ಶಿರಸಿ: ಕಂದಾಯ ಭೂಮಿ ವಿಭಜಿಸಿ ಅನಧಿಕೃತ ಬಡಾವಣೆ, ನಿವೇಶನಗಳಾಗಿ ಮಾರುತ್ತಿರುವ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದು, ಇಂಥ ಅನಧಿಕೃತ ನಿವೇಶನ ಖರೀದಿ ಮಾಡಿದ 700ಕ್ಕೂ ಹೆಚ್ಚು ಆಸ್ತಿ ಮಾಲೀಕರು ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಸಿಗದೆ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ನಗರ ವ್ಯಾಪ್ತಿಯ ಹಲವೆಡೆ ಬಡಾವಣೆ, ನಿವೇಶನಗಳು, ನಿವೇಶನಗಳಲ್ಲಿ ನಿರ್ವಿುಸಿರುವ ಮನೆಗಳು ಅಥವಾ ಕೃಷಿ ಜಮೀನಿನಲ್ಲಿ ಕಟ್ಟಡ ಕಟ್ಟಲು ಅನಧಿಕೃತ ಜಾಗವನ್ನು ಮಾರಲಾಗುತ್ತಿದೆ. ವಿಭಜಿಸಿದ ಭೂಮಿಯನ್ನು ಅಧಿಕೃತಗೊಳಿಸಲು, ವಿನ್ಯಾಸ ಅನುಮೋದನೆಗಾಗಿ ಪ್ರಾಧಿಕಾರದ ಕಚೇರಿಗೆ ಸಲ್ಲಿಸಲಾಗುತ್ತಿದೆ. ಇಂತಹ ಜಮೀನುಗಳಿಗೆ ನಗರ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯುವ ಪ್ರಸ್ತಾವನೆಗಳು ತಿರಸ್ಕೃತಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ, ಇದ್ಯಾವುದರ ಪರಿವೆಯಿಲ್ಲದ ಜನರು ಭೂಮಾಲೀಕರು, ಮಧ್ಯವರ್ತಿಗಳಿಂದ ನಿವೇಶನ ಖರೀದಿಸಿ ಮೋಸ ಹೋಗುತ್ತಿದ್ದಾರೆ’ ಎಂಬುದು ಯೋಜನಾ ಪ್ರಾಧಿಕಾರದ ಅಧಿಕಾರಿಯೊಬ್ಬರ ಮಾತಾಗಿದೆ.
‘ಅನಧಿಕೃತ ನಿವೇಶನಗಳ ಮಾರಾಟ ಅಪರಾಧವಾಗಿದೆ. ಇದರಿಂದ ಸರ್ಕಾರಿ ಬೊಕ್ಕಸಕ್ಕೆ ನಷ್ಟ ಆಗುತ್ತದೆ. ಬಡಾವಣೆ ಮಾಡಿ ನಿವೇಶನ ಮಾರುವವರು ಪ್ರಾಧಿಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೂ ಜನತೆ ಅನುಮೋದನೆಯಾಗದ ನಿವೇಶನ ಖರೀದಿಸಿ ಪೇಚಿಗೆ ಸಿಲುಕುತ್ತಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ಅವರು.
‘ಯಾವುದೇ ಖಾಸಗಿ ಅಧಿಕೃತ ವಿನ್ಯಾಸವನ್ನು ರಚಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಕಲಂ 17ರಡಿಯಲ್ಲಿ ಮಾತ್ರ ಅವಕಾಶವಿದೆ. ನಿವೇಶನವಾಗಲು ನಗರ ಯೋಜನಾ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕಾಗುತ್ತದೆ. ನಿಯಮದ ಅನುಸಾರ ನಿಯಮಿತ ರಸ್ತೆ ಪರಿಚಲನೆ, ಅಗಲ, ಉದ್ಯಾನ, ಬಯಲು ಜಾಗ, ಸಾರ್ವಜನಿಕ ಸ್ಥಳ ಬೆಳವಣಿಗೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಷರತ್ತಿಗೊಳಪಟ್ಟು ನಗರ ಯೋಜನಾ ಪ್ರಾಧಿಕಾರವು ವಿನ್ಯಾಸವನ್ನು ಅನುಮೋದಿಸುತ್ತದೆ. ಆದರೆ, ಬಹುತೇಕ ನಿವೇಶನಗಳು ಭೂ ಮಾಫಿಯಾದವರ ಕೈಯಲ್ಲಿರುವುದರಿಂದ ಅವು ಅನಧಿಕೃತವಾಗಿದ್ದು, ಪ್ರಾಧಿಕಾರದ ಒಪ್ಪಿಗೆ ಪಡೆಯದೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಮೌಲ್ಯಕ್ಕೆ ಭೂಮಿ, ನಿವೇಶನ ಮಾರುತ್ತಿದ್ದಾರೆ’ ಎಂಬುದು ನಗರದ ಸಾರ್ವಜನಿಕರ ಅಭಿಪ್ರಾಯ.
‘ತಾಲ್ಲೂಕಿನಲ್ಲಿ ಇಂತಹ ಹಲವು ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಶಿರಸಿ ನಗರ ಯೋಜನಾ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಪ್ರಾಧಿಕಾರದ ಅನುಮೋದನೆ ಪಡೆಯದೆ ಅನಧಿಕೃತ ಬಡಾವಣೆ ನಿರ್ವಿುಸುತ್ತಿರುವ ಮಾಲೀಕರ ವಿರುದ್ಧ ಕ್ರಮಜರುಗಿಸಲು ಅವಕಾಶವು ಇದೆ. ಅನಧಿಕೃತ ಬಡಾವಣೆಯನ್ನು ರಚಿಸುತ್ತಿರುವ ವಿನ್ಯಾಸದ ಮಾಲೀಕರು, ಅಭಿವೃದ್ಧಿದಾರರು, ಜಿಪಿಎ ಹೋಲ್ಡರ್, ನಿವೇಶನದ ಮಾಲೀಕರು ಜನರಿಗೆ ಮೋಸ ಮಾಡಬಾರದು. ಒಂದೊಮ್ಮೆ ಇಂತಹ ಪ್ರಕರಣಗಳು ಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಪ್ರಾಧಿಕಾರ ಹಿಂಜರಿಯುವುದಿಲ್ಲ’ ಎಂಬುದು ಪ್ರಾಧಿಕಾರದ ಅಧಿಕಾರಿಯೊಬ್ಬರ ಮಾತು.
ಸೌಲಭ್ಯ ಇರುವ ಬಡಾವಣೆಯೆಂದು ನಿವೇಶನ ಖರೀದಿಸಲಾಗಿತ್ತು. ಆದರೆ ಬಡಾವಣೆ ಯೋಜನಾ ಪ್ರಾಧಿಕಾರದ ಅನುಮತಿ ಪಡೆದಿಲ್ಲ ಎಂಬುದು ಆಘಾತ ತಂದಿದೆ. ಸಾಕಷ್ಟು ವರ್ಷದ ಶ್ರಮದ ಹಣವನ್ನು ನಿವೇಶನಕ್ಕಾಗಿ ಹಾಕಿದರೂ ಅನಧಿಕೃತ ನಿವೇಶನವನ್ನೇ ಪಡೆದಂತಾಗಿದೆಕೆ.ಆರ್.ನಾಯಕ ನಿವೇಶನ ಖರೀದಿದಾರ
ಯಾವುದೇ ನಿವೇಶಗಳನ್ನು ಖರೀದಿಸುವ ಮುನ್ನ ಪ್ರಾಧಿಕಾರದಿಂದ ಅನುಮೋದನೆ ಆಗಿರುವುದನ್ನು ಖಚಿತ ಪಡಿಸಿಕೊಂಡು ನಿವೇಶನಗಳನ್ನು ಖರೀದಿಸಬೇಕು. ಖರೀದಿಸಿ ಮೋಸ ಹೋದರೆ ಅಥವಾ ನಷ್ಟಕ್ಕೊಳಗಾದಲ್ಲಿ ಪ್ರಾಧಿಕಾರವು ಜವಾಬ್ದಾರವಲ್ಲಜಗದೀಶ ಗೌಡ ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.