ADVERTISEMENT

ಶಿರಸಿ: ಅನಾನಸ್ ಇಳುವರಿ ಕುಸಿತ

ಕುಗ್ಗಿದ ಹಣ್ಣಿನ ಗಾತ್ರ: ಹೊರರಾಜ್ಯದಲ್ಲಿ ಬೇಡಿಕೆ ಇಲ್ಲ

ರಾಜೇಂದ್ರ ಹೆಗಡೆ
Published 27 ಅಕ್ಟೋಬರ್ 2024, 0:09 IST
Last Updated 27 ಅಕ್ಟೋಬರ್ 2024, 0:09 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಹಣ್ಣಾದ ಅನಾನಸ್‍ಗಳನ್ನು ಮಾರುಕಟ್ಟೆಗೆ ಸಾಗಿಸಲು ಸಿದ್ಧತೆ ನಡೆದಿದೆ
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಹಣ್ಣಾದ ಅನಾನಸ್‍ಗಳನ್ನು ಮಾರುಕಟ್ಟೆಗೆ ಸಾಗಿಸಲು ಸಿದ್ಧತೆ ನಡೆದಿದೆ   

ಶಿರಸಿ: ಪ್ರಸಕ್ತ ವರ್ಷ ಅತಿಯಾದ ಮಳೆಯಿಂದಾಗಿ ಅನಾನಸ್ ಇಳುವರಿ ತೀವ್ರವಾಗಿ ಕುಸಿದಿದೆ. ಹಣ್ಣಿನ ಗಾತ್ರವೂ ಕಡಿಮೆಯಾಗಿದೆ. ಇದರಿಂದ ಹೊರ ರಾಜ್ಯಗಳಲ್ಲಿ ಬೇಡಿಕೆ ಕುಗ್ಗಿದೆ. ಹೀಗಾಗಿ, ಬೆಳೆಗಾರರು ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸುವಂತಾಗಿದೆ.

ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ 250 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತದೆ. ಇಲ್ಲಿನ ಅನಾನಸ್ ದೆಹಲಿ, ಮುಂಬೈ, ಪಂಜಾಬ್, ಹರಿಯಾಣ ಸೇರಿ ಉತ್ತರ ಭಾರತಕ್ಕೆ ರವಾನೆಯಾಗುತ್ತದೆ.

‘ಜೂನ್, ಜುಲೈನಲ್ಲಿ ಗಿಡಗಳಲ್ಲಿ ಹೂವು ಬಿಡಲು, ಔಷಧ ಸಿಂಪಡಿಸುತ್ತಿದ್ದೆವು. ಧಾರಾಕಾರ ಮಳೆಯಿಂದ ಔಷಧ ಸಿಂಪಡಿಸದ ಕಾರಣಕ್ಕೆ ಕಾಯಿಗಳ ಗಾತ್ರ ಕಡಿಮೆಯಾಗಿದೆ. ಎರಡು ಕೆ.ಜಿ ತೂಗುವಷ್ಟು ಬೆಳೆದು ‘ಎ’ ಗ್ರೇಡ್‌ ಹಂತಕ್ಕೆ ಬರುತ್ತಿದ್ದ ಕಾಯಿಗಳೆಲ್ಲ ಒಂದು ಕೆ.ಜಿ ತೂಗುತ್ತಿವೆ. ಮಳೆಯಿಂದ ಅವು ಬೇಗ ಹಣ್ಣಾಗಿ ಕೊಳೆಯಲು ಆರಂಭಿಸಿವೆ’ ಎಂದು ಬೆಳೆಗಾರ ಮಂಜುನಾಥಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಒಂದು ಲಕ್ಷ ಅನಾನಸ್ ಗಿಡ ನಾಟಿ ಮಾಡಿದ್ದು, 30 ಸಾವಿರ ಕಾಯಿಗಳು ಲಭಿಸಿವೆ. ಬಹುತೇಕ ‘ಬಿ’ ಗ್ರೇಡ್‌ ಗುಣಮಟ್ಟ ಹೊಂದಿವೆ. ಹಾಗಾಗಿ, ಈ ಬಾರಿ ಬನವಾಸಿಯ ಅನಾನಸ್‌ಗೆ ಹೊರರಾಜ್ಯದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಉತ್ತಮ ಗುಣಮಟ್ಟದ ಕಾಯಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಹೊರ ರಾಜ್ಯದ ಮಾರುಕಟ್ಟೆಗೆ ಒಯ್ದರೆ, ಸಾಗಣೆ ವೆಚ್ಚ ಕೂಡ ಸಿಗುವುದಿಲ್ಲ. ಹೀಗಾಗಿ, ಸ್ಥಳೀಯವಾಗಿ ಮಾರುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಉತ್ತಮ ಗುಣಮಟ್ಟದ ಕಾಯಿಗೆ ಪ್ರತಿ ಕೆ.ಜಿಗೆ ಸರಾಸರಿ ₹15 ರಿಂದ ₹20 ದರವಿತ್ತು. ಈ ಬಾರಿ ಒಂದು ಕೆ.ಜಿಗೆ ₹25 ರ ವರೆಗೆ ಧಾರಣೆಯಿದೆ. ಒಂದು ಗಿಡಕ್ಕೆ ಮೂರು ಕೆ.ಜಿವರೆಗೆ ತೂಗುವ ಕಾಯಿ ಒಂದು ಕೆ.ಜಿ ತೂಗುತ್ತಿದೆ’ ಎಂದು ಬೆಳೆಗಾರರು ತಿಳಿಸಿದರು.

ಸ್ಥಳೀಯ ಮಾರುಕಟ್ಟೆಯಲ್ಲಿ ‘ಬಿ’ ಗ್ರೇಡ್ ಕಾಯಿಗೆ ₹20 ದರ ಲಭಿಸುತ್ತಿದೆ. ಔಷಧ ಸಿಂಪಡಿಸಿದ 45 ದಿನದ ಬಳಿಕ ಹೂವು ಬಿಟ್ಟು 5 ತಿಂಗಳಿಗೆ ಬೆಳೆ ಕೈ ಸೇರುತ್ತಿತ್ತು. ಆದರೆ, ಅತಿಯಾದ ಮಳೆಯಿಂದಾಗಿ ಎಲ್ಲಾ ಲೆಕ್ಕಾಚಾರ ಬುಡಮೇಲಾಗಿದೆ’ ಎಂದು ನೋವು ತೋಡಿಕೊಂಡರು. 

ಮಳೆಯಿಂದಾಗಿ ಹೂವು ಕಚ್ಚುವ ವೇಳೆ ಮತ್ತು ಕಾಯಿ ಬಲಿಯುವ ಹಂತದಲ್ಲಿ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ. ಇದರಿಂದ ಕಾಯಿಯ ಗಾತ್ರ ಅರ್ಧದಷ್ಟು ಇಳಿದಿದೆ
ಗಣೇಶ ಹೆಗಡೆ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.