ಶಿರಸಿ: ಹಣ್ಣಾದ ಮೇಲೆ ಬಹುಬೇಗ ಕೊಳೆತು ಹೋಗುವ ಕರಬೂಜು ಹಣ್ಣಿನ ಸಿಪ್ಪೆಗೆ ಬಹುಕಾಲ ತಾಳಿಕೆ ಬರುವ ಸಾಂಬಾರು ಸೌತೆ ತೊಗಟೆಯ ಗುಣಧರ್ಮ ಬೆಳೆಸುವ ಪ್ರಯೋಗವನ್ನು ಇಲ್ಲಿನ ತೋಟಗಾರಿಕಾ ಕಾಲೇಜಿನ ವಿಜ್ಞಾನಿಗಳು ನಡೆಸುತ್ತಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ತರಕಾರಿಯಾಗಿ ಬಳಕೆ ಮಾಡುವಸಾಂಬಾರು ಸೌತೆಯ (ಮಂಗಳೂರು ಸೌತೆ, ಮಗೆಕಾಯಿ) ಆಕೃತಿ, ಅನ್ವಯಿಕ ಗುಣ ವೈವಿಧ್ಯತೆ, ಸಂರಕ್ಷಣೆಯಕುರಿತು ಆರು ಪ್ರಾಧ್ಯಾಪಕರನ್ನೊಳಗೊಂಡ ತಂಡವು ಎರಡೂವರೆ ವರ್ಷಗಳಿಂದ ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದ ಭಾಗವಾಗಿ ಕರಬೂಜ ಹಣ್ಣಿನ ತಾಳಿಕೆ ಅವಧಿಯನ್ನು ಹೆಚ್ಚಿಸುವ ಪ್ರಯೋಗವು ಯಶಸ್ಸಿನ ಹಾದಿಯಲ್ಲಿದೆ.
‘ಬೆಂಗಳೂರಿನ ಪ್ರೇಮನಾಥ ಅಗ್ರಿಕಲ್ಚರಲ್ ಫೌಂಡೇಷನ್ ನೆರವಿನಲ್ಲಿ ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಗೋವಾ ರಾಜ್ಯಗಳ ಒಟ್ಟು 80 ಜಾತಿಗಳ ಸಾಂಬಾರು ಸೌತೆಗಳನ್ನು ಗುರುತಿಸಿ, ಅವುಗಳ ಬೀಜವನ್ನು ಸಂಗ್ರಹಿಸಿದ್ದೆವು. ಅವುಗಳನ್ನು ಕಾಲೇಜಿನಲ್ಲಿ ಪ್ರಾಯೋಗಿಕವಾಗಿ ಬೆಳೆಸಿ, ಉತ್ತಮ ಫಲ ಕೊಡುವ ಜಾತಿಗಳನ್ನು ಪ್ರತ್ಯೇಕಿಸಿದ್ದೇವೆ. ಅತಿ ಚಿಕ್ಕ ಗಾತ್ರದ 100 ಗ್ರಾಂ ಕಾಯಿಯಿಂದ ಐದು ಕೆ.ಜಿ ತೂಕದ ಕಾಯಿ ಬರುವ ಜಾತಿಗಳು ಇವೆ. ಅವುಗಳಲ್ಲಿ ಆಯ್ದ ಜಾತಿಗಳನ್ನು ರೈತರ ಹೊಲದಲ್ಲಿ ಬೆಳೆಸಲಾಗುತ್ತಿದೆ’ ಎನ್ನುತ್ತಾರೆ ಸಂಶೋಧನಾ ತಂಡದ ಪ್ರಮುಖರಾದ ಡಾ.ರತ್ನಾಕರ ಶೇಟ್, ಡಾ. ಶಿವಾನಂದ ಹೊಂಗಲ್.
ಮಂಗಳೂರು ಸೌತೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆಳೆಯುವ ಬೆಳೆ. ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಚಟ್ನಿ, ಸಾಂಬಾರು, ದೋಸೆ, ಉಪ್ಪಿನಕಾಯಿಗೆ ಬಳಕೆ ಮಾಡುತ್ತಾರೆ. ಈ ತರಕಾರಿಯು ಕೊಯ್ಲಿನ ನಂತರ 8–10 ತಿಂಗಳವರೆಗೆ ತಾಜಾತನ ಉಳಿಸಿಕೊಳ್ಳುವ ಗುಣಧರ್ಮ ಹೊಂದಿದೆ. ಪ್ರಾದೇಶಿಕವಾಗಿ ಇದರ ಬಳಕೆ ಭಿನ್ನವಾಗಿದೆ.ಸುಧಾರಿತ
ತಳಿಗಳನ್ನು ಅಭಿವೃದ್ಧಿಪಡಿಸಿ, ಪ್ರಾದೇಶಿಕ ಬೇಡಿಕೆಗೆ ಅನುಗುಣವಾಗಿ ರೈತರಿಗೆ ಪೂರೈಕೆ ಮಾಡುವ ಯೋಜನೆಯಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಆದರೆ, ಇದೇ ಕುಟುಂಬದ (cucurbitaceae) ಕರಬೂಜ ಹಣ್ಣು ಕಟಾವು ಆದ ನಂತರ ಬೇಗ ಕೊಳೆಯುವುದರಿಂದ ಬೆಳೆಗಾರರಿಗೆ ನಷ್ಟವಾಗುತ್ತದೆ. ಈ ನಷ್ಟವನ್ನು ತಪ್ಪಿಸಲು, ಕರಬೂಜ ಹಣ್ಣಿನ ಸಿಪ್ಪೆಯಲ್ಲಿ ಸಾಂಬಾರು ಸೌತೆಯಲ್ಲಿರುವ ತಾಳಿಕೆಯ ಗುಣಧರ್ಮ ಬೆಳೆಸುವ ಪ್ರಯೋಗ ನಡೆಸಿದ್ದು, ಫಲಿತಾಂಶ ಸಕಾರಾತ್ಮಕವಾಗಿದೆ.ಬಾಗಲಕೋಟೆ ತೋಟಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಡಾ. ರಾಘವೇಂದ್ರ ಗುನ್ನಯ್ಯ ಅವರು, ಸಾಂಬಾರು ಸೌತೆಯ ಅನ್ವಯಿಕ ಗುಣ, ಅದರ ತಾಜಾತನಕ್ಕೆ ಕಾರಣವಾಗಿರುವ ಜೀನ್ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ‘ ಎಂದು ಅವರು ವಿವರಿಸಿದರು.
*
ಕರಬೂಜ ಹಣ್ಣಿನಲ್ಲಿ ಸಾಂಬಾರು ಸೌತೆಯ ಜೀನ್ ಬೆಳೆಸುವ ಪ್ರಯೋಗದಂತೆ, ಇದೇ ಜಾತಿಯ ಇನ್ನುಳಿದ ಹಣ್ಣಿನ ಮೇಲೆ ನಡೆಸುವ ಪ್ರಯೋಗ ಪ್ರಗತಿಯಲ್ಲಿದೆ.
-ಡಾ.ಶಿವಾನಂದ ಹೊಂಗಲ್, ಸಂಶೋಧಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.