ಶಿರಸಿ: ಒಡಿಶಾ ಮೂಲದ ಪರಿಸರ ಹೋರಾಟಗಾರ ಸುಂದರಲಾಲ ಬಹುಗುಣ ಶುಕ್ರವಾರ ನಿಧನರಾಗಿದ್ದಾರೆ. ಪರಿಸರ ಪ್ರಜ್ಞೆ ಬೆಳೆಸಲು ಜಿಲ್ಲೆಯಲ್ಲಿ ಮೂಡಿದ ಅವರ ಹೆಜ್ಜೆ ಗುರುತು ಅಚ್ಚಳಿಯದೆ ಉಳಿದುಕೊಂಡಿದೆ.
ದೇಶದಾದ್ಯಂತ ಪರಿಸರ ಸಂರಕ್ಷಣೆಗೆ ಗಟ್ಟಿಧ್ವನಿ ಎತ್ತಲು ಕ್ರಾಂತಿ ಮಾಡಿದ್ದ ‘ಅಪ್ಪಿಕೋ ಚಳವಳಿ’ ಆರಂಭವಾಗಿದ್ದೇ ತಾಲ್ಲೂಕಿನ ಬಿಳಗಲ್–ಕುದ್ರಗೋಡ ಅರಣ್ಯ ಪ್ರದೇಶದಲ್ಲಿ. 1983ರ ಸೆಪ್ಟೆಂಬರ್ 8ರಂದು ಸ್ಥಳೀಯರು ಮರಗಳನ್ನು ಬಿಗಿದಪ್ಪಿಕೊಂಡು ಕಟಾವು ಪ್ರಕ್ರಿಯೆ ವಿರೋಧಿಸಿದ್ದರು. ಆಗಸ್ಟ್ ಹೊತ್ತಿಗೆ ಬಾಳೆಗದ್ದೆಯ ಯುವಕ ಮಂಡಳದವರು ಸುಂದರಲಾಲ ಬಹುಗುಣ ಅವರನ್ನು ಊರಿಗೆ ಕರೆಯಿಸಿದ್ದರು. ಅರಣ್ಯ ಇಲಾಖೆ 2 ಮೀ.ಗಿಂತ ಹೆಚ್ಚು ಸುತ್ತಳತೆಯ ಮರಗಳ ಕಟಾವಿಗೆ ನಿರ್ಧರಿಸಿದ್ದನ್ನು ವಿವರಿಸಿದ್ದರು.
‘ಮರಗಳನ್ನು ಕಡಿಯುವುದನ್ನು ತಡೆಯಲು ಗ್ರಾಮಸ್ಥರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ ಬಗೆಯೇ ವಿಶಿಷ್ಟ. ಅಹಿಂಸಾತ್ಮಕ ಹೋರಾಟ ಹೇಳಿಕೊಟ್ಟ ಬಹುಗುಣ ಗ್ರಾಮಸ್ಥರಿಂದ ‘ಮರಗಳನ್ನು ಕಟಾವಿಗೆ ಅವಕಾಶ ನೀಡಲಾರೆವು’ ಎಂದು ಪ್ರತಿಜ್ಞೆ ಮಾಡಿಸಿದ್ದರು’ ಎಂದು ಅಂದಿನ ಹೋರಾಟದ ದಾರಿ ನೆನಪಿಸಿಕೊಂಡರು ಪರಿಸರ ತಜ್ಞ ಪಾಂಡುರಂಗ ಹೆಗಡೆ.
‘ಅಪ್ಪಿಕೋ ಚಳವಳಿ ನಂತರ ರಾಜ್ಯವಷ್ಟೇ ಅಲ್ಲದೆ ದೇಶದ ಹಲವೆಡೆ ವಿಸ್ತರಿಸಿತು. ಗ್ರಾಮವೊಂದರಲ್ಲಿ ಆರಂಭಿಸಿದ್ದ ಜಾಗೃತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಬಹುಗುಣ ಅವರಿಗಿತ್ತು. ಬೇಡ್ತಿ ಆಣೆಕಟ್ಟೆ, ಕಾಳಿ ನದಿ ಆಂದೋಲನ, ಶರಾವತಿ ಅವಲೋಕನ ಸೇರಿದಂತೆ ಹಲವು ಮಹತ್ವದ ಹೋರಾಟದ ಮುಂದಾಳತ್ವ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು’ ಎಂದು ಹೇಳಿದರು.
1979ರಲ್ಲಿ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದರು. ಅಂದು ಬೇಡ್ತಿ ನದಿಗೆ ಅಣೆಕಟ್ಟೆ ನಿರ್ಮಿಸುವ ಯೋಜನೆ ಪ್ರಸ್ತಾಪವಾದಾಗ ಅದನ್ನು ಬಲವಾಗಿ ವಿರೋಧಿಸಿದ್ದರು. ಆ ಬಳಿಕ ಜಿಲ್ಲೆಗೆ ಸುಮಾರು 15ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು. ಇಲ್ಲಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿದ್ದರು. 2008ರಲ್ಲಿ ಬಹುಗುಣ ಅವರನ್ನು ಸ್ವರ್ಣವಲ್ಲಿ ಮಠದವರು ಸನ್ಮಾನಿಸಿದ್ದರು.
‘ಪರಿಸರ ಸಂರಕ್ಷಣೆಗೆ ಜೀವನವನ್ನೇ ಸುಂದರಲಾಲ ಬಹುಗುಣ ಮುಡಿಪಾಗಿಟ್ಟಿದ್ದರು. ಜಿಲ್ಲೆಯ ನೆಲ–ಜಲದ ಸಂರಕ್ಷಣೆಗೆ ಅವರ ಪಾತ್ರ ದೊಡ್ಡದಿತ್ತು’ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.