ಶಿರಸಿ: ಕುಡಿಯುವ ನೀರಿನ ಕೊರತೆಯ ಕಾರಣಕ್ಕೆ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳ ದರ ವಿಪರೀತ ಏರಿಕೆಯಾಗಿದೆ. ಇದು ಸಾರ್ವಜನಿಕರ ಜೇಬಿಗೆ ಕತ್ತರಿಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ.
ಬೇಸಿಗೆ ಆರಂಭಕ್ಕೆ ₹ 700ರಿಂದ ₹ 800 ಇದ್ದ ನಾಲ್ಕು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ದರ ಏಪ್ರಿಲ್ ಆರಂಭದಲ್ಲಿ ಸಾವಿರದ ಗಡಿ ತಲುಪಿತ್ತು. ದಿನ ಕಳೆದಂತೆ ನಗರಸಭೆ ಪೂರೈಸುವ ನೀರು ಕಡಿಮೆಯಾಗಿದೆ. ಕೆಲವೆಡೆ 15 ದಿನಗಳಿಂದ ನೀರು ನೀಡಿಲ್ಲ. ಹೀಗಾಗಿ ಖಾಸಗಿ ಟ್ಯಾಂಕರ್‌ಗಳು ಬೇಕಾಬಿಟ್ಟಿ ದರ ಏರಿಸಿ ಹೆಚ್ಚು ನೀರು ಪೂರೈಸುತ್ತಿವೆ. ಪ್ರತಿ ನಾಲ್ಕು ಸಾವಿರ ಲೀಟರ್ ಟ್ಯಾಂಕರ್‌ಗೆ ₹ 1600ರಿಂದ ₹ 1900 ನೀಡಬೇಕಿದೆ. ನಗರದಲ್ಲಿ ನಿತ್ಯ ನೂರಾರು ಟ್ಯಾಂಕರ್ ನೀರು ಪೂರೈಕೆ ನಿರಂತರವಾಗಿದೆ. ನಗರಸಭೆ ಟ್ಯಾಂಕರ್ ಮೂಲಕ ಪೂರೈಸುವ ನೀರಿನ ಪ್ರಮಾಣ ಅತ್ಯಲ್ಪವಾಗಿದ್ದು, ಖಾಸಗಿ ಟ್ಯಾಂಕರ್ ಮೂಲಕ ನೀರು ಖರೀದಿ ನಗರ ನಿವಾಸಿಗಳ ಅನಿವಾರ್ಯವಾಗಿದೆ.
‘ನಗರಸಭೆಗೆ ನೀರಿನ ಕರ ತಪ್ಪದೆ ತುಂಬುತ್ತೇವೆ. ಆದರೆ ನೀರು ಸರಿಯಾಗಿ ನೀಡುತ್ತಿಲ್ಲ. ಹಲವು ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರು ಕೂಡ ವಿತರಿಸದೇ ಜನರ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಇರುವ ಬಾವಿಗಳು ನೀರು ಕಳೆದುಕೊಂಡಿವೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮವಿದ್ದು, ಹೇಳಿದಷ್ಟು ಹಣ ನೀಡಿ ಅನಿವಾರ್ಯವಾಗಿ ಟ್ಯಾಂಕರ್ ನೀರು ಖರೀದಿಸುವಂತಾಗಿದೆ’ ಎಂದು ಮರಾಠಿಕೊಪ್ಪದ ವಸಂತ ನಾಯ್ಕ ಹೇಳಿದರು.
ಇದರ ಜತೆ, ನಗರದ ಬಸ್ ನಿಲ್ದಾಣದ ಸಮೀಪವಿರುವ ಶುದ್ಧ ನೀರಿನ ಘಟಕದಲ್ಲಿ ನೀರಿನ ಕೊರತೆ ಎದುರಾಗಿದೆ. ಇದರಿಂದ ಪ್ರಯಾಣಿಕರು ಆಗಾಗ ಬಂದು ಖಾಲಿಯಾಗಿರುವ ನೀರಿನ ಘಟಕ ನೋಡಿ ಹೋಗುವ ಪರಿಸ್ಥಿತಿ ಬಂದಿದೆ. ‘ನೀರು ತುಂಬಿ ಎರಡು ತಾಸುಗಳಲ್ಲಿ ಈ ಘಟಕದ ನೀರು ಖಾಲಿಯಾಗುತ್ತಿದೆ. ಹೀಗಾಗಿ ಜನರು ಇಡೀ ದಿನ ನೀರಿಲ್ಲದೇ ತೊಂದರೆ ಎದುರಿಸಬೇಕಾಗುತ್ತಿದೆ’ ಎಂಬುದು ಪ್ರಯಾಣಿಕರೊಬ್ಬರ ದೂರಾಗಿದೆ.
ವಾರದಿಂದೀಚೆಗೆ ಖಾಸಗಿ ಟ್ಯಾಂಕರ್ ನೀರಿನ ದರ ಏಕಾಏಕಿ ದುಪ್ಪಟ್ಟಾಗಿದೆ. ಇವುಗಳ ದರ ನಿಯಂತ್ರಣದತ್ತ ನಗರಾಡಳಿತ ನಿಗಾ ವಹಿಸಬೇಕುವನಜಾಕ್ಷಿ ಶೇಟ್ ನಗರ ನಿವಾಸಿ
ನಗರಸಭೆಯಿಂದ ಆಯಾ ಮನೆಗಳಿಗೆ ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ. ಹೆಚ್ಚುವರಿ ನೀರು ಬೇಕಾದರೆ ಖರೀದಿ ಅನಿವಾರ್ಯಕಾಂತರಾಜ್ ಪೌರಾಯುಕ್ತ ನಗರಸಭೆ ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.