ADVERTISEMENT

ಪರಂಪರೆ ಮುರಿದು ಪಂಪ ಪ್ರಶಸ್ತಿ ಪ್ರದಾನ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 13:22 IST
Last Updated 23 ಫೆಬ್ರುವರಿ 2024, 13:22 IST
ಬಿ.ಎನ್.ವಾಸರೆ
ಬಿ.ಎನ್.ವಾಸರೆ   

ಕಾರವಾರ: ‘ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರದಾನ ಮಾಡಬೇಕಾಗಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಲ್ಲಿ ಪ್ರಧಾನ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ವಾಸರೆ ಆಕ್ಷೇಪಿಸಿದ್ದಾರೆ.

‘ಪಂಪ ಪ್ರಶಸ್ತಿಗೆ ಹಿರಿಯ ಸಾಹಿತಿ ನಾ.ಡಿಸೋಜಾ ಅವರು ಆಯ್ಕೆ ಆಗಿರುವುದು ಸ್ವಾಗತಾರ್ಹ. ಅವರಿಗೆ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ, ರಾಜ್ಯ ಸರ್ಕಾರವು ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿರುವ ಮಾಹಿತಿ ಲಭಿಸಿದೆ. ಸರ್ಕಾರವೇ ಪರಂಪರೆಯನ್ನು ಮುರಿದಿರುವುದು ಸರಿಯಾದ ಕ್ರಮವಲ್ಲ’ ಎಂದು ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.

‘ಉತ್ತರ ಕನ್ನಡ ಜಿಲ್ಲೆ ಪಂಪ ನಡೆದಾಡಿದ ನೆಲ. ಕನ್ನಡಿಗರ ಮೊದಲ ರಾಜಧಾನಿ ಬನವಾಸಿ ಕೂಡ ಉತ್ತರ ಕನ್ನಡದಲ್ಲಿದೆ. ಆದರೆ ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಗೆ ಪಂಪ ಪ್ರಶಸ್ತಿ ಕೇವಲ ಒಬ್ಬರಿಗೆ ಮಾತ್ರ ಸಿಕ್ಕಿದೆ. ಕದಂಬೋತ್ಸವದ ಸಂದರ್ಭದಲ್ಲಿ ಕೊಡ ಮಾಡುವ ಪಂಪ ಪ್ರಶಸ್ತಿಗೆ  ಜಿಲ್ಲೆಯ ಹಿರಿಯ ಸಾಹಿತಿಗಳನ್ನೂ ಪರಿಗಣಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.