ADVERTISEMENT

ಮಾರ್ಚ್ 19ರಿಂದ 27ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 10:57 IST
Last Updated 14 ಜನವರಿ 2024, 10:57 IST
   

ಶಿರಸಿ: ದ್ವೈವಾರ್ಷಿಕವಾಗಿ ಜರುಗುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಮಾ.19ರಿಂದ ಮಾ.27ರವರೆಗೆ ಜರುಗಲಿದೆ.

ಭಾನುವಾರ ನಗರದ ದೇವಾಲಯದ ಸಭಾಂಗಣದಲ್ಲಿ ಜರುಗಿದ ಜಾತ್ರಾ ಮಹೋತ್ಸವ ದಿನಾಂಕ ಘೋಷಣಾ ಸಭೆಯಲ್ಲಿ ಗೋಪಾಲಕೃಷ್ಣ ದೇವಾಲಯದ ಪ್ರಧಾನ ಅರ್ಚಕ ಶರಣ ಆಚಾರ್ಯ, ಜಾತ್ರೆಯ ದಿನಾಂಕ ಘೋಷಿಸಿದರು. ಜಾತ್ರೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಅಜಯ ನಾಡಿಗ ಮುಹೂರ್ತ ದೀಪ ಬೆಳಗಿದರು. ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ಜ.31ರಿಂದ ವಿಧಿವಿಧಾನ ಆರಂಭ: ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ.31ರಿಂದ ಪ್ರಾರಂಭವಾಗಲಿವೆ. ಜ.31 ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.27 ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಮಾ.1ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಮಾ.5ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಮಾ.8ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು, ಮಾ.12ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ.ಮಾ.13 ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.

ADVERTISEMENT

ಮಾ.19ರ ಮಧ್ಯಾಹ್ನ 12.25ರಿಂದ ರಿಂದ 12.27ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.39 ರಿಂದ 11.45ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾ.20ರಂದು ಬೆಳಿಗ್ಗೆ 7.27ರಿಂದ 7.39 ಗಂಟೆಯೊಳಗೆ ದೇವಿಯ ರಥಾರೋಹಣ ನಡೆಯಲಿದ್ದು, 8.59 ಗಂಟೆಯಿಂದ ಶೋಭಾಯಾತ್ರೆ ಜರುಗಲಿದೆ. ಮಧ್ಯಾಹ್ನ 1.10 ಗಂಟಡಯೊಳಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾ.21 ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ. ಮಾ.27ರಂದು ಬೆಳಿಗ್ಗೆ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ.

ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಅಪರ್ಣ ರಮೇಶ, ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ರಾಮಚಂದ್ರ ನಾಯಕ,

ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿಗಳಾದ ಎಸ್.ಪಿ.ಶೆಟ್ಟಿ, ಸುಧೀರ್ ಹಂದ್ರಾಳ, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.