ADVERTISEMENT

ಸಿಎಂ, ಜಮೀರ್ ಸೂಚನೆಯಂತೆ ವಕ್ಫ್‌ ಹೆಸರು ಉಲ್ಲೇಖ –ಕಾಗೇರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 14:28 IST
Last Updated 1 ನವೆಂಬರ್ 2024, 14:28 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಶಿರಸಿ: ‘ರೈತರ ಭೂಮಿಯನ್ನು ವಕ್ಫ್ ಮಂಡಳಿಗೆ ಗಿರವಿ ಇಡುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತ, ಇತಿಹಾಸದ ಹುಚ್ಚು ದೊರೆ ಮಹಮ್ಮದ್ ಬಿನ್ ತುಘಲಕ್ ಆಡಳಿತಕ್ಕಿಂತಲೂ ಕಡೆಯಾಗಿದೆ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಿ.ಎಂ ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈ‌ರೇಗೌಡ ಹಾಗೂ ಜಮೀರ್ ಅಹ್ಮದ್ ಖಾನ್ ನೇರ ಸೂಚನೆಯ ಮೇರೆಗೆ ಖಾಸಗಿ, ಧಾರ್ಮಿಕ ಕೇಂದ್ರಗಳ ಜಮೀನುಗಳನ್ನು ವಕ್ಫ್ ಮಂಡಳಿ ಹೆಸರಿಗೆ ಮಾಡಲಾಗುತ್ತಿದೆ‘ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ವಕ್ಫ್ ಕಾಯಿದೆ ತಿದ್ದುಪಡಿ ವಿಷಯ ಅಂಗೀಕರಿಸುವ ಮುನ್ನ ಕಾಲಂ ನಂ 11ರಲ್ಲಿ ವಕ್ಫ್ ಹಕ್ಕು ನಮೂದಿಸಿದರೆ ನಂತರ ಕಾನೂನಾತ್ಮಕ ಹೋರಾಟ ನಡೆಸಬಹುದು ಎಂಬ ದುರಾಲೋಚನೆಯ ಕಾರಣಕ್ಕೆ ಈ ಘಟನೆಗಳು ನಡೆಯುತ್ತಿವೆ' ಎಂದು ಆರೋಪಿಸಿದರು.

ADVERTISEMENT

'ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯದ ಬಲಿಷ್ಠರ ಪಾಲಾಗಿದೆ. ಇದರ ಬಗ್ಗೆ ಮುಸ್ಲಿಂ ಸಮುದಾಯವರೇ ಹಲವು ಸಲ ಧ್ವನಿ ಎತ್ತಿದ್ದರು. ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯವನ್ನು ವಕ್ಫ್ ಮಂಡಳಿಗೆ ಅಡವಿಡಲು ಮುಂದಾಗಿದೆ. ಸರ್ಕಾರ ವಕ್ಫ್ ಗೆ ಸಂಬಂಧಿಸಿ 1974ರ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕು. ಈ ಬಗ್ಗೆ ಒತ್ತಾಯಿಸಲು ನ.4ರಂದು ಬಿಜೆಪಿಯಿಂದ ರಾಜ್ಯವ್ಯಾಪಿ ಪ್ರತಿಭಟಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.