ಶಿರಸಿ: ನಗರ ನಿವಾಸಿಗಳಿಗೆ ಕುಡಿಯುವ ನೀರು ನೀಡುವ ಉದ್ದೇಶದೊಂದಿಗೆ ಅನುಷ್ಠಾನಗೊಂಡ ‘ಅಮೃತ್’ ಯೋಜನೆಯಡಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅವಕಾಶವಿದ್ದು ‘ಹೆಚ್ಚುವರಿ ನೀರು ಸಂಗ್ರಹಣೆ’ಗೆ ಬೇಕಾದ ಬೃಹತ್ ಟ್ಯಾಂಕ್ ನಿರ್ಮಿಸಲು ಅವಕಾಶ ಇಲ್ಲ. ಇದು ನಗರದಲ್ಲಿ ನಿರಂತರ ನೀರು ಪೂರೈಕೆಗೆ ತಲೆನೋವಾಗಿ ಪರಿಣಮಿಸಿದೆ.
ನಗರಕ್ಕೆ ಕುಡಿಯುವ ನೀರಿನ ಮೂಲವಾದ ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್‍ಗಳಿರುವುದು ಕಾಡಿನ ನಡುವೆ. ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬೀಳುವುದು, ಟ್ರಿಪ್ ಆಗುವುದು, ವಿದ್ಯುತ್ ಮಾರ್ಗ ದುರಸ್ತಿ ನಿತ್ಯದ ಸನ್ನಿವೇಶ. ಹೀಗೆ ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ನಗರದ ನಿವಾಸಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ನಗರದಲ್ಲಿ ಹೆಚ್ಚುವರಿಯಾಗಿ ತಲಾ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅಮೃತ್ ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ.
‘ನಗರದಲ್ಲಿ 17 ಕಡೆಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಅದರಿಂದ ಆಯಾ ಭಾಗದ ನಾಗರಿಕರಿಗೆ ನಳ ಸಂಪರ್ಕಿಸಿ ನೀರು ನೀಡುವುದು ಅಮೃತ್ 2.0 ಯೋಜನೆಯ ವ್ಯಾಪ್ತಿಯಲ್ಲಿದೆ. ಪ್ರಸ್ತುತ 6–7 ಕಡೆಗಳಲ್ಲಿ ಹಳೆಯ ಓವರ್ ಹೆಡ್ ಟ್ಯಾಂಕ್‍ಗಳಿವೆ. ಉಳಿದಂತೆ 10 ಕಡೆ ಹೊಸದಾಗಿ ನಿರ್ಮಾಣ ಆಗಬೇಕಿದೆ. ಆದರೆ ಈಗಿರುವ ಬಹುತೇಕ ಎಲ್ಲ ಟ್ಯಾಂಕ್‍ಗಳು 3–5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಯೋಜನೆಯಡಿ ನೂತನವಾಗಿ ನಿರ್ಮಿಸಲಿರುವ ಟ್ಯಾಂಕ್‌ಗಳ ಸಾಮರ್ಥ್ಯ ಕೂಡ ಇಷ್ಟೇ ಆಗಿದೆ. ಇದು ಹೆಚ್ಚುವರಿ ನೀರು ಸಂಗ್ರಹಣೆಗೆ ತೊಡಕಾಗಿ ಮಾರ್ಪಟ್ಟಿದೆ’ ಎಂಬುದು ನಗರದ ನಿವಾಸಿಗಳ ಮಾತಾಗಿದೆ.
‘ಒಂದು ದಿನ ವಿದ್ಯುತ್ ಇಲ್ಲದೆ ಜಾಕ್ ವೆಲ್‍ನಿಂದ ನೀರು ನಗರ ತಲುಪದಿದ್ದರೆ ಬಹುತೇಕ ಎಲ್ಲ ಟ್ಯಾಂಕ್‍ಗಳು ಖಾಲಿ ಖಾಲಿ. ಮಳೆಗಾಲದಲ್ಲಂತೂ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಸಮಸ್ಯೆ ಹೆಚ್ಚುತ್ತದೆ. ಬೃಹತ್ ಟ್ಯಾಂಕ್ ನಿರ್ಮಿಸುವುದೊಂದೇ ಇವೆಲ್ಲಕ್ಕೂ ಪರಿಹಾರ. ಆದರೆ ಪ್ರಸ್ತುತ ಯೋಜನೆಯಡಿ ಬೃಹತ್ ಗಾತ್ರದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅವಕಾಶ ಇಲ್ಲದಿರುವುದು ಸಮಸ್ಯೆ ಮುಂದುವರಿಯಲು ಕಾರಣ ಆಗುತ್ತದೆ’ ಎನ್ನುತ್ತಾರೆ ನಗರಸಭೆ ಸದಸ್ಯರು.
‘ನಗರದಲ್ಲಿ ಓವರ್ ಹೆಡ್ ಟ್ಯಾಂಕ್‍ಗಳಿದ್ದರೂ ಆಯಾ ವಾರ್ಡ್‍ಗೆ ಒಂದು ದಿನಕ್ಕೆ ನೀರು ಪೂರೈಸಬಲ್ಲ ಸಾಮರ್ಥ್ಯವನ್ನಷ್ಟೇ ಹೊಂದಿವೆ. ಐದು ಲಕ್ಷ ಲೀಟರ್ ನೀರನ್ನು ಎರಡರಿಂದ ಮೂರು ವಾರ್ಡ್‍ಗಳ ನಾಗರಿಕರಿಗೆ ವಿತರಿಸಲಾಗುತ್ತದೆ. ಒಂದು ದಿನ ವಿದ್ಯುತ್ ವ್ಯತ್ಯಾಸವಾದರೆ ಎರಡು ದಿನ ನೀರು ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಟ್ಯಾಂಕ್‍ಗಳ ಸಾಮರ್ಥ್ಯ ಹೆಚ್ಚಿಸಿ ಕನಿಷ್ಠ 2–3 ದಿನ ವಿತರಿಸಲು ಬೇಕಾದ ನೀರು ಸಂಗ್ರಹ ವ್ಯವಸ್ಥೆ ಮಾಡಬೇಕು. ನಗರ ಜನತೆಗೆ ಕುಡಿಯುವ ನೀರು ಪೂರೈಸುವ ನಗರಸಭೆ ತುರ್ತು ಸನ್ನಿವೇಶಗಳಲ್ಲಿ ಅಗತ್ಯವಿರುವ ನೀರು ಸಂಗ್ರಹಣೆಗೆ ಈವರೆಗೆ ಆದ್ಯತೆ ನೀಡಿಲ್ಲ. ಇದರಿಂದ ಪ್ರತಿ ಬೇಸಿಗೆಯ ಸಂದರ್ಭದಲ್ಲಿ ಹಲವು ಸಮಸ್ಯೆ ಅನುಭವಿಸುವಂತಾಗುತ್ತದೆ’ ಎಂಬುದು ನಿವಾಸಿಗಳ ವಾದ.
ಓವರ್ ಹೆಡ್ ಟ್ಯಾಂಕ್‍ಗಳ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಇಲ್ಲವಾದರೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಜನತೆಗೆ ಹೆಚ್ಚಿನ ಉಪಯೋಗ ಆಗುವುದಿಲ್ಲ–ದಯಾನಂದ ನಾಯಕ ನಗರಸಭೆ ಸದಸ್ಯ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಯೋಜನೆ ಅನುಷ್ಠಾನ ಆಗುತ್ತಿದೆ. ಕಡಿಮೆ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದು–ಎಚ್.ಕಾಂತರಾಜ್ ಪೌರಾಯುಕ್ತ ಶಿರಸಿ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.