ADVERTISEMENT

ಶಿರಸಿ: ನಿರ್ಲಕ್ಷ್ಯದಿಂದ 1957ರಲ್ಲಿ ನಿರ್ಮಿಸಲಾಗಿರುವ ಸೇತುವೆ ಸೇತುವೆ ಶಿಥಿಲ

ರಾಜೇಂದ್ರ ಹೆಗಡೆ
Published 14 ನವೆಂಬರ್ 2024, 6:24 IST
Last Updated 14 ನವೆಂಬರ್ 2024, 6:24 IST
ಶಿರಸಿ, ಸಿದ್ದಾಪುರ ತಾಲ್ಲೂಕಿನ ಗಡಿಯಲ್ಲಿ ಶಿಥಿಲಾವಸ್ಥೆಯತ್ತ ಸಾಗುತ್ತಿರುವ ಸರಕುಳಿ ಸೇತುವೆ
ಶಿರಸಿ, ಸಿದ್ದಾಪುರ ತಾಲ್ಲೂಕಿನ ಗಡಿಯಲ್ಲಿ ಶಿಥಿಲಾವಸ್ಥೆಯತ್ತ ಸಾಗುತ್ತಿರುವ ಸರಕುಳಿ ಸೇತುವೆ   

ಶಿರಸಿ: ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಗಡಿ ಭಾಗವಾದ ಸರಕುಳಿಯಲ್ಲಿ ಅಘನಾಶಿನಿ ನದಿಗೆ ನಿರ್ಮಿಸಲಾಗಿರುವ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಮರ್ಪಕ ನಿರ್ವಹಣೆ ಕಾಣದೇ ಶಿಥಿಲಾವಸ್ಥೆ ತಲುಪಿದೆ. 

ಶಿರಸಿ ತಾಲ್ಲೂಕಿನ ಕುಮಟಾ ರಸ್ತೆಯಿಂದ ಸಿದ್ದಾಪುರ ತಾಲ್ಲೂಕಿನ ಅಣಲೇಬೈಲ್, ಗೋಳಿಮಕ್ಕಿ ಭಾಗದ ನೂರಾರು ಹಳ್ಳಿಗಳಿಗೆ ಈ ಸೇತುವೆಯೇ ಪ್ರಧಾನ ಸಂಪರ್ಕ ಮಾರ್ಗವಾಗಿದೆ. ಕೊಳಗಿಬೀಸ್‌ನಿಂದ ಹಾರ್ಸಿಕಟ್ಟಾ, ಬಿದ್ರಕಾನ, ಕೊಲಸಿರ್ಸಿ ಮೂಲಕ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರತಿ ದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಇಲ್ಲಿಯ ತಟ್ಟಿಕೈ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳು, ಗೋಳಿಮಕ್ಕಿ ತಟ್ಟಿಕೈ ಭಾಗದ ಕಾಲೇಜು ವಿದ್ಯಾರ್ಥಿಗಳು ಪ್ರತಿ ದಿನ ಇದೇ ಸೇತುವೆ ದಾಟಿ ಶಿರಸಿಗೆ ಬರಬೇಕಾಗಿದೆ. ಒಂದೊಮ್ಮೆ ಈ ಸೇತುವೆ ಸಂಪೂರ್ಣ ಶಿಥಿಲಗೊಂಡು ವಾಹನ ಸಂಚಾರ ಸ್ಥಗಿತವಾದರೆ ಗೋಳಿಮಕ್ಕಿ, ಹೇರೂರು ಭಾಗದ ಸಾರ್ವಜನಿಕರು ಹೆಗ್ಗರಣಿ, ನಿಲ್ಕುಂದ ಮೂಲಕ ತೆರಳಿ ಅಮ್ಮಿನಳ್ಳಿ ಬಳಿ ಕುಮಟಾ ರಸ್ತೆಗೆ ಬಂದು ಶಿರಸಿಗೆ ತಲುಪಬೇಕಿದೆ. 

‘ಅಬ್ಬರದ ಮಳೆಯ ವೇಳೆ ಅಘನಾಶಿನಿ ನದಿ ಪ್ರವಾಹ ಸ್ಥಿತಿ ತಲುಪಿ ತುಂಬಿ ಹರಿಯುತ್ತದೆ. ಸರಕುಳಿ ಸೇತುವೆಗೆ ನೀರು ಬಡಿದು ಇಲ್ಲಿಯ ಸುತ್ತಮುತ್ತಲೆಲ್ಲ ವ್ಯಾಪಿಸಿಕೊಂಡು, ಮಹಿಷಾಸುರ ಮರ್ಧಿನಿ ದೇವಸ್ಥಾನದವರೆಗೂ ನೀರು ತುಂಬಿಕೊಳ್ಳುತ್ತದೆ. ದಟ್ಟ ಕಾನನದಲ್ಲಿ ಹರಿದುಬರುವ ಅಘನಾಶಿನಿ,  ಒಣಗಿ ಬಿದ್ದಿದ್ದ ಬೃಹತ್ ಮರದ ತುಂಡುಗಳನ್ನು ತನ್ನ ಪ್ರವಾಹದೊಂದಿಗೆ ಹೊತ್ತು ತರುವುದರಿಂದ ಸರಕುಳಿ ಸೇತುವೆಗೆ ಪ್ರತಿ ವರ್ಷ ಧಕ್ಕೆಯಾಗುತ್ತಲೇ ಇದೆ. ಸೇತುವೆಯ ಸಿದ್ದಾಪುರ ತಾಲ್ಲೂಕಿನ ಭಾಗದಲ್ಲಿ ಪಿಚಿಂಗ್ ಕೊರೆಯದಂತೆ ತಡೆಗೋಡೆ ನಿರ್ಮಿಸಲಾಗಿದ್ದರೆ, ಶಿರಸಿ ತಾಲ್ಲೂಕಿನ ಕಡೆ ಈ ತಡೆಗೋಡೆ ನಿರ್ಮಿಸಿಲ್ಲ. ಇದರಿಂದಾಗಿ ಇಲ್ಲಿ ರಸ್ತೆಯ ಅಂಚಿನವರೆಗೂ ಬೃಹತ್ ಕೊರಕಲು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಆತಂಕವೂ ಇದೆ’ ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ಆರು ವರ್ಷಗಳ ಹಿಂದೆ ಸೇತುವೆ ಐದು ಕಂಬಗಳಲ್ಲಿ ಒಂದು ಕಂಬದ ಕಲ್ಲುಗಳು ಕಿತ್ತು ಹಾನಿ ಉಂಟಾಗಿತ್ತು. ಆ ವರ್ಷ ಲೋಕೋಪಯೋಗಿ ಇಲಾಖೆ ಈ ಕಂಬವನ್ನು ಸರಿಪಡಿಸಿ ಕಂಬದ ತಳ ಭಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ನಿರ್ಮಿಸಿ ಭದ್ರಪಡಿಸಿದೆ. ಆದರೆ, ಉಳಿದ ನಾಲ್ಕು ಕಂಬಗಳು ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಬುಡ ಸಡಿಲವಾಗತೊಡಗಿದೆ. ಸೇತುವೆ ಅಡಿಭಾಗದಲ್ಲಿ ಸಿಮೆಂಟ್ ಉದುರಲಾರಂಭಿಸಿ ಕಬ್ಬಿಣದ ಸರಳು ಕಾಣಿಸಲಾರಂಭಿಸಿದೆ’ ಎನ್ನುತ್ತಾರೆ ಗ್ರಾಮಸ್ಥರು. 

‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕರಾಗಿದ್ದ ಅವಧಿ 1957ರಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಸಾಮಾಜಿಕ ಹೋರಾಟಗಾರ, ತಟ್ಟಿಕೈನ ರಾಮಚಂದ್ರ ಅಣ್ಣಯ್ಯ ಭಟ್ ಅವರ ವಿಶೇಷ ಯತ್ನದ ಫಲವಾಗಿ ಈ ಸೇತುವೆ ಮಂಜೂರಾಗಿತ್ತು. ಅದೇ ವೇಳೆ ಮಾನಿಹೊಳೆಗೆ ಸೇತುವೆ ನಿರ್ಮಿಸಲಾಗಿತ್ತಾದರೂ ಕಳೆದ ಕೆಲ ವರ್ಷಗಳ ಹಿಂದೆ ಆ ಸೇತುವೆ ಕುಸಿತವಾಗಿ ಈಗ ಹೊಸ ಸೇತುವೆ ನಿರ್ಮಾಣಗೊಂಡಿದೆ. ಸರ್ಕುಳಿ ಸೇತುವೆಯನ್ನು ರಿಪೇರಿಗೊಳಿಸಿದರೆ ಹೊಸ ಸೇತುವೆ ಮಂಜೂರಾಗುವವರೆ ರಸ್ತೆ ಸಂಪರ್ಕಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬಹುದು’ ಎಂಬುದು ಇಲ್ಲಿಯ ಸಾರ್ವಜನಿಕರ ಅಭಿಪ್ರಾಯ.

ಈ ವರ್ಷ ರಿಪೇರಿ ಕಾರ್ಯ ನಡೆಸದಿದ್ದರೆ ಇನ್ನಷ್ಟು ಸಿಮೆಂಟ್ ಉದುರಿ ಸೇತುವೆ ಇನ್ನಷ್ಟು ಶಿಥಿಲವಾಗಲಿದೆ. ಈ ಸೇತುವೆ ಮೇಲೆ ಸಂಚಾರ ಭಯ ಹುಟ್ಟಿಸುತ್ತಿದೆ
ನಾರಾಯಣ ಹೆಗಡೆ ಗ್ರಾಮಸ್ಥ
ಸರಕುಳಿ ಸೇತುವೆಯ ಪಿಚ್ಚಿಂಗ್ ತಡೆಗೋಡೆ ಮತ್ತು ರಿಪೇರಿ ಕಾರ್ಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸೇತುವೆಯ ಅಡಿಯಲ್ಲಿ ಸಿಮೆಂಟ್ ಜಾಕೆಟ್ ಮಾಡಿ ನಿರ್ವಹಣೆ ಮಾಡಲಿದ್ದೇವೆ. ಹೊಸ ಸೇತುವೆ ಮಂಜೂರಾಗುವವರೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಶ
ಶಿಕಾಂತ ಗೌಡ ಸಿದ್ದಾಪುರ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.