ಭಟ್ಕಳ: ತಾಲ್ಲೂಕಿನ ಗೊರ್ಟೆಯ ಹೆದ್ದಾರಿಯಲ್ಲಿರುವ ಶಿರೂರ ಟೋಲ್ ಗೇಟ್ ಬಳಿ ಪ್ರತಿ ದಿನ ಬಿಡಾಡಿ ದನಗಳು ರಸ್ತೆಯ ಮೇಲೆ ಮಲಗಿ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿರುವ ದೂರು ಹೆಚ್ಚುತ್ತಿದೆ.
‘ವಾಹನ ಸವಾರರಿಗೆ ಬಿಡಾಡಿ ದನಗಳಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದ್ದರೂ ಐ.ಆರ್.ಬಿ ಟೋಲ್ ಗೇಟ್ ಸಿಬ್ಬಂದಿ ಅಗತ್ಯ ಕ್ರಮ ವಹಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂಬುದು ವಾಹನ ಸವಾರರ ಆರೋಪ.
ಭಟ್ಕಳ ಹಾಗೂ ಶಿರೂರು ಮಾರ್ಗವಾಗಿ ಟೋಲ್ ಗೇಟ್ ಬಳಿ ಬರುವ ಎರಡು ಹೆದ್ದಾರಿ ಮಾರ್ಗವು ಚತುಷ್ಪಥವಾಗಿದ್ದು, ವಾಹನಗಳು ವೇಗದ ಮೀತಿ ಮೀರಿ ಬರುತ್ತವೆ. ಹೀಗೆ ಮೀತಿ ಮೀರಿ ಬರುವಾಗ ಶಿರೂರು ಗಡಿಯ ಬಳಿ ರಸ್ತೆಯ ಮಧ್ಯದಲ್ಲಿಯೇ ಬಿಡಾಡಿ ದನಗಳು ಅಡ್ಡ ಬಂದಾಗ ಒಮ್ಮೊಮ್ಮೆ ಸವಾರರು ನಿಯಂತ್ರಣ ತಪ್ಪುವುದು ಸಾಮಾನ್ಯವಾಗಿದೆ.
ಟೋಲ್ ಗೇಟ್ ಬಳಿ ಬಿಡಾಡಿ ದನಗಳು ಕಂಡುಬಂದರೆ ನಮ್ಮ ಸಿಬ್ಬಂದಿ ಅದನ್ನು ಓಡಿಸುತ್ತಾರೆ. ಹೆದ್ದಾರಿ ಪರಿವೀಕ್ಷಣಾ ವಾಹನವು ದಿನದ ಎಲ್ಲ ಸಮಯವೂ ಗಸ್ತು ತಿರುಗುತ್ತಿದ್ದು ಬಿಡಾಡಿ ದನಗಳು ರಸ್ತೆಯ ಮಧ್ಯೆ ಇರಲು ಅವಕಾಶ ನೀಡುವುದಿಲ್ಲಸುದೇಶ ಶೆಟ್ಟಿ, ಸಹಾಯಕ ಎಂಜಿನಿಯರ್, ಐ.ಆರ್.ಬಿ ಕಂಪನಿ
ಕಳೆದ ವರ್ಷ ಜುಲೈನಲ್ಲಿ ಹೊನ್ನಾವರದಿಂದ ಮಣಿಪಾಲಕ್ಕೆ ರೋಗಿಯನ್ನು ಹೊತ್ತು ಸಾಗುವ ಆಂಬುಲೆನ್ಸ್ ಇದೇ ಟೋಲ್ ಗೇಟ್ ಬಳಿ ಆಕಳು ಅಡ್ಡಬಂದ ಪರಿಣಾಮವಾಗಿ ಅಪಘಾತವಾಗಿ ನಾಲ್ಕು ಜನರು ಮೃತಪಟ್ಟಿದ್ದರು. ಆ ಘಟನೆಯ ನಂತರ ಬಿಡಾಡಿ ದನಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಿದ್ದ ಐ.ಆರ್.ಬಿ ಸಿಬ್ಬಂದಿ ಈಚೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುತ್ತಾರೆ ವಾಹನ ಸವಾರರು.
‘ಟೋಲ್ ಗೇಟ್ ಬಳಿ ಬಿಡಾಡಿ ದನಗಳು ರಸ್ತೆಯ ಮಧ್ಯದಲ್ಲೇ ಮಲಗಿರುವ ಬಗ್ಗೆ ಸಿಬ್ಬಂದಿ ಬಳಿ ಪ್ರಶ್ನಿಸಿದರೆ ಬಿಡಾಡಿ ದನಗಳ ನಿಯಂತ್ರಣ ನಮ್ಮ ಕೈಯಲಿಲ್ಲ. ಗ್ರಾಮ ಪಂಚಾಯಿತಿಗೆ ದೂರು ನೀಡಿ ಎಂದು ಉತ್ತರಿಸುತ್ತಾರೆ. ಒಂದೊಮ್ಮೆ ಬಿಡಾಡಿ ದನಗಳಿಂದ ಅಪಘಾತವಾಗಿ ಪ್ರಾಣಹಾನಿಯಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ’ ಎಂದು ಭಟ್ಕಳದ ಸಂದೀಪ ಶೇಟ್ ಪ್ರಶ್ನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.