ADVERTISEMENT

ಸೋಂದಾ ಕಡೇಗುಂಟ: 800 ವರ್ಷಗಳ ಹಿಂದಿನ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:51 IST
Last Updated 11 ಜುಲೈ 2024, 15:51 IST
ಶಿರಸಿ ತಾಲ್ಲೂಕಿನ ಸೋಂದಾದ ಕಡೇಗುಂಟದಲ್ಲಿ ಬೆಳಕಿಗೆ ಬಂದ 800 ವರ್ಷಗಳ ವೀರಗಲ್ಲು ಶಾಸನ 
ಶಿರಸಿ ತಾಲ್ಲೂಕಿನ ಸೋಂದಾದ ಕಡೇಗುಂಟದಲ್ಲಿ ಬೆಳಕಿಗೆ ಬಂದ 800 ವರ್ಷಗಳ ವೀರಗಲ್ಲು ಶಾಸನ    

ಶಿರಸಿ: ತಾಲ್ಲೂಕಿನ ಸೋಂದಾದ ಕಡೇಗುಂಟದಲ್ಲಿ 800 ವರ್ಷಗಳ ಹಿಂದಿನ ವೀರಗಲ್ಲು ಶಾಸನ ಪತ್ತೆಯಾಗಿದೆ. ಕಡೇಗುಂಟದ ಶಶಾಂಕ್ ಮರಾಠೆ ಎಂಬುವರು ನೀಡಿದ ಮಾಹಿತಿಯ ಮೇರೆಗೆ ಇತಿಹಾಸಕಾರರಾದ ಲಕ್ಷ್ಮೀಶ್ ಸೋಂದಾ ಮತ್ತು ಪ್ರೊ. ನಾಗರಾಜ್ ರಾವ್ ಮೈಸೂರು ಅವರು ಅಧ್ಯಯನ ನಡೆಸಿದ್ದಾರೆ.

‘ಈ ವೀರಗಲ್ಲು ಶಾಸನವು ಹಳೆಗನ್ನಡ ಲಿಪಿ ಮತ್ತು ಭಾಷೆಯಿಂದ ಕೂಡಿದೆ. ಚಿತ್ರ, ಶಿಲ್ಪಗಳು ವಿಶೇಷವಾಗಿವೆ. ಅಕ್ಷರಗಳು ಮಸುಕಾಗಿವೆ. ಬನವಾಸಿ ನಾಡನ್ನು ಮಹಾಮಂಡಳೇಶ್ವರ ಆಳ್ವಿಕೆ ಮಾಡುವಾಗ ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಕುಜವಾರದಂದು ನಡೆದ ಯುದ್ಧದಲ್ಲಿ ಕಡೇಗುಂಟದ ವೀರನಾದ ಮಸಣ್ಣನು ವೀರ ಮರಣವನ್ನಪ್ಪಿದ. ಆತನ ನೆನಪಿನಲ್ಲಿ ಈ ಶಿಲೆ ನಿಲ್ಲಿಸಲಾಗಿದೆ ಎಂಬುದಾಗಿದೆ’ ಎಂದು ಇತಿಹಾಸಕಾರ ಡಾ.ಲಕ್ಷ್ಮೀಶ್ ಸೋಂದಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರಲ್ಲಿ ಕಾರವಾರ ಮತ್ತು ಮಣಲಿಯ ವೀರರಾದ ಕಲಗೌಡ ಮತ್ತು ಬೊಮ್ಮಗೌಡರ ಹೆಸರಿನ ಉಲ್ಲೇಖವು ಇದೆ. ಸೋದೆ ಅರಸರ ಕಾಲದ ಪೂರ್ವದ ಈ ಶಾಸನ ಸೋಂದಾದ ಕಡೇಗುಂಟದಲ್ಲಿ ಸಿಕ್ಕಿರುವುದು ಸೋದೆ ಅರಸರ ಪೂರ್ವದಲ್ಲೇ ಅಂದರೆ ಕ್ರಿ.ಶ 12ನೇ ಶತಮಾನದಲ್ಲೇ ಸೋಂದಾ ಒಂದು ಆಡಳಿತಾತ್ಮಕ ಪ್ರದೇಶವಾಗಿತ್ತು ಎಂಬುದನ್ನು ದೃಢಪಡಿಸಲು ಸಹಾಯಕವಾಗಿದೆ ಮತ್ತು 12ನೇ ಶತಮಾನದಿಂದ ಇಂದಿನವರೆಗೂ ‘ಕಡೆಗುಂಟ’ ಶಬ್ದ ಪ್ರಯೋಗ ಬದಲಾಗದೆ ಹಾಗೆ ಉಳಿದಿರುವುದು ವಿಶೇಷವಾಗಿದೆ. ಇಲ್ಲಿರುವ ರಾಮಲಿಂಗೇಶ್ವರ ಗುಡಿ ಕೂಡ ಪುರಾತನವಾಗಿದ್ದು ಇದು ಕೂಡ 800 ವರ್ಷಗಳ ಹಿಂದೆಯೇ ನಿರ್ಮಾಣವಾಗಿತ್ತು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.