ದಾಂಡೇಲಿ: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚುತ್ತಿರುವ ದೂರು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿರುವುದು ಸಾರ್ವಜನಿಕರನ್ನು ಚಿಂತೆಗೀಡುಮಾಡಿದೆ.
ಕೆಲವು ದಿನಗಳ ಹಿಂದೆ ಮಾರುತಿ ನಗರದಲ್ಲಿ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ಎರಗಿ ಗಾಯಗೊಳಿಸಿದ್ದವು. ನಗರದ ಪ್ರಮುಖ ಓಣಿಯೊಂದರಲ್ಲಿ ಅಂಗಡಿಗೆ ದಿನಸಿ ತರಲು ಹೋಗುತ್ತಿದ್ದ ಬಾಲಕನಿಗೂ ಬೀದಿ ನಾಯಿ ಕಚ್ಚಿದ್ದವು. ಈ ಘಟನೆಗಳಿಂದ ಪಾಲಕರ ವಲಯ ತೀವೃ ಆತಂಕ ವ್ಯಕ್ತಪಡಿಸಿದೆ.
ನಗರದ ಚನ್ನಮ್ಮ ವೃತ್ತ, ಸೋಮಾನಿ ವೃತ್ತ, ಸುಭಾಸ ನಗರ, ವನಶ್ರೀ ನಗರ, ಗಣೇಶ ನಗರ, ಅಂಬೇವಾಡಿ, ಹಳೆ ದಾಂಡೇಲಿ ಸೇರಿದಂತೆ ಅನೇಕ ಕಡೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬೀದಿನಾಯಿಗಳ ಕಾಟದಿಂದಾಗಿ ವೃದ್ಧರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ.
‘ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಅಡ್ಡಲಾಗಿ ಓಡುವ, ಹಿಂಬಾಲಿಸಿಕೊಂಡು ಬರುವ ಬೀದಿನಾಯಿಗಳಿಂದ ಬೈಕ್ ಸವಾರರು ಆಯತಪ್ಪಿ ಬೀಳುವ ಘಟನೆ ನಡೆಯುತ್ತಿವೆ. ನಗರದ ಪ್ರತಿ ವಾರ್ಡ್‍ನಲ್ಲಿಯೂ ಸರಾಸರಿ 40ಕ್ಕಿಂತ ಹೆಚ್ಚು ಬೀದಿನಾಯಿಗಳು ಕಾಣಸಿಗುತ್ತವೆ. ಬೀದಿನಾಯಿಗಳ ಕಾಟದಿಂದ ನಗರಕ್ಕೆ ಬರುವ ಪ್ರವಾಸಿಗರು ಹೈರಾಣಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧೀರ ದೂರುತ್ತಾರೆ.
‘ಬೀದಿನಾಯಿಗಳ ಕಾಟದಿಂದ ಕೇವಲ ಸ್ಥಳೀಯ ನಿವಾಸಿಗಳಷ್ಟೆ ಬಾಧಿತರಾಗುತ್ತಿಲ್ಲ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಹೆಚ್ಚು ತೊಂದರೆ ಉಂಟಾಗುತ್ತಿದೆ. ಬೀದಿನಾಯಿ ಉಪಟಳ ಪ್ರವಾಸೋದ್ಯಮ ಕ್ಷೇತ್ರಕ್ಕೂ ಅಡ್ಡಪರಿಣಾಮ ಬೀರಬಹುದು’ ಎಂದು ನಗರದ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
‘ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಅತಿ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಹಾಗೂ ನಿಯಂತ್ರಣ ಸಂಬಂದಿಸಿದಂತೆ ನಿಗಾ ವಹಿಸಲಾಗುವುದು’ ಎಂದು ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿ ವಿಲಾಸ ದೇವಕರ ಪ್ರತಿಕ್ರಿಯಿಸಿದ್ದಾರೆ.
ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಟೆಂಡರ್ ಕರೆಯುವ ಬಗ್ಗೆ ನಿರ್ಣಯಿಸಲಾಗಿದೆಅಶ್ಫಾಕ್ ಶೇಖ್ ನಗರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.