ADVERTISEMENT

ಮುಡಗೇರಿಯಲ್ಲಿ ‘ಸೋದೆ ಸಾಮ್ರಾಜ್ಯ’ದ ಕುರುಹು

ಇತಿಹಾಸ ಸಾರುವ ಅವಸಾನದ ಅಂಚಿನ ಕೋಟೆ, ಬಾವಿ

ಗಣಪತಿ ಹೆಗಡೆ
Published 27 ಅಕ್ಟೋಬರ್ 2024, 4:00 IST
Last Updated 27 ಅಕ್ಟೋಬರ್ 2024, 4:00 IST
ಕಾರವಾರ ತಾಲ್ಲೂಕಿನ ಮುಡಗೇರಿಯಲ್ಲಿ ಅವಸಾನದ ಸ್ಥಿತಿಯಲ್ಲಿರುವ ಸೋದೆ ಅರಸರ ಕಾಲದ ಕೋಟೆಯೊಂದರ ಪ್ರವೇಶ ದ್ವಾರ
ಕಾರವಾರ ತಾಲ್ಲೂಕಿನ ಮುಡಗೇರಿಯಲ್ಲಿ ಅವಸಾನದ ಸ್ಥಿತಿಯಲ್ಲಿರುವ ಸೋದೆ ಅರಸರ ಕಾಲದ ಕೋಟೆಯೊಂದರ ಪ್ರವೇಶ ದ್ವಾರ   

ಕಾರವಾರ: ಎತ್ತರದ ಪರ್ವತಗಳ ಸಾಲುಗಳ ನಡುವೆ ಬಯಲು ಪ್ರದೇಶದಂತಿರುವ ತಾಲ್ಲೂಕಿನ ಮುಡಗೇರಿ ಗ್ರಾಮ ಪ್ರಾಕೃತಿಕವಾಗಿ ಅದ್ಭುತ ತಾಣವಾಗಿರುವುದು ಒಂದೆಡೆಯಾದರೆ, ಹೆಜ್ಜೆ ಹೆಜ್ಜೆಗೂ ಮೂರು ಶತಮಾನದ ಹಿಂದಿನ ಸೋದೆ ಅರಸರ ಸಾಮ್ರಾಜ್ಯದ ಕುರುಹುಗಳನ್ನು ಉಳಿಸಿಕೊಂಡಿರುವುದು ಕುತೂಹಲ ಮೂಡಿಸುತ್ತಿದೆ.

ಗ್ರಾಮದ ಕೆಲವು ಮನೆಗಳ ಆವರಣದಲ್ಲಿ ಸೋದೆ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಬಾವಿಗಳಿವೆ. ಅಲ್ಲಿನ ಶುದ್ಧ ನೀರನ್ನೇ ಜನರು ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಅವಸಾನದ ಸ್ಥಿತಿಗೆ ತಲುಪಿದ ಕೋಟೆಯ ಅವಶೇಷಗಳು, ನೀರಾವರಿ ವ್ಯವಸ್ಥೆಯ ಕುರುಹುಗಳು, ದೇಗುಲಗಳು ಹೀಗೆ ಅರಸರ ಕಾಲದ ನಿರ್ಮಾಣದ ಕುರುಹುಗಳು ಮುಡಗೇರಿಯು ಸೋದೆ ರಾಜ್ಯದ ಭಾಗವಾಗಿತ್ತು ಎಂಬುದನ್ನು ಸಾರಿ ಹೇಳುತ್ತಿವೆ.

ರಾಜ್ಯದ ಗಡಿಭಾಗದಲ್ಲಿರುವ ಈ ಗ್ರಾಮದಿಂದ ಸ್ವಲ್ಪ ದೂರದಲ್ಲೇ ಗೋವಾ ರಾಜ್ಯದ ಗಡಿ ಭಾಗ ಆರಂಭಗೊಳ್ಳುತ್ತದೆ. ಸೋದೆ ಅರಸರ ಸಾಮ್ರಾಜ್ಯದಲ್ಲಿ ಮುಡಗೇರಿ ಗಡಿಭಾಗವಾಗಿತ್ತೇ? ಎಂಬ ಪ್ರಶ್ನೆ ಸ್ಥಳೀಯರಲ್ಲಿಯೂ ಮೂಡುತ್ತದೆ. ಗಡಿಭಾಗ ಆಗಿದ್ದ ಕಾರಣದಿಂದಲೇ ಇಲ್ಲಿ ಕೋಟೆ, ಕುದುರೆ ಲಾಯ, ಶಸ್ತ್ರಾಸ್ತ್ರ ಕೊಠಡಿ ಸೇರಿದಂತೆ ರಾಜ್ಯದ ರಕ್ಷಣೆಗೆ ಬೇಕಿದ್ದ ಸೌಲಭ್ಯಗಳನ್ನೆಲ್ಲ ಅಳವಡಿಸಿರಬಹುದು ಎಂಬುದಾಗಿ ಸ್ಥಳೀಯರು ಅಂದಾಜಿಸುತ್ತಾರೆ.

ADVERTISEMENT

‘ಗ್ರಾಮದಲ್ಲಿ ಎತ್ತರ ಪ್ರದೇಶವೊಂದರಲ್ಲಿ ಕೋಟೆಯ ಅವಶೇಷವೊಂದಿದೆ. ದೊಡ್ಡ ಗಾತ್ರದ ಚಿರೇಕಲ್ಲುಗಳಿಂದ ಇದು ನಿರ್ಮಾಣವಾಗಿತ್ತು. ಕೋಟೆಯ ಮಧ್ಯದಲ್ಲಿ ಎರಡು ಎತ್ತರದ ಸ್ತಂಭದಂತ ನಿರ್ಮಾಣ ಬಿದ್ದ ಸ್ಥಿತಿಯಲ್ಲಿದ್ದು, ಅದರ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಇದು ಅರಸರ ಕೋಟೆ ಆಗಿದ್ದಿರಬಹುದು’ ಎನ್ನುತ್ತಾರೆ ಗ್ರಾಮಸ್ಥ ವಿಲಾಸ ದೇಸಾಯಿ.

‘ಇದೇ ಕೋಟೆಯ ಬಳಿ ನಿಂತು ನೋಡಿದರೆ ಸೋಮನಾಥ ದೇವಾಲಯ ಕಾಣಿಸುತ್ತದೆ. ಇದನ್ನು ಅರಸರು ಕಟ್ಟಿಸಿದ್ದು ಎಂಬುದಾಗಿ ಇತಿಹಾಸ ಹೇಳುತ್ತಿದೆ. ಕೋಟೆಯ ಪಳಿಯುಳಿಕೆಯ ನಡುವೆಯೇ ದೊಡ್ಡ ಗಾತ್ರದ ಬಾವಿಯೊಂದಿದೆ. ಬಾವಿಯ ಆಳದಿಂದ ಸುರಂಗ ಮಾರ್ಗವೊಂದು ಇರುವುದಾಗಿ ನಂಬಿಕೆ ಇದೆ’ ಎಂದೂ ಹೇಳಿದರು.

‘ಅರಸರ ಕುದುರೆ ಲಾಯ ಗ್ರಾಮದಲ್ಲಿತ್ತು ಎಂದು ಹೇಳಲಾಗುತ್ತದೆ. ಕುದುರೆಗಳಿಗೆ ನೀರು ಕುಡಿಸಲು ಅಲ್ಲಲ್ಲಿ ಬಾವಿಗಳನ್ನು ನಿರ್ಮಿಸಿದ್ದರು. ಚಿರೇಕಲ್ಲಿನಿಂದ ಕಟ್ಟಿದ ಬಾವಿಗೆ ಇಳಿದು ಸಾಗಲು ಮೆಟ್ಟಿಲುಗಳೂ ಇವೆ. ಮೆಟ್ಟಿಲುಗಳ ಮೂಲಕ ಬಾವಿಯ ಆಳದವರೆಗೆ ಕುದುರೆಗಳನ್ನು ಕರೆದೊಯ್ಯುವ ವ್ಯವಸ್ಥೆಯೂ ಇತ್ತೆಂಬ ಪ್ರತೀತಿ ಇದೆ. ಈಗ ಇದೇ ಬಾವಿಯ ನೀರನ್ನು ಉಪಯೋಗಿಸುತ್ತಿದ್ದೇವೆ. ಇದು ನಮ್ಮ ಮನೆಯ ಆವರಣದಲ್ಲಿದೆ’ ಎಂದು ಸದಾನಂದ ಗಾಂವಕರ ಹೇಳಿದರು.

ಮುಡಗೇರಿ ಗ್ರಾಮದಲ್ಲಿರುವ ಸೋದೆ ಅರಸರ ಕಾಲದಲ್ಲಿ ಕುದುರೆಗಳಿಗೆ ನೀರು ಕುಡಿಸಲು ಬಳಕೆ ಆಗುತ್ತಿದ್ದ ಬಾವಿ
ಸೋದೆ ಅರಸರ ಸಾಮ್ರಾಜ್ಯದಲ್ಲಿ ಮುಡಗೇರಿ ಗ್ರಾಮವೂ ಒಂದು ಭಾಗವಾಗಿತ್ತು. ಹೊನ್ನಾವರ ಭಟ್ಕಳ ಹೊರತುಪಡಿಸಿದರೆ ಉತ್ತರ ಕನ್ನಡದ ಬಹುಭಾಗ ಸೋದೆ ಸಾಮ್ರಾಜ್ಯವಾಗಿತ್ತು
ಲಕ್ಷ್ಮೀಶ ಸೋಂದಾ,ಇತಿಹಾಸಕಾರ

ಸೈನಿಕರಿಗಾಗಿ ಕೊತ್ತಲ ಇತ್ತು

‘ಸೋದೆ ಅರಸರು ತಮ್ಮ ಸಾಮ್ರಾಜ್ಯದ ಅಲ್ಲಲ್ಲಿ ಕೊತ್ತಲಗಳನ್ನು ನಿರ್ಮಿಸಿದ್ದರು. ಅಲ್ಲಿ ಯುದ್ಧಕ್ಕೆ ಅಗತ್ಯವಿರುವ ಪರಿಕರಗಳು ಕುದುರೆಗಳನ್ನು ಇರಿಸಿದ್ದರು. ಸೈನಿಕರೂ ಇಲ್ಲಿ ವಾಸ ಇರುತ್ತಿದ್ದರು. ಅಂತಹ ಕೊತ್ತಲಗಳ ಪೈಕಿ ಮುಡಗೇರಿ ಗ್ರಾಮದಲ್ಲಿರುವುದೂ ಒಂದಾಗಿದೆ. ಆದರೆ ಇಲ್ಲಿನ ಬಾವಿಗಳ ಆಳದಲ್ಲಿ ಸುರಂಗಗಳಿರುವ ಬಗ್ಗೆ ಪುರಾವೆಗಳಿಲ್ಲ. ಕುದುರೆಗಳಿಗೆ ನೀರು ಕುಡಿಸಲು ಅನುಕೂಲವಾಗವಂತೆ ಇಲ್ಲಿ ಮೆಟ್ಟಿಲು ಸಹಿತ ಬಾವಿ ನಿರ್ಮಿಸಲಾಗುತ್ತಿತ್ತು’ ಎನ್ನುತ್ತಾರೆ ಇತಿಹಾಸಕಾರ ಲಕ್ಷ್ಮೀಶ ಸೋಂದಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.