ADVERTISEMENT

ಪ್ರವಾಹದಲ್ಲಿ ಮುಳುಗುವ ಜಮೀನಿನಲ್ಲಿ ರೈತನ ಸಾಧನೆ: ಮಿಶ್ರ ಬೇಸಾಯದಲ್ಲಿ ಲಕ್ಷ ಆದಾಯ

ರಾಜೇಂದ್ರ ಹೆಗಡೆ
Published 7 ಜೂನ್ 2024, 7:10 IST
Last Updated 7 ಜೂನ್ 2024, 7:10 IST
ಶಿರಸಿ ತಾಲ್ಲೂಕಿನ ಬನವಾಸಿಯ ಕೃಷಿಕ ಸುಭಾಷ್ ಕಾಟೇನಹಳ್ಳಿ ಜಮೀನಿನ ಕಾರ್ಯದಲ್ಲಿ ನಿರತರಾಗಿರುವುದು
ಶಿರಸಿ ತಾಲ್ಲೂಕಿನ ಬನವಾಸಿಯ ಕೃಷಿಕ ಸುಭಾಷ್ ಕಾಟೇನಹಳ್ಳಿ ಜಮೀನಿನ ಕಾರ್ಯದಲ್ಲಿ ನಿರತರಾಗಿರುವುದು   

ಶಿರಸಿ: ಪ್ರತಿ ವರ್ಷ ಮಳೆಗಾಲದಲ್ಲಿ ವರದಾ ನದಿ ಪ್ರವಾಹ ನೀರಿನಲ್ಲಿ ಮುಳುಗೇಳುವ ಜಮೀನಿನಲ್ಲಿ ಮಿಶ್ರ ಬೇಸಾಯ ವ್ಯವಸ್ಥೆಯಡಿ ಕೃಷಿ ಮಾಡುತ್ತಿರುವ ಸಿವಿಲ್ ಎಂಜಿನಿಯರ್ ಪದವೀಧರನೊಬ್ಬ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಪಡೆದು ಕೃಷಿಕರೆಲ್ಲರಿಗೆ ಮಾದರಿ ಎನಿಸಿದ್ದಾರೆ. 

ತಾಲ್ಲೂಕಿನ ಬನವಾಸಿಯ ಯುವ ಕೃಷಿಕ ಸುಭಾಷ್ ವೀರಪ್ಪ ಕಾಟೇನಹಳ್ಳಿ 2018ರಿಂದ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ಹಾಗೂ ಸಹೋದರನ ಅಕಾಲಿಕ ನಿಧನದಿಂದ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರ ಬಿಟ್ಟು ಮನೆಗೆ ಬಂದ ಸುಭಾಷ್ ಅವರು ಗುಡ್ನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂತ್ರಾಜಿಯಲ್ಲಿ ಪಿತ್ರಾರ್ಜಿತವಾಗಿ ಬಂದ 17 ಎಕರೆ 20 ಗುಂಟೆ ಜಮೀನಿನಲ್ಲಿ ಕೃಷಿ ವೃತ್ತಿ ಮುಂದುವರೆಸಿದ್ದಾರೆ.

10 ಎಕರೆ ಅಡಿಕೆ, 6 ಎಕರೆ ಜಾಗದಲ್ಲಿ ಅಡಿಕೆ ಹಾಗೂ ಅನಾನಸ್, ಒಂದೂವರೆ ಎಕರೆಯಲ್ಲಿ ಭತ್ತ ಬೆಳೆದು ವಾರ್ಷಿಕ ಅಂದಾಜು ₹50 ಲಕ್ಷ ಆದಾಯ ಕಂಡುಕೊಳ್ಳುತ್ತಿದ್ದಾರೆ. 

ADVERTISEMENT

‘ವರದಾ ನದಿಗೆ ಪ್ರವಾಹ ಬಂದಾಗ ಸಂಪೂರ್ಣ ಜಮೀನು ಮುಳುಗಡೆಯಾಗುತ್ತದೆ. ಆರಂಭದ ವರ್ಷಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆಗ ಪ್ರವಾಹ ತಗ್ಗದಿದ್ದಾಗ ಭತ್ತದ ಸಸಿಗಳು ಕೊಳೆತು ಸಮಸ್ಯೆಯಾಗುತ್ತಿತ್ತು. ಹಲವು ವರ್ಷ ಭತ್ತ ಬೆಳೆದು ಕೈಸುಟ್ಟುಕೊಂಡ ನಂತರ ಅಡಿಕೆ ಬೆಳೆಗೆ ಮಹತ್ವ ನೀಡಲಾಗಿದೆ. ಪ್ರವಾಹ ನೀರು ಸಮಸ್ಯೆ ನೀಡದಷ್ಟು ಎತ್ತರ ಬೆಳೆಯುವ ಜತೆ ಧಾರಣೆಯೂ ಉತ್ತಮ ಇರುವ ಕಾರಣ ಅಡಿಕೆ ಕೃಷಿ ಮಾಡಲಾಗಿದೆ. ವಾಣಿಜ್ಯ ಬೆಳೆ ಅನಾನಸ್ ಕೂಡ ಪ್ರವಾಹಕ್ಕೆ ಜಗ್ಗದ ಕಾರಣ ಆರು ಎಕರೆ ಅಡಿಕೆಯ ಜತೆ ಮಿಶ್ರಬೆಳೆಯಾಗಿ ಬೆಳೆಸಿದ್ದೇನೆ. ವರ್ಷಕ್ಕೆ ಸರಾಸರಿ 100 ಟನ್ ಹಣ್ಣು ಲಭಿಸುತ್ತಿದೆ. ಎತ್ತರದ ಗದ್ದೆಯಲ್ಲಿ ಮನೆ ಬಳಕೆಗೆ ಪೂರಕವಾಗಿ ಭತ್ತ ಬೆಳೆಯುತ್ತಿದ್ದೇನೆ. ಹೀಗಾಗಿ ಪ್ರವಾಹ ಬಂದರೂ ಹೆಚ್ಚಿನ ಸಮಸ್ಯೆ ಆಗುವುದಿಲ್ಲ’ ಎಂದು ತಿಳಿಸಿದರು. 

‘ಅಡಿಕೆ ಮದ್ದು ಸಿಂಪಡಣೆ, ಕೊನೆ ಕೊಯ್ಲು, ಅನಾನಸ್ ಕೊಯ್ಲು, ಭತ್ತ ಕಟಾವು ಸೇರಿ ಆಯಾ ಹಂಗಾಮಿನಲ್ಲಿ ಕೆಲಸಗಾರರನ್ನು ನೆಚ್ಚಿಕೊಳ್ಳುತ್ತೇನೆ. ದಿನದ ಕೆಲಸ ಸ್ವತಃ ಮಾಡುತ್ತೇನೆ. ತೆಂಗಿನ ತ್ಯಾಜ್ಯ ಪುಡಿ ಮಾಡುವ ಯಂತ್ರ, ವೀಡ್ ಕಟರ್, ಟ್ರ್ಯಾಕ್ಟರ್, ಪವರ್ ಸ್ಪೇಯರ್ ಸೇರಿ ವಿವಿಧ ಯಂತ್ರಗಳ ಬಳಕೆಯಿಂದ ಕೂಲಿ ಮೇಲಿನ ಅವಲಂಬನೆಯೂ ಕಡಿಮೆಯಾಗಿದೆ’ ಎನ್ನುವ ಮಾತು ಅವರದ್ದು.

‘ಅನಾನಸ್‌ಗೆ ದರ ಏರಿಳಿತವಾದರೂ ಅಡಿಕೆ ದರ ಸ್ಥಿರವಾಗಿದೆ. ಎಕರೆಯೊಂದಕ್ಕೆ ವಾರ್ಷಿಕ ₹3 ಲಕ್ಷ ಆದಾಯ ಪಡೆಯುತ್ತಿದ್ದು, ಶೇ 30ರಷ್ಟನ್ನು ಕೃಷಿಗಾಗಿ ಬಳಸುತ್ತಿದ್ದೇನೆ. ಒಂದು ವರ್ಷ ರಾಸಾಯನಿಕ ಗೊಬ್ಬರ, ಮಾರನೇ ವರ್ಷ ದಡ್ಡಿ ಗೊಬ್ಬರ ಹಾಕಿ ಭೂಮಿಯ ಆರೋಗ್ಯ ಕಾಪಾಡಿಕೊಳ್ಳುತ್ತೇನೆ’ ಎಂದು ಹೇಳುತ್ತಾರೆ ಅವರು.  

‘ಜಮೀನಿನಲ್ಲಿ 50 ಲಕ್ಷ ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಹೊದಿಕೆ ಮುಚ್ಚಿದ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಇಡೀ ಜಮೀನಿಗೆ ಇದರಿಂದ ನೀರು ಹಾಯಿಸುತ್ತೇನೆ. ಒಂದು ಕೊಳವೆಬಾವಿಯಿದ್ದು, ಅದರಿಂದ ಕೃಷಿ ಹೊಂಡಕ್ಕೆ ನೀರು ಪೂರೈಸಿಕೊಳ್ಳುತ್ತೇನೆ. ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಯಿಂದ ನೀರಿನ ಮಿತ ಬಳಕೆ ಸಾಧ್ಯವಾಗಿದೆ’ ಎಂದು ವಿವರಿಸಿದರು.  

ಸುಭಾಷ್ ಅವರ ಜಮೀನಿನಲ್ಲಿರುವ 50 ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ 
ವಿದ್ಯೆ ಜೀವನಕ್ಕೆ ಅವಶ್ಯ. ಜೊತೆಗೆ ಪರಂಪರಾಗತವಾಗಿ ಬಂದ ಕೃಷಿಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭೂಮಿ ನಂಬಿದರೆ ಯಾರಿಗೂ ಮೋಸವಿಲ್ಲ.
-ಸುಭಾಷ್ ಕಾಟೇನಹಳ್ಳಿ, ಕೃಷಿಕ
ಸಮಗ್ರ ಕೃಷಿ ಪದ್ದತಿಯ ಭಾಗಗಳಾದ ಕೃಷಿ ಹೊಂಡ ಹಸಿರೆಲೆ ಗೊಬ್ಬರ ಬಳಕೆ ಎರೆಹುಳು ತೊಟ್ಟಿ ಇನ್ನಿತರ ವಿಭಾಗಗಳನ್ನು ಅಳವಡಿಸಿಕೊಂಡಿರುವ ಸುಭಾಷ್ ಅವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಯಂತ್ರೋಕರಣಗಳನ್ನೂ ಖರೀದಿಸಿ ಛಲ ಬಿಡದೆ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ
-ನಂದೀಶ ಆರ್, ಕೃಷಿ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.