂಡು ಉಳಿದದ್ದನ್ನು ಮಾರುತ್ತೇನೆ. ಕೆಲ ರೈತರು ಹುಲ್ಲಿಗೆ ಬದಲಾಗಿ ಗೊಬ್ಬರ ನೀಡುತ್ತಾರೆ. ಅದನ್ನು ತಂದು ಜಮೀನಿಗೆ ಬಳಸಿಕೊಳ್ಳುತ್ತೇನೆ. ಭತ್ತದ ಹುಲ್ಲಿನ ಬದಲಾಗಿ ನೀಡುವ ಗೊಬ್ಬರ ನನ್ನ ಜಮೀನಿಗೆ ಸಾಲುತ್ತದೆ’ ಎನ್ನುತ್ತಾರೆ ಅವರು.
ಎರಡು ಎಕರೆಯಲ್ಲಿ ಬೆಳೆದ ಕಬ್ಬಿನಿಂದ ಶುದ್ಧ, ರಾಸಾಯನಿಕ ರಹಿತ ಬೆಲ್ಲ ತಯಾರಿಸಿ ಗ್ರಾಹಕರಿಗೆ ನೀಡುವ ಇವರು, ‘ವಾರ್ಷಿಕ 200 ಡಬ್ಬಿಗೂ ಮಿಕ್ಕಿ ಇವರಲ್ಲಿ ಬೆಲ್ಲ ಮಾರಾಟ ಆಗುತ್ತದೆ. ಪ್ರತಿ ಡಬ್ಬಿ ಬೆಲ್ಲ ₹1,800-₹2,000ಕ್ಕೆ ಮಾರುತ್ತಾರೆ. ‘ಒಮ್ಮೆ ಇಲ್ಲಿ ಬೆಲ್ಲ ಖರೀದಿಸಿದವರು ಪ್ರತಿ ಬಾರಿ ಇಲ್ಲಿಯೇ ಬಂದು ಬೆಲ್ಲ ಕೊಳ್ಳುತ್ತಾರೆ’ ಎನ್ನುವ ಅವರು, ‘ಮೂರು ತೆರೆದ ಬಾವಿಗಳು, ಮೂರು ಕೊಳವೆ ಬಾವಿಗಳಿಂದ ನೀರು ಪಡೆದು ಜಮೀನು ನಡೆಸುತ್ತಿದ್ದಾರೆ. ‘ಹನಿ ನೀರಾವರಿ ವ್ಯವಸ್ಥೆ ನಮ್ಮನ್ನು ಕೈಹಿಡಿದಿದೆ. ಬಯೋಡೈಜಸ್ಟರ್ ಬಳಕೆ ಮಾಡುವುದರಿಂದ ಹೆಚ್ಚುವರಿ ಗೊಬ್ಬರದ ಅಗತ್ಯವೂ ಇಲ್ಲ. ಸಾವಯವದ ಮೂಲಕ ಕೃಷಿ ಸಾಗುತ್ತಿದೆ’ ಎನ್ನುತ್ತಾರೆ.
ಕೃಷಿ ತೋಟಗಾರಿಕಾ ಕ್ಷೇತ್ರ ನಿಂತಿರುವುದು ಯಂತ್ರೋಪಕರಣಗಳ ಮೇಲೆ. ಆಧುನಿಕ ಹಾಗೂ ಯಾಂತ್ರೀಕೃತ ಬೇಸಾಯ ಕ್ರಮಕ್ಕೆ ರೈತರು ಹೊಂದಿಕೊಳ್ಳುವುದು ಅನಿವಾರ್ಯ-ಸುಭಾಶ್ ಶಿರಾಲಿ, ಪ್ರಗತಿಪರ ಕೃಷಿಕ
ಕೃಷಿಗೆ ಸಂಬಂಧಿಸಿ ಬರುವ ಯಾವುದೇ ಹೊಸ ತಾಂತ್ರಿಕತೆಗಳನ್ನು ಸುಭಾಶ್ ಅವರು ಮೊದಲು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಪರಿಶೀಲಿಸುತ್ತಾರೆ-ನಂದೀಶ್ ಆರ್., ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.