ಕುಮಟಾ (ಉತ್ತರ ಕನ್ನಡ):‘ಉತ್ತರ ಪತ್ರಿಕೆಯಲ್ಲಿ ಸರಿಯಾದ ಉತ್ತರವನ್ನು ವ್ಯಾಕರಣ ತಪ್ಪಿಲ್ಲದಂತೆ ಕಾಳಜಿಯಿಂದ ಬರೆದೆ. ಇದರಿಂದ ನಿರೀಕ್ಷೆಯಂತೆ ನನಗೆ ರಾಜ್ಯಕ್ಕೆ ಮೊದಲ ಸ್ಥಾನ ಬಂತು. ನನ್ನ ಅಜ್ಜ ಮಂಜು ನಾಯ್ಕ ಅವರು ಯಾವಾಗಲೂ ನನಗೆ 625ಕ್ಕೆ 625 ಅಂಕ ತೆಗೆಯಬೇಕು ಎನ್ನುತ್ತಿದ್ದರು. ಅವರ ಆಸೆಯನ್ನು ಈಡೇರಿಸಿದ ಖುಷಿ ನನ್ನದಾಗಿದೆ...’
ಈ ಬಾರಿಯ ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಕುಮಟಾ ನಾಗಾಂಜಲಿ ನಾಯ್ಕ ‘ಪ್ರಜಾವಾಣಿ’ ಜತೆ ತನ್ನ ಸಂಭ್ರಮವನ್ನು ಈ ರೀತಿ ಹಂಚಿಕೊಂಡಳು.
ಪಟ್ಟಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯ (ಆಂಗ್ಲಮಾಧ್ಯಮ) ವಿದ್ಯಾರ್ಥಿನಿಯಾದ ಈಕೆ, ತಾಲ್ಲೂಕಿನ ಕಾಗಾಲ ಗ್ರಾಮದ ಪರಮೇಶ್ವರ ನಾಯ್ಕ ಅವರ ಪುತ್ರಿ.
‘ವಾರ್ಷಿಕ ಪರೀಕ್ಷೆಯ ಹಿಂದಿನ ಪರೀಕ್ಷೆಗಳಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷಾ ವಿಷಯಗಳಲ್ಲಿ ಹೆಚ್ಚು ವ್ಯಾಕರಣ ತಪ್ಪುಗಳು ಆಗುತ್ತಿದ್ದವು. ಅವುಗಳನ್ನು ತಿದ್ದಿಕೊಳ್ಳುವಂತೆ ಶಿಕ್ಷಕರು ಸೂಚಿಸಿದ್ದರು. ಅವರ ಮಾರ್ಗದರ್ಶನ ಇಂದಿನ ಫಲಿತಾಂಶಕ್ಕೆ ಸಹಕಾರಿಯಾಯಿತು. ಅಲ್ಲದೇಸುಂದರ ಹಾಗೂ ಸ್ಪಷ್ಟವಾದ ಕೈಬರಹವೂ ನನಗೆ ಹೆಚ್ಚು ಅಂಕ ಸಿಗಲು ಸಹಕಾರಿಯಾಯಿತು ಎಂದು ಭಾವಿಸಿದ್ದೇನೆ. ಜೊತೆಗೆಶಿಕ್ಷಕರ ಕಾಳಜಿ, ಶಾಲೆಯ ಆಡಳಿತ ಮಂಡಳಿಯವರ ಪ್ರೋತ್ಸಾಹ ನನ್ನ ಸಾಧನೆಗೆ ನೆರವಾಯಿತು. ನಮ್ಮ ಮನೆಗೆ ‘ಪ್ರಜಾವಾಣಿ’ ತರಿಸುತ್ತೇವೆ. ಅದರಲ್ಲಿರುವರಸಪ್ರಶ್ನೆಮತ್ತು ಪ್ರಶ್ನೋತ್ತರವನ್ನು ಓದುತ್ತೇನೆ’ಎಂದಳು.
* ಇದನ್ನೂ ಓದಿ:ಬಿಎಸ್ಎಫ್ ಯೋಧನ ಪುತ್ರಿಗೆ ಪ್ರಥಮ ರ್‍ಯಾಂಕ್
ತಂದೆ ಬಿಎಸ್‌ಎಫ್‌ನ ನಿವೃತ್ತ ಯೋಧ
ನಾಗಾಂಜಲಿಯ ತಂದೆ ಪರಮೇಶ್ವರ ನಾಯ್ಕ, ಗಡಿ ಭದ್ರತಾ ಪಡೆಯಲ್ಲಿ 21 ವರ್ಷ ಯೋಧರಾಗಿ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಹುಟ್ಟೂರಿಗೆ ಬಂದು, ಪ್ರಯಾಣಿಕರ ಟೆಂಪೋ ಖರೀದಿಸಿದರು. ಅದರಲ್ಲಿ ಸಿಗುವಆದಾಯವೇ ಈಗ ಕುಟುಂಬದ ನಿರ್ವಹಣೆಗೆ ಹಣಕಾಸಿನ ಮೂಲವಾಗಿದೆ.
‘ನನ್ನ ಮಗಳು ರಾಜ್ಯಕ್ಕೆ ಮೊದಲ ಸ್ಥಾನ ಬಂದ ವಿಷಯ ತಿಳಿಯುತ್ತಿದ್ದಂತೆ ಎಲ್ಲ ಕಡೆಯಿಂದ ಮೊಬೈಲ್ ಕರೆಗಳು ಬಂದವು. ಖುಷಿ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ನಾನೇ ಟೆಂಪೋ ಚಾಲನೆ ಮಾಡುತ್ತಿದ್ದೆ. ಅದನ್ನು ರಸ್ತೆ ಬದಿಗೆ ನಿಲ್ಲಿಸಿ ಸ್ನೇಹಿತರೊಂದಿಗೆ ಮನೆಗೆ ಬಂದೆ. ಮನೆಗೆ ತಲುಪುವಾಗ ಮಾಧ್ಯಮದವರು, ಪಕ್ಕದ ಮನೆಯವರು, ಬಂಧುಗಳು ಅಲ್ಲಿ ಹಾಜರಿದ್ದರು’ ಎಂದು ಮಗಳ ಸಾಧನೆಯ ಬಗ್ಗೆ ಆನಂದಬಾಷ್ಪ ಸುರಿಸಿದರು.
‘ನನ್ನ ಕೆಲಸ ಮಾಡುತ್ತಾ ಮಗಳಿಗೆ ಓದಲು ಅನುವು ಮಾಡಿ ಕೊಟ್ಟಿದ್ದೆ. ಅದನ್ನು ಅವಳೂ ಸದ್ಬಳಕೆ ಮಾಡಿಕೊಂಡಳು’ ಎಂದು ಹೇಳಿದರು. ಅವರು ಬಿಎಸ್‌ಎಫ್‌ನಲ್ಲಿದ್ದಾಗ ರಾಜಸ್ಥಾನ, ಪಂಜಾಬ್ ಗಡಿ ಭಾಗಗಳಲ್ಲಿಕರ್ತವ್ಯ ನಿರ್ವಹಿಸಿದ್ದರು.
ನಾಗಾಂಜಲಿಯ ತಾಯಿ ಚೇತನಾ ನಾಯ್ಕ ಬಿ.ಎ. ಪದವೀಧರೆ. ಗೃಹಿಣಿಯಾಗಿರುವ ಅವರು, ‘ಆರೋಗ್ಯ ಕೆಡಿಸಿಕೊಂಡು ಓದಬೇಡ ಎಂದು ಮಗಳಿಗೆ ಆಗಾಗ ಹೇಳುತ್ತಿದ್ದೆ. ಪರೀಕ್ಷೆ ಸಂದರ್ಭದಲ್ಲಿ ಹೆಚ್ಚು ಓದುವಾಗ ತಡರಾತ್ರಿಯವರೆಗೆಅವಳ ಜೊತೆ ನಾನೂ ಕೂತಿರುತ್ತಿದ್ದೆ. ಅವಳು ಮಲಗಿದ ನಂತರವೇ ನಾನು ಮಲಗುತ್ತಿದ್ದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕಿಸುಮಾ ಪ್ರಭು ಕೂಡತಮ್ಮ ವಿದ್ಯಾರ್ಥಿನಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ‘ನಾಗಾಂಜಲಿ ಬಹಳ ಶ್ರಮ ಪಡುವವಿದ್ಯಾರ್ಥಿನಿ. ಆಕೆಗೆ ರ್‍ಯಾಂಕ್ ಬರುತ್ತದೆ ಎಂಬ ವಿಶ್ವಾಸ ನಮಗೂ ಹಾಗೂ ಅವಳಿಗೂ ಇತ್ತು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಹಳ ಕೂಲಂಕಷವಾಗಿ ಅಧ್ಯಯನ ಮಾಡಿದ್ದಳು’ ಎಂದರು.
*
ದಿನಕ್ಕೆ ನಾಲ್ಕರಿಂದ ಐದು ತಾಸು ಏಕಾಗ್ರತೆಯಿಂದ ಅಧ್ಯಯನ ಮಾಡುತ್ತಿದ್ದೆ. ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ವಿಶೇಷ ತರಗತಿಗಳನ್ನು ಹೊರತುಪಡಿಸಿ ಯಾವುದೇ ಟ್ಯೂಷನ್‌ಗಳಿಗೆ ನಾನು ಹೋಗಿಲ್ಲ.
–ನಾಗಾಂಜಲಿ ನಾಯ್ಕ, ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ
***
http://sslc.kar.nic.inಮತ್ತುhttp://karresults.nic.inವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.