ADVERTISEMENT

ಶಿರಸಿ: ಚಾರಣಿಗರ ಸ್ವರ್ಗ ‘ನಿಶಾನೆ’ ಗುಡ್ಡ

ಒಂದನ್ನೊಂದು ಜೋಡಿಸಿಟ್ಟಂತೆ ಕಾಣುವ ಹಸಿರು ಬೆಟ್ಟ: ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣ

ರಾಜೇಂದ್ರ ಹೆಗಡೆ
Published 13 ಅಕ್ಟೋಬರ್ 2024, 6:27 IST
Last Updated 13 ಅಕ್ಟೋಬರ್ 2024, 6:27 IST
ಶಿರಸಿ ತಾಲ್ಲೂಕಿನ ನಿಶಾನೆ ಗುಡ್ಡದಿಂದ ಕಾಣುವ ರಮಣೀಯ ದೃಶ್ಯ
ಶಿರಸಿ ತಾಲ್ಲೂಕಿನ ನಿಶಾನೆ ಗುಡ್ಡದಿಂದ ಕಾಣುವ ರಮಣೀಯ ದೃಶ್ಯ   

ಶಿರಸಿ: ಕಾಡು, ತೊರೆ, ಸೂರ್ಯೋದಯ, ಸೂರ್ಯಾಸ್ತ, ದೂರದಲ್ಲಿ ಕಾಣುವ ಬೆಟ್ಟ, ಊರು, ತೋಟಗಳ ಮಡಿಲು ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳನ್ನು ಮಡಿಲಲ್ಲಿ ಇಟ್ಟುಕೊಂಡಿರುವ ‘ನಿಶಾನೆ ಗುಡ್ಡ’ ಚಾರಣಪ್ರಿಯರ ಪಾಲಿನ ನೆಚ್ಚಿನ ತಾಣ ಎನಿಸಿಕೊಂಡಿದೆ.

ನಗರದಿಂದ ವಾನಳ್ಳಿ-ಕಕ್ಕಳ್ಳಿ ಮಾರ್ಗದಲ್ಲಿ 25 ಕಿ.ಮೀ ದೂರದಲ್ಲಿ ಈ ಗುಡ್ಡವಿದೆ. ಸುತ್ತಲಿನ ವಿಹಂಗಮ ಪ್ರಕೃತಿ ಸೌಂದರ್ಯದಿಂದಲೇ ನಿಸರ್ಗ ಪ್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಸಮುದ್ರ ಮಟ್ಟದಿಂದ 783 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಹಚ್ಚ ಹಸಿರಿನ ಹೊದಿಕೆ ಹೊಂದಿದ್ದು, ಎತ್ತ ನೋಡಿದರೂ ಮನಸ್ಸಿಗೆ ಮುದ ಸಿಗುವಂತಿದೆ.

ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ನೋಡಲು ಜನರು ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಒಂದನ್ನೊಂದು ಜೋಡಿಸಿಟ್ಟಂತೆ ಕಣ್ಣು ಹಾಯಿಸಿದುದ್ದಕ್ಕೂ ಕಂಗೊಳಿಸುವ ಹಸಿರು ಬೆಟ್ಟಗುಡ್ಡಗಳು ರೋಮಾಂಚನವನ್ನುಂಟು ಮಾಡುತ್ತವೆ.

ADVERTISEMENT

ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾನಳ್ಳಿಯಿಂದ ಕಕ್ಕಳ್ಳಿ ಮಾರ್ಗದಲ್ಲಿ 5 ಕಿ.ಮೀ ಸಾಗಿದರೆ ಸಿಗುವ ಕಾನ್ಮುಸ್ಕಿ ಬಳಿ ಸಿಗುವ ಅಡ್ಡ ರಸ್ತೆಯಲ್ಲಿ ಅರ್ಧ ಕಿ.ಮೀ ಸಾಗಬೇಕು. ಅಲ್ಲಿಂದ ಗುಡ್ಡ ಏರಲು ಕಾಲ್ನಡಿಗೆಯೇ ಆಸರೆ. ಮೊದಲು ಸ್ವಲ್ಪ ದೂರ ಕಾಡಿನ ಪ್ರದೇಶ ಸಿಗುತ್ತದೆ. ಕಾಡು ದಾಟಿದ ಮೇಲೆ ಹುಲ್ಲಿನಂತ ಪ್ರದೇಶ ಸಿಗುತ್ತದೆ. ಅಲ್ಲಿ ಟ್ರೆಕ್ ಮಾಡಬೇಕು. ನಿಗದಿತ ದಾರಿ ಇಲ್ಲ. ನಡೆದದ್ದೆ ದಾರಿಯಾಗುತ್ತದೆ. ಆ ಜಾಗದಲ್ಲಿ ತುಂಬ ಜಾರುತ್ತದೆಯಾದ್ದರಿಂದ ಅಪಾಯವನ್ನು ತಳ್ಳಿ ಹಾಕುವಂತಿಲ್ಲ.

ಮಳೆಗಾಲದ ಸಂದರ್ಭದಲ್ಲಿ ಇಳಿಜಾರುಗಳು ಅಪಾಯಕಾರಿಯಾಗಿ ಮಾರ್ಪಡುವ ಕಾರಣ ಚಾರಣ ಕಷ್ಟಸಾಧ್ಯ. ಹೀಗಾಗಿ ಮಳೆಯ ನಂತರದ ದಿನಗಳಲ್ಲಿ ಈ ಸ್ಥಳ ತಲುಪಲು ಸುಲಭ. 

‘ಸೋಂದಾ ಅರಸರ ಆಳ್ವಿಕೆ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಒಂದು ವೇಳೆ ಎದುರಾಳಿ ಸೈನ್ಯವೇನಾದರೂ ಬರುತ್ತಿದೆ ಎಂದು ಗೊತ್ತಾದಾಗ ಇಲ್ಲಿಂದ ನಿಶಾನೆಯನ್ನು (ಬಾವುಟ) ಹಾರಿಸಿ ವಿಷಯ ರವಾನೆ ಮಾಡುತ್ತಿದ್ದರಂತೆ, ಅದಕ್ಕೆ ನಿಶಾನೆಯೆಂದು ಗುಡ್ಡಕ್ಕೆ ಹೆಸರು ಬಂದಿದೆ’ ಎಂಬುದು ಪ್ರತೀತಿ.

‘ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಆಗಮಿಸಿದರೂ ಇಲ್ಲಿ ಪ್ರಕೃತಿಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಸ್ಥಳೀಯ ಅರಣ್ಯ ಸಮಿತಿ ಪ್ರವಾಸಿಗರ ಚಟುವಟಿಕೆ ಮೇಲೆ ನಿರಂತರ ನಿಗಾ ಇಡುತ್ತದೆ. ಈ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಬೀಸಾಡುವಂತಿಲ್ಲ. ನಿಗದಿತ ಜಾಗದಲ್ಲಿರುವ ಕಸದ ಡಬ್ಬಿಗೆ ಎಲ್ಲ ಕಸ ಹಾಕಬೇಕು. ಇದೇ ಕಾರಣಕ್ಕೆ ನಿಶಾನೆ ಗುಡ್ಡ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಸ ಮುಕ್ತ ತಾಣವಾಗಿ ಗುರುತಿಸಿಕೊಂಡಿದೆ’ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ನಿಶಾನೆ ಗುಡ್ಡ ನೈಸರ್ಗಿಕವಾಗಿ ಸಂಪದ್ಭರಿತವಾಗಿರುವುದರಿಂದ ಹೆಚ್ಚಿನ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಗುಡ್ಡ ಏರಲು ಪ್ರಾಕೃತಿಕ ನಿರ್ಮಿತ ದಾರಿ ಅನುಸರಿಸುವುದು ಅನಿವಾರ್ಯ
ಗಣೇಶ ಹೆಗಡೆ ಸ್ಥಳೀಯ ನಿವಾಸಿ

ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯುತ್ತದೆ

ನಿಶಾನೆ ಗುಡ್ಡ ಕೇವಲ ಚಾರಣಕ್ಕಷ್ಟೇ ಹೆಸರಾಗದೆ ಸಾಂಸ್ಕೃತಿಕ ವೈಭವಕ್ಕೂ ವೇದಿಕೆಯಾಗಿದೆ. ಇಲ್ಲಿ ಶಿವರಾತ್ರಿಯಂದು ಜಾಗಣೆ ನಿಮಿತ್ತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣ ಆಗುತ್ತವೆ. ಸ್ಥಳೀಕರು ಜತೆಗೂಡಿ ಇಲ್ಲಿ ಜಾಗರಣೆ ಮಾಡುತ್ತಾರೆ. ಅಲ್ಲದೇ ಕೆಲವು ಸಾಂಸ್ಕೃತಿಕ  ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಂಡು ಜನಮನ ರಂಜಿಸುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.