ADVERTISEMENT

ಮಾದರಿಯಾದ ‘ಶೌರ್ಯ’ ಸ್ವಯಂಸೇವಕರ ಕಾರ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 18:14 IST
Last Updated 16 ಅಕ್ಟೋಬರ್ 2024, 18:14 IST

ಶಿರಸಿ: ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ‘ಶೌರ್ಯ’ ಸ್ವಯಂ ಸೇವಕರು ಶಿಸ್ತು, ಬದ್ದತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ಸಮಾಜ ಸೇವೆಯಲ್ಲಿ ಮಾದರಿಯಾಗಿ ತೊಡಗಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಹೇಳಿದರು. 

ನಗರದಲ್ಲಿ ಶೌರ್ಯ ಸ್ವಯಂಸೇವಕರಿಗೆ ವಾರ್ಷಿಕ ತರಬೇತಿ ಕಾರ್ಯಕ್ರಮವಾದ ‘ಜೀವ ರಕ್ಷಣಾ ಕೌಶಲ ತರಬೇತಿ’ಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ವಿಪತ್ತು ನಿರ್ವಹಣಾ ಸೇವೆ ಮಾಡುವಾಗ ಮೊದಲು ತಮ್ಮ ರಕ್ಷಣೆಗೆ ಗಮನ ಕೊಡಬೇಕು. ಯೋಧರಂತೆ ಸಮಾಜದಲ್ಲಿ ನೆರವಿಗೆ ನಿಲ್ಲಬೇಕು ಎಂದರು.

ಜನ ಜಾಗೃತಿ ವೇದಿಕೆಯ ಸದಸ್ಯ ರಾಮು ಕಿಣಿ ಮಾತನಾಡಿ, ದೇಶ ಸೇವೆ ಮಾಡುವ ಯೋಗ ಎಲ್ಲರಿಗೂ ಲಭಿಸುವುದಿಲ್ಲ. ಶೌರ್ಯ ಕಾರ್ಯಕ್ರಮದ ಮೂಲಕ ಸಮಾಜದ ಕಾರ್ಯದಲ್ಲಿ ತೊಡಗಿಕೊಳ್ಳಲು ಧರ್ಮಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದು, ಇದರಲ್ಲಿ ಈ ಹಿಂದಿನಂತೆ ಪಲಾಪೇಕ್ಷೆ ಇಲ್ಲದೇ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.

ADVERTISEMENT

ತರಬೇತುದಾರ ಸಂತೋಷ ಡಿಸೋಜ ಅವರು, ವಿಪತ್ತು ಎದುರಾದಾಗ ಸನ್ನದ್ದತೆ, ಅಪಾಯ ಗುರುತಿಸುವಿಕೆ, ತಕ್ಷಣದ ಸ್ಪಂದನೆಗೆ ಅಗತ್ಯ ಕ್ರಮಗಳು, ಅಗತ್ಯ ಪರಿಕರಗಳು, ಪ್ರಥಮ ಚಿಕಿತ್ಸಾ ವಿಧಾನಗಳು, ಬೆಂಕಿ ಅವಗಢ ನಿರ್ವಹಣಾ ವಿಧಾನಗಳು, ಅಗ್ನಿ ನಂದಕಗಳ ವಿಧಗಳು, ಅಗ್ನಿ ನಂದಕದ ಬಳಕೆ, ರಸ್ತೆ ಅಪಘಾತದಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆ, ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ಕರೆಸುವ ವಿಧಾನ, ಗಾಯಾಳುಗಳನ್ನು ಕೊಂಡೊಯ್ಯುವ ವಿಧಾನ ಇತ್ಯಾದಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.

ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಗೌರಿ ನಾಯ್ಕ, ನಿಕಟಪೂರ್ವ ಅಧ್ಯಕ್ಷ ವಿವೇಕಾನಂದ ರಾಯ್ಕರ್, ಯೋಜನಾಧಿಕಾರಿ  ರಾಘವೇಂದ್ರ ನಾಯ್ಕ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್, ಶೌರ್ಯ ಘಟಕದ ಶಿಲ್ಪಾ ಭಾಸ್ಕರ್, ರಾಜೇಶ್ಹಾಗೂ ಇತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.