ADVERTISEMENT

ಶಿರಸಿ | ಮಂಗಗಳ ಉಪಟಳ: ಕೃಷಿಕರ ಕಳವಳ

ಅಡಿಕೆ ಜತೆ ತೆಂಗನ್ನೂ ಬಿಡದ ಕಪಿಗಳು

ರಾಜೇಂದ್ರ ಹೆಗಡೆ
Published 28 ಆಗಸ್ಟ್ 2024, 4:21 IST
Last Updated 28 ಆಗಸ್ಟ್ 2024, 4:21 IST
ಶಿರಸಿಯ ಗ್ರಾಮೀಣ ಭಾಗದ ತೋಟದಲ್ಲಿ ಮಂಗಗಳು ಕಿತ್ತು ಹಾಕಿರುವ ತೆಂಗಿನ ಎಳೆ ಕಾಯಿಗಳು
ಶಿರಸಿಯ ಗ್ರಾಮೀಣ ಭಾಗದ ತೋಟದಲ್ಲಿ ಮಂಗಗಳು ಕಿತ್ತು ಹಾಕಿರುವ ತೆಂಗಿನ ಎಳೆ ಕಾಯಿಗಳು   

ಶಿರಸಿ: ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ ಎನ್ನದೇ ಕೃಷಿ ಕ್ಷೇತ್ರಕ್ಕೆ ಹಿಂಡುಹಿಂಡಾಗಿ ನುಗ್ಗುವ ಮಂಗಗಳು ಅಡಿಕೆಯ ಜತೆಗೆ ತೆಂಗಿನ ಫಸಲು ನಷ್ಟ ಮಾಡುತ್ತಿದ್ದು ಬೆಳೆಗಾರರನ್ನು ಕಂಗೆಡಿಸಿದೆ. ರೈತನ ಯಾವುದೇ ತಂತ್ರಗಳಿಗೆ ವಾನರ ಗುಂಪು ತಲೆ ಬಾಗದ ಕಾರಣ ಅವುಗಳ ನಿಯಂತ್ರಣಕ್ಕೆ ರೈತರು ಹೈರಾಣಾಗಿದ್ದಾರೆ.

ಕಳೆದ ಕೆಲವು ದಶಕದಿಂದಲೂ ಕಂಡುಬಂದಿರುವ ಮಂಗಗಳ ಕಾಟ ಒಂದೆರೆಡು ವರ್ಷಗಳಿಂದ ಈಚೆಗೆ ಮಿತಿ ಮೀರಿದೆ. ಹಿಂಡು ಹಿಂಡಾಗಿ ತೋಟಗಳಿಗೆ ನುಗ್ಗಿ ಅಡಿಕೆ, ತೆಂಗಿನ ಎಳೆಯ ಕಾಯಿಯನ್ನು ಸಿಗಿದು ಹಾಕುವುದಲ್ಲದೆ ಎಳನೀರನ್ನು ಕೆಳಕ್ಕೆ ಉರುಳಿಸಿ ಫಸಲು ನಷ್ಟ  ಮಾಡುತ್ತಿದೆ.

ಏರ್‌ಗನ್, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳನ್ನು ಓಡಿಸಲಾಗದೆ ರೈತ ಅಸಹಾಯಕ ಸ್ಥಿತಿಯಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಈ ಹಿಂದೆ ತೆಂಗಿನ ಕಾಯಿ ಮಾರಾಟ ಮಾಡಿ ಆದಾಯ ಗಳಿಸಿದ್ದ ಕೆಲವು ಕೃಷಿಕರಿಗೆ ದಿನ ನಿತ್ಯದ ಖರ್ಚಿಗೂ ತೆಂಗಿನ ಕಾಯಿ ಇಲ್ಲದ ಸ್ಥಿತಿ ಉಂಟಾಗಿದೆ' ಎನ್ನುತ್ತಾರೆ ಬೆಳೆಗಾರ ಪ್ರಕಾಶ ಹೆಗಡೆ.

'ಉತ್ತರ ಕನ್ನಡ ಜಿಲ್ಲೆಯಲ್ಲಿ 4-5 ಲಕ್ಷಕ್ಕೂ ಅಧಿಕ ಫಸಲು ನೀಡುವ ತೆಂಗಿನ ಮರಗಳಿವೆ. ವಾರ್ಷಿಕವಾಗಿ 2 ಕೋಟಿ ಅಧಿಕ ತೆಂಗಿನ ಕಾಯಿ ದೊರೆಯುತ್ತದೆ. ತೆಂಗಿನ ಮರಕ್ಕೆ ಮಂಗವೊಂದು ದಾಳಿ ಮಾಡಿದರೆ ಆ ಮರದ ಶೇ 60ರಿಂದ 70ರಷ್ಟು ಫಸಲು ನಷ್ಟ ಆಗುವುದಲ್ಲೇ ತೋಟದ ಮಧ್ಯೆ ಇರುವ ಉಪ ಬೆಳೆಗಳಿಗೂ ಹಾನಿ ಮಾಡುತ್ತಿದೆ' ಎನ್ನುತ್ತಾರೆ ತೆಂಗು ಬೆಳೆಗಾರರು.

‘ಮಂಗಗಳ ಹಾವಳಿ ಬಳಿಕ ಅಡಿಕೆ ಶೇ 30ರಷ್ಟು ನಷ್ಟವಾದರೆ  ಶೇ 70ಕ್ಕೂ ಅಧಿಕ ತೆಂಗಿನ ಫಸಲು ನಷ್ಟವಾಗಿದೆ. ಗುಂಪು ಗುಂಪಾಗಿ ಬಂದು ಅಡಿಕೆಯ ಕಾಯಿ ಕೀಳುವ ಜತೆ ತೆಂಗಿನ ಮರದಲ್ಲೇ ಬೀಡು ಬಿಟ್ಟಿರುವ ಮಂಗಗಳು ಯಾವುದೇ ತಂತ್ರಗಳಿಗೂ ಬಗ್ಗುತ್ತಿಲ್ಲ. ಸರ್ಕಾರವು ಮಂಕಿ ಪಾರ್ಕ್ ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಿ ಮಂಗನ ಕಾಟದಿಂದ ಕೃಷಿ ತೋಟಗಳಿಗೆ ರಕ್ಷಣೆ ನೀಡಬೇಕು. ಜತೆ ಮಂಗಗಳ ಹಾವಳಿಯಿಂದಾದ ನಷ್ಟಕ್ಕೆ ಸೂಕ್ತ ಹಾಗೂ ವೈಜ್ಞಾನಿಕ ಪರಿಹಾರ ನೀಡಲು ಯೋಜನೆ ರೂಪಿಸಬೇಕು‘ ಎಂಬುದು ಕೃಷಿಕ ವಲಯದ ಅಭಿಪ್ರಾಯವಾಗಿದೆ. 

'ಕಾಡುಕೋಣ, ಆನೆ ಮೊದಲಾದ ವನ್ಯಜೀವಿಗಳ ಉಪಟಳದಿಂದ ಬೆಳೆಹಾನಿ ಸಂಭವಿಸಿದಲ್ಲಿ ಸರ್ಕಾರದಿಂದ ಪರಿಹಾರ ಪಡೆಯಬಹುದು. ಆದರೆ ಮಂಗಗಳಿಂದ ಉಂಟಾಗುವ ಹಾನಿಗೆ ಪರಿಹಾರ ಇಲ್ಲ. ಮಂಗನಿಂದ ಕೃಷಿ ಫಸಲು ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಹತ್ತು ವರ್ಷದ ಹಿಂದೆ ಸುತ್ತೋಲೆ ಹೊರಡಿಸಿತ್ತು. ಆದರೆ ಫಸಲಿಗೆ ಇಂತಿಷ್ಟು ದರ ಎಂದು ನಿಗದಿಪಡಿಸದ ಕಾರಣ ನಷ್ಟಕ್ಕೆ ಈಡಾದ ಬೆಳೆಗಾರರಿಗೆ ಇದರಿಂದ ಪ್ರಯೋಜನ ಸಿಗಲಿಲ್ಲ.

ಸರ್ಕಾರಿ ಆದೇಶ ಪತ್ರದಲ್ಲಿ ಪರಿಹಾರ ನೀಡಿ ಎಂದಿತ್ತು ಹೊರತು ನಷ್ಟಕ್ಕೆ ಈಡಾಗುವ ವಿವಿಧ ಬೆಳೆ ಫಸಲಿಗೆ ಇಂತಿಷ್ಟು ಪರಿಹಾರ ನೀಡಬೇಕು ಎಂದು ದರಪಟ್ಟಿ ನಿಗದಿಪಡಿಸಿರಲಿಲ್ಲ. ಆ ಸಮಸ್ಯೆ ಈ ತನಕವೂ ಇತ್ಯರ್ಥ ಆಗದ ಕಾರಣ ನಷ್ಟಕ್ಕೆ ನಯಾಪೈಸೆ ಪರಿಹಾರ ಸಿಗದ ಸ್ಥಿತಿ ಇದೆ' ಎಂಬುದು ರೈತ ವರ್ಗದ ಆರೋಪವಾಗಿದೆ. 

ಮಂಗಗಳಿಂದ ಉಂಟಾಗುತ್ತಿರುವ ತೆಂಗಿನಕಾಯಿ ಎಳೆನೀರು ಅಡಿಕೆ ನಷ್ಟಕ್ಕೆ ಪರಿಹಾರ ನೀಡುವ ಅವಕಾಶ ಅರಣ್ಯ ಇಲಾಖೆ ಕಾನೂನಿನಲ್ಲಿ ಇಲ್ಲ. ಕಾಡು ಪ್ರಾಣಿಗಳಿಂದ ತೆಂಗು ಅಥವಾ ಅಡಿಕೆ ಮರಕ್ಕೆ ಹಾನಿ ಉಂಟಾದರೆ ಮಾತ್ರ ಅದಕ್ಕೆ ಪರಿಹಾರ ನೀಡಲು ಅವಕಾಶವಿದೆ.
ಜಿ.ಆರ್.ಅಜ್ಜಯ್ಯ ಡಿಸಿಎಫ್ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.