ಶಿರಸಿ: ನಿತ್ಯ ಸಂಧ್ಯಾ ಕಾಲದಲ್ಲಿ ಪೂಜೆ, ಸ್ತೋತ್ರ ಪಠಣ, ಪ್ರಾಣಾಯಾಮ, ಯೋಗಾಸನ ಮಾಡುವುದರಿಂದ ವ್ಯವಹಾರ, ಆರೋಗ್ಯ ಪ್ರಗತಿ ಸಾಧಿಸುತ್ತದೆ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀಯಲ್ಲಿ ಚಾತುರ್ಮಾಸ್ಯ ವೃತಾಚರಣೆಯ ಹಿನ್ನೆಲೆಯಲ್ಲಿ ಚಿನ್ನಾಪುರ ಸೀಮೆಯ ಮೇಲ್ತರ್ಪು, ಕೆಳತರ್ಪಿನ ಶಿಷ್ಯರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಬಹಳಷ್ಟು ಜನರಿಗೆ ಅವರ ಆರೋಗ್ಯ ಹಾಳಾಗಲು ಸಂಧ್ಯಾ ಕಾಲದಲ್ಲಿ ದೇವರ ಪೂಜೆ, ಸ್ತೋತ್ರ ಪಠಣ, ಸಹಸ್ರನಾಮ, ಪ್ರಾಣಾಯಾಮ, ಯೋಗಾಸನ ಮಾಡದೇ ಇರುವುದೇ ಕಾರಣ. ಪ್ರಾಣಾಯಾಮ, ಆಸನ, ಪೂಜೆ ದಿನದ ಎರಡೂ ಕಾಲದಲ್ಲಿ ಮಾಡಬೇಕು ಎಂದು ಹೇಳಿದರು.
ಮನಸ್ಸು ದೇವರಲ್ಲಿ ಏಕಾಗ್ರತೆಗೊಳ್ಳುವುದು ಸಂಧ್ಯಾ ಕಾಲದಲ್ಲಿ ಹೆಚ್ಚು. ಒಂದೊಂದು ಕಾಲವು ಈ ದೇಹದ ಮೇಲೆ ಬೇರೆ ಬೇರೆ ಪರಿಣಾಮ ಉಂಟು ಮಾಡುತ್ತದೆ. ಅದು ಮನಸ್ಸಿನ ವರ್ತನೆಗೂ ಕಾರಣವಾಗುತ್ತದೆ. ಸಂಧ್ಯಾ ಕಾಲದಲ್ಲಿ ಏಕಾಗ್ರತೆಗೆ ಅನುಕೂಲತೆಗೆ ಇರುತ್ತದೆ. ಆದ್ದರಿಂದಲೇ ಸಂಧ್ಯಾ ವಂದನೆ ಎಂಬುದು ಬಂದಿದೆ ಎಂದು ವಿವರಿಸಿದರು.
ಬೆಳಗಿನ ಪೂಜೆ ಇಡೀ ದಿನದ ವ್ಯವಹಾರದ ಮೇಲೆ ಒಳ್ಳೆಯ ಪರಿಣಾಮ ಆಗುತ್ತದೆ. ನಮ್ಮ ಮನಸ್ಥಿಯತಿ ಉತ್ತಮ ಆಗಿರುತ್ತದೆ. ವ್ಯವಹಾರ ಮಾಡಲು ಚುರುಕುತನ ಬರುತ್ತದೆ. ನಿದ್ರಾ ಹೀನತೆ ತಪ್ಪಲು ಸಂಜೆಯ ಸಂಧ್ಯಾ ಕಾಲದ ಜಪಾನುಷ್ಠಾನ ನೆರವಾಗುತ್ತದೆ ಎಂದರು.
ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ನಾರಾಯಣ ಹೆಗಡೆ ಬೀಗಾರ, ತಿಮ್ಮಣ್ಣ ಭಟ್ ನಡಿಗೆಮನೆ, ರವೀಂದ್ರ ಕೋಮಾರ್ ಸೂತ್ರೆಮನೆ, ಶ್ರೀಪಾದ ಭಟ್ ಕಳಚೆ, ಆರ್.ಎಸ್.ಹೆಗಡೆ ಭೈರುಂಬೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.