ಶಿರಸಿ: ಕೃಷಿ ಯಂತ್ರೋಪಕರಣ ಬಾಡಿಗೆ ಆಧಾರದಲ್ಲಿ ರೈತರಿಗೆ ನೀಡುವ ಉತ್ತರ ಕನ್ನಡದ ಎಂಟು ಕೃಷಿ ಯಂತ್ರಧಾರೆ ಕೇಂದ್ರಗಳು ನಷ್ಟದ ಕಾರಣ ಬಾಗಿಲು ಮುಚ್ಚಿವೆ. ಆದರೆ ವಿವಿಧ ಎಫ್‌ಪಿಒ (ರೈತ ಉತ್ಪಾದಕ ಸಂಸ್ಥೆ)ಗಳು ಯಂತ್ರಧಾರೆ ಕೇಂದ್ರ ಪಡೆಯಲು ಉತ್ಸಾಹ ತೋರುತ್ತಿದ್ದು, ವರ್ಗಾಯಿಸಲು ಕೃಷಿ ಇಲಾಖೆ ಮುಂದಾಗಿದೆ.
ಜಿಲ್ಲೆಯ 11 ತಾಲ್ಲೂಕುಗಳಲ್ಲಿ 2018ರಿಂದ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಪ್ರಸ್ತುತ ಶಿರಸಿ, ಹೊನ್ನಾವರ ಹಾಗೂ ಭಟ್ಕಳ ಹೊರತುಪಡಿಸಿ ಉಳಿದೆಡೆ ನಷ್ಟದ ನೆಪವೊಡ್ಡಿ ಕೇಂದ್ರದ ಸೇವೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಆಯಾ ಭಾಗದ ರೈತರಿಗೆ ಖಾಸಗಿಯವರ ಯಂತ್ರಗಳನ್ನು ಬಾಡಿಗೆ ಪಡೆಯುವುದು ಅನಿವಾರ್ಯವಾಗಿದೆ.
‘ಪ್ರಸ್ತುತ ಮಳೆ ಬಿದ್ದ ಕಾರಣ ಯಂತ್ರೋಪಕರಣಗಳ ಅವಶ್ಯಕತೆ ಹೆಚ್ಚಿದೆ. ಯಂತ್ರಧಾರೆ ಕೇಂದ್ರಗಳ ಬಾಗಿಲು ಹಾಕಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿಯವರು ಯಂತ್ರಗಳ ಬಾಡಿಗೆ ಮೊತ್ತ ಹೆಚ್ಚಿಸಿದ್ದು, ರೈತರ ಕಿಸೆಗೆ ಕತ್ತರಿಯಾಗುತ್ತಿದೆ’ ಎಂಬುದು ರೈತ ವರ್ಗದ ಆರೋಪ.
‘ಕೃಷಿ ಚಟುವಟಿಕೆಗೆ ಯಂತ್ರೋಪಕರಣಗಳನ್ನು ಖರೀದಿಸುವುದು ಸಣ್ಣ-ಅತಿ ಸಣ್ಣ ರೈತರಿಗೆ ಕಷ್ಟ. ಹೀಗಾಗಿ ರೈತರು ಬಾಡಿಗೆ ಆಧಾರದಲ್ಲಿ ಯಂತ್ರೋಪಕರಣಗಳನ್ನು ಪಡೆದು ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಲಾಭದಾಯಕ ಕೃಷಿ ಮಾಡಬೇಕೆಂದು ರಾಜ್ಯ ಸರ್ಕಾರ ಕೃಷಿ ಯಂತ್ರಧಾರೆ ಜಾರಿಗೆ ತಂದಿತು. ಪ್ರತಿ ಹೋಬಳಿ ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆದು ರೈತರಿಗೆ ಯಂತ್ರೋಪಕರಣಗಳನ್ನು ಒದಗಿಸುವುದು ಈ ಯೋಜನೆ ಉದ್ದೇಶ. ಆರಂಭದಲ್ಲಿ ಉತ್ಸುಕವಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಳೆದೆರಡು ವರ್ಷಗಳಿಂದ ಬಾಡಿಗೆ ದರ ಕಡಿಮೆ, ಡೀಸೆಲ್ ದರ ದುಬಾರಿ, ಪ್ರಚಾರದ ಕೊರತೆ, ಚಾಲಕರು, ಸಿಬ್ಬಂದಿ ಸಮಸ್ಯೆಯಿಂದ ಆದ ನಷ್ಟದಿಂದ ಕಂಗೆಟ್ಟಿದ್ದು, ಜಿಲ್ಲೆಯ ಎಂಟು ಕೇಂದ್ರಗಳ ಬಾಗಿಲು ಮುಚ್ಚುವ ನಿರ್ಧಾರ ಕೈಗೊಂಡಿದೆ’ ಎಂದು ಸಂಘದ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ದಿಢೀರ್ ಕೇಂದ್ರಗಳ ಬಾಗಿಲು ಮುಚ್ಚಿದ್ದು, ಮಳೆಗಾಲದ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಯಂತ್ರೋಪಕರಣಗಳ ಬಾಡಿಗೆ ಪಡೆಯಬೇಕಿದ್ದ ರೈತರು ಕಂಗಾಲಾಗಿದ್ದಾರೆ. ಕೃಷಿ ಯಂತ್ರಧಾರೆ ಸೇವೆ ಸೂಕ್ತ ಸಮಯದಲ್ಲಿ ರೈತರಿಗೆ ಒದಗದ ಕಾರಣ ಕೃಷಿ ಇಲಾಖೆ ರೈತ ಉತ್ಪಾದಕ ಸಂಘಗಳಿಗೆ (ಎಫ್‌ಪಿಒ) ಕೃಷಿ ಯಂತ್ರಧಾರೆ ಕೇಂದ್ರಗಳನ್ನು ವರ್ಗಾಯಿಸಲು ಚಿಂತನೆ ನಡೆದಿದೆ. ಶಿರಸಿ ಮೂಲದ ಕೆಲ ಎಫ್‍ಪಿಒಗಳು ಯಂತ್ರಧಾರೆ ಕೇಂದ್ರಗಳನ್ನು ಪಡೆಯಲು ಉತ್ಸಾಹ ತೋರಿದ್ದು, ಕಾಗದ ಪತ್ರಗಳ ವ್ಯವಹಾರ, ಮಾಹಿತಿ, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಾಗಿ ಈಗಾಗಲೇ ಮುಚ್ಚಿದ ಕೇಂದ್ರಗಳು ಮತ್ತೆ ತೆರೆಯುವ ವಿಶ್ವಾಸವಿದೆ’ ಎಂಬುದು ಕೃಷಿ ಅಧಿಕಾರಿಗಳ ಮಾತಾಗಿದೆ.
ರೈತರಿಗೆ ವರವಾಗಬೇಕಿದ್ದ ಯಂತ್ರಧಾರೆ ಕೇಂದ್ರಗಳು ನನೆಗುದಿಗೆ ಬೀಳದಂತೆ ಕ್ರಮವಾಗಬೇಕು. ಹಳಿತಪ್ಪಿರುವ ಯೋಜನೆಯನ್ನು ಮರಳಿ ಹಳಿಗೆ ತರುವ ಯತ್ನ ತ್ವರಿತವಾಗಿ ಆಗಬೇಕು-ರಾಘವೇಂದ್ರ ನಾಯ್ಕ, ಪ್ರಗತಿಪರ ಕೃಷಿಕ ಶಿರಸಿ
ಎಂಟು ಕೇಂದ್ರಗಳು ಸ್ಥಗಿತವಾಗಿದ್ದು ವಿವಿಧ ಎಫ್‌ಪಿಒ ಸಹಯೋಗದಲ್ಲಿ ಮತ್ತೆ ಅವುಗಳನ್ನು ಆರಂಭಿಸಲು ಇಲಾಖೆ ಕ್ರಮ ವಹಿಸುತ್ತಿದೆ.-ಟಿ.ಎಚ್. ನಟರಾಜ್ ಕೃಷಿ ಇಲಾಖೆ ಉಪನಿರ್ದೇಶಕ ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.