ADVERTISEMENT

ಶಿರಸಿ | ಬಾಡಿಗೆ ಕಟ್ಟಡ ದುರ್ಬಲ: ಶಾಲೆ ಸ್ಥಳಾಂತರಕ್ಕೆ ಜಾಗದ ಹುಡುಕಾಟ

ರಾಜೇಂದ್ರ ಹೆಗಡೆ
Published 24 ಅಕ್ಟೋಬರ್ 2024, 5:57 IST
Last Updated 24 ಅಕ್ಟೋಬರ್ 2024, 5:57 IST
ಶಿರಸಿಯ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಂಬೇಸರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ
ಶಿರಸಿಯ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಂಬೇಸರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ   

ಶಿರಸಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನ ಡೊಂಬೇಸರದಲ್ಲಿರುವ  ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಬಾಡಿಗೆ ಕಟ್ಟಡ ದುರ್ಬಲವಾಗಿದ್ದು, ಶೀಘ್ರ ಸ್ಥಳಾಂತರಕ್ಕೆ ಜಾಗದ ಹುಡುಕಾಟ ನಡೆದಿದೆ. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದೊಂದಿಗೆ ತಾಲ್ಲೂಕಿನ ಡೊಂಬೇಸರದಲ್ಲಿ ಪ್ರಾರಂಭವಾಗಿರುವ ಶಾಲೆ ಆರಂಭದಿಂದಲೂ ಸ್ವಂತ ಕಟ್ಟಡವಿಲ್ಲದೇ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 

‘ವಾರ್ಷಿಕ ₹4ರಿಂದ ₹6 ಲಕ್ಷದವರೆಗೆ ಬಾಡಿಗೆ ನೀಡಲಾಗುತ್ತದೆ. ಹಲವಾರು ವರ್ಷಗಳಿಂದ ಈ ಶಾಲೆ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ. ಶಾಲೆ ಮಂಜೂರಾದರೂ ಜಾಗದ ಸಮರ್ಪಕ ಲಭ್ಯತೆ ಸಮಸ್ಯೆಯಿಂದ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. ಕಾರಣ ಇಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದರೂ ಅನಿವಾರ್ಯವಾಗಿ ಇಲ್ಲಿಯೇ ಶಾಲೆ ನಡೆಸಬೇಕಾಗಿದೆ. ಹೆಚ್ಚುವರಿ ಕೊಠಡಿ ನೀಡಿದರೆ, ಬಾಡಿಗೆಯ ದರವೂ ಹೆಚ್ಚಾಗುತ್ತದೆ. ಹೀಗಾಗಿ ಇರುವ ವ್ಯವಸ್ಥೆಯಲ್ಲೇ ಹೊಂದಿಕೊಂಡು ಮಕ್ಕಳು ಕಲಿಯುತ್ತಿದ್ದಾರೆ' ಎಂದು ಶಾಲೆಯ ಹೆಸರು ಹೇಳಲಿಚ್ಛಿಸದ ಶಿಕ್ಷಕರು ತಿಳಿಸಿದರು.

ADVERTISEMENT

;ಬಾಡಿಗೆ ಕಟ್ಟಡ ಸರಿಯಾಗಿ ನಿರ್ವಹಿಸುತ್ತಿಲ್ಲ. ಶೌಚಾಲಯ ಸಮಸ್ಯೆಯೂ ಇದೆ. ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಬೇಂಚ್ ಸಹ ಇಲ್ಲ. ಮಳೆಗಾಲದಲ್ಲಿ ಚಾವಣಿ ಸೋರುವುದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಇದೇ ಕಟ್ಟಡ ಸಂಕೀರ್ಣದಲ್ಲಿ ವಸತಿಯೂ ಇರುವುದರಿಂದ ಇನ್ನಷ್ಟು ತೊಂದರೆ. ಆದಷ್ಟು ಬೇಗ ಬೇರೆಲ್ಲಾದರೂ ಬಾಡಿಗೆ ಕಟ್ಟಡ ಪಡೆದು ಸ್ಥಳಾಂತರಗೊಳ್ಳುವ ಕೆಲಸ ಆಗಬೇಕು’ ಎನ್ನುತ್ತಾರೆ ಶಾಲೆಯ ಪಾಲಕರು. 

‘ಈ ಹಿಂದೆ ತಾಲ್ಲೂಕಿನ ಹುಲೇಕಲ್ ಬಳಿ ಜಾಗ ನಿಗದಿಯಾಗಿತ್ತು. ಆದರೆ ಅಲ್ಲಿ ಶಾಲೆಗೆ ಬೇಕಾದಷ್ಟು ಜಾಗ ಸಿಗದ ಕಾರಣ ಮಂಜುಗುಣಿ ಸಮೀಪ ಸ್ಥಳಾಂತರಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಸದ್ಯ ಸ್ವಂತ ಕಟ್ಟಡಕ್ಕೆ ಹೋಗಲು ಸಾಧ್ಯವಿಲ್ಲ. ಆದರೆ ಇರುವ ಬಾಡಿಗೆ ಕಟ್ಟಡ ದುರ್ಬಲವಾಗಿರುವ ಕಾರಣ ಬೇರೆಡೆ ಬಾಡಿಗೆ ಹೋಗುವುದು ಅನಿವಾರ್ಯ. ಹೀಗಾಗಿ ನಗರ ಪ್ರದೇಶದಲ್ಲಿ ಸೂಕ್ತ ಬಾಡಿಗೆ ಕಟ್ಟಡ ಹುಡುಕಲಾಗುತ್ತಿದೆ' ಎಂದು ಇಲ್ಲಿನ ಶಿಕ್ಷಕ ವರ್ಗದವರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ತೀರಾ ಸಮಸ್ಯೆಯಿದ್ದು ಬೇರೆ ಕಟ್ಟಡಕ್ಕೆ ಹೋಗುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ
ಪಾರ್ವತಿ ಶಾಲೆ ಮುಖ್ಯಶಿಕ್ಷಕಿ
ವಸತಿ ಶಾಲೆಯ ಸ್ಥಿತಿಗತಿ ಬಗ್ಗೆ ಸ್ಥಳ ಭೇಟಿ ಮಾಡಿ ಪರಿಶೀಲಿಸಿದ್ದು ಸ್ವಂತ ಕಟ್ಟಡ ಆಗುವವರೆಗೆ ನಗರದಲ್ಲಿಯೇ ಬಾಡಿಗೆ ಕಟ್ಟಡ ಹುಡುಕಿ ಶಾಲೆ ಸ್ಥಳಾಂತರಿಸಲು ಸೂಚಿಸಿದ್ದೇನೆ
ಭೀಮಣ್ಣ ನಾಯ್ಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.