ಕುಮಟಾ: ತಾಲ್ಲೂಕಿನ ಕತಗಾಲದ ಎಸ್.ಕೆ.ಪಿ ಪ್ರೌಢ ಶಾಲೆಗೆ ಹಳೆಯ ವಿದ್ಯಾರ್ಥಿಯೊಬ್ಬರು ಕೊಡುಗೆಯಾಗಿ ನೀಡಿರುವ 20 ಕೆ.ವಿ. ಸಾಮರ್ಥ್ಯದ ಸೋಲಾರ್ ಸೌಲಭ್ಯ ಶಾಲೆಗೆ ಆದಾಯ ಗಳಿಕೆಗೆ ದಾರಿ ಮಾಡಿಕೊಟ್ಟಿದೆ.
ಶಾಲೆಗೆ ಅಗತ್ಯದಷ್ಟು ವಿದ್ಯುತ್ ಶಕ್ತಿ ಉತ್ಪಾದಿಸಿಕೊಳ್ಳುವುದರ ಜತೆಗೆ ಹೆಚ್ಚುವರಿ ವಿದ್ಯುತ್‍ನ್ನು ಶಾಲೆಯವರು ಸ್ಥಳೀಯ ಹೆಸ್ಕಾಂ ಗ್ರಿಡ್‍ಗೆ ಮಾರಾಟ ಮಾಡಿ ಪ್ರತಿ ವರ್ಷ ಸರಾಸರಿ ₹50 ಸಾವಿರದಷ್ಟು ಆದಾಯ ಗಳಿಕೆ ಮಾಡುತ್ತಿದ್ದಾರೆ.
‘ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕೆ.ಟಿ.ಆರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶಿವಶಂಕರ ಪಿಕಳೆ ಅವರು ತಮ್ಮ ಕಂಪನಿಯ ಸಿ.ಎಸ್.ಆರ್ ನಿಧಿಯಿಂದ 2018 ರಲ್ಲಿ ತಾವು ಕಲಿತಿದ್ದ ಶಾಲೆಗೆ ₹12.75 ಲಕ್ಷ ವೆಚ್ಚದಲ್ಲಿ ಸೋಲಾರ್ ಸೌಲಭ್ಯವನ್ನು ನೀಡಿದ್ದರು. ಅದರಿಂದ ಶಾಲೆಗೆ ವಿದ್ಯುತ್ ಸಮಸ್ಯೆ ನಿವಾರಣೆಯಾಗುವ ಜತೆಗೆ ಉತ್ತಮ ಆದಾಯವನ್ನೂ ಗಳಿಸಿಕೊಡುತ್ತಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್. ಕೊರವರ ತಿಳಿಸಿದರು.
‘ಶಾಲೆಗೆ ಬಳಕೆಯಾಗಿ ಉಳಿಯುವ ಹೆಚ್ಚಿನ ವಿದ್ಯುತ್ ಅನ್ನು ಆಗ ಸ್ಥಳೀಯ ಹೆಸ್ಕಾಂ ಸಂಸ್ಥೆಗೆ ಮಾರಾಟ ಮಾಡುತ್ತಿದ್ದೇವೆ. ಇದಕ್ಕಾಗಿ ಶಾಲೆ ಪ್ರತಿ ಹೆಚ್ಚುವರಿ ಯುನಿಟ್‍ಗೆ ₹3.05 ರಂತೆ ದರ ನಿಗದಿಪಡಿಸಿ ಮಾರಾಟ ಮಾಡಲು ಹೆಸ್ಕಾಂ ಜೊತೆ ಒಪ್ಪಂದ ಮಾಡಿಕೊಂಡಿದೆ’ ಎಂದರು.
‘ಸೋಲಾರ್ ಸೌಲಭ್ಯ ದೊರೆಯುವ ಮೊದಲು ಶಾಲೆಗೆ ಪ್ರತಿ ತಿಂಗಳು ಸರಾಸರಿ ₹700 ಮೊತ್ತದ ವಿದ್ಯುತ್ ಬಿಲ್ ಬರುತ್ತಿತ್ತು. ಈಗ ಶಾಲೆಗೆ ವಿದ್ಯುತ್ ಬಿಲ್ ಪಾವತಿಯ ಭಾರ ತಗ್ಗಿದೆ. ಅದರ ಬದಲು ವಿದ್ಯುತ್ ಮಾರಾಟದಿಂದ ಆದಾಯ ಗಳಿಸುವ ಸ್ಥಿತಿಗೆ ತಲುಪಿದ್ದೇವೆ. ಮಳೆಗಾಲದಲ್ಲಿ ವಿದ್ಯುತ್ ಉತ್ಫಾದನೆ ಪ್ರಮಾಣ ಕಡಿಮೆಯಾದರೂ ಬೇಸಿಗೆಯಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಸೋಲಾರ್ ವಿದ್ಯುತ್‍ನಿಂದ ಶಾಲೆಯ ಒಂದು ಎಚ್.ಪಿ ಮೋಟಾರ್, ಬಿಸಿಯೂಟ ಅಡುಗೆಯ ಮಿಕ್ಸರ್, ಗ್ರೈಂಡರ್ ಎಲ್ಲ ಏಕ ಕಾಲಕ್ಕೆ ಬಳಸುತ್ತೇವೆ’ ಎಂದರು.
ಉದ್ಯಮಿ ಶಿವಶಂಕರ ಪಿಕಳೆ ಶಾಲೆಗೆ ಸೋಲಾರ್ ಸೌಲಭ್ಯದ ಜೊತೆ ಸುಮಾರು ₹19 ಲಕ್ಷ ಮೊತ್ತದ ಹೈಟೆಕ್ ಶೌಚಾಲಯ ಸೌಲಭ್ಯ ಸಹ ನೀಡಿದ್ದಾರೆವಿವೇಕ ಜಾಲಿಸತ್ಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.