ಭಟ್ಕಳ: ಪಟ್ಟಣದಲ್ಲಿ ಪುರಸಭೆಯಿಂದ ಅಳವಡಿಸಿರುವ ಬೀದಿ ದೀಪಗಳು ಕೆಟ್ಟುಹೋದರೂ ದುರಸ್ತಿ ಮಾಡಲಾಗುತ್ತಿಲ್ಲ ಎಂಬ ಆರೋಪ ಹೆಚ್ಚುತ್ತಿದೆ. ರಾತ್ರಿ ವೇಳೆ ಕತ್ತಲಿನಿಂದ ಕೂಡಿರುವ ಪಟ್ಟಣದ ರಸ್ತೆಗಳು ಆರೋಪ ಪುಷ್ಟೀಕರಿಸುತ್ತಿವೆ.
ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಎಂಬ ಕಂಪನಿಯೂ ಪುರಸಭೆ ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಕೆ ಹಾಗೂ ಅದರ ನಿರ್ವಹಣೆ ಜವಾಬ್ದಾರಿಯನ್ನು ಪಡೆದುಕೊಂಡಿದೆ. ಪಟ್ಟಣದ 23 ವಾರ್ಡ್‍ಗಳ ವ್ಯಾಪ್ತಿಯಲ್ಲಿ 3,200 ಬೀದಿದೀಪದ ಕಂಬಗಳು ಇದ್ದು, ಅವುಗಳ ಪೈಕಿ 1,800 ಕಂಬಗಳಿಗೆ ಕಂಪನಿಯೂ ಹೊಸ ಎಲ್.ಇ.ಡಿ ಬಲ್ಬ್ ಅಳವಡಿಸಿದೆ.
‘ಬಾಕಿ ಉಳಿದ 1,400 ಕಂಬಗಳ ಬೀದಿದೀಪ ಕೆಟ್ಟುಹೋದರೆ ಬದಲಾಯಿಸಲು ತಮ್ಮ ಬಳಿ ಹೊಸ ಎಲ್.ಇ.ಡಿ ಬಲ್ಬ್ ಇಲ್ಲ ಎಂಬುದಾಗಿ ಕಂಪನಿ ಹೇಳುತ್ತಿದೆ’ ಎಂಬುದು ಸಾರ್ವಜನಿಕರ ಆರೋಪ.
‘ಪಟ್ಟಣದ ವ್ಯಾಪ್ತಿಯಲ್ಲಿ ಈ ಹಿಂದೆ ಪುರಸಭೆಯ ಅನುದಾನದಲ್ಲಿ ಖರೀದಿ ಮಾಡಿ ಅಳವಡಿಸಲಾಗಿದ್ದ ಎಲ್.ಇ.ಡಿ ಬಲ್ಬ್ ಕಂಪನಿಯವರು ಬದಲಾಯಿಸಿಲ್ಲ. ಅದು ಕೆಟ್ಟು ಹೋದ ನಂತರ ಹೊಸ ಬಲ್ಬ್ ಅಳವಡಿಸುವುದಾಗಿ ತಿಳಿಸಿದ್ದರು. ಈಗ ಪುರಸಭೆಯಿಂದ ಖರೀದಿ ಮಾಡಿ ಅಳವಡಿಸಿದ್ದ ಬಲ್ಬುಗಳು ಒಂದೊಂದೆ ಕೆಟ್ಟು ಹೋಗುತ್ತಿದೆ. ಈ ಬಗ್ಗೆ ಕಂಪೆನಿಯವರನ್ನು ಪ್ರಶ್ನಿಸಿದರೆ ಹೊಸ ಬಲ್ಬ್ ದಾಸ್ತಾನು ಇಲ್ಲ ಎನ್ನುತ್ತಾರೆ. ಪುರಸಭೆಯವರನ್ನು ಪ್ರಶ್ನಿಸಿದರೇ ಹೆಚ್ಚುವರಿ ಬಲ್ಬ್ ಅಳವಡಿಕೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎನ್ನುತ್ತಿದ್ದಾರೆ. ಪಟ್ಟಣದ ಬೀದಿಗಳು ಕತ್ತಲಿನಲ್ಲಿಯೇ ಇರುವಂತಾಗಿದೆ’ ಎಂಬುದಾಗಿ ಪುರಸಭೆಯ ಮಾಜಿ ಸದಸ್ಯ ಸತೀಶ ನಾಯ್ಕ ದೂರಿದರು.
‘1,800 ಕಂಬಗಳಿಗೆ ಮಾತ್ರ ಎಲ್.ಇ.ಡಿ ಬಲ್ಬ್ ಅಳವಡಿಸಲು ನಮಗೆ ಅನುಮೋದನೆ ದೊರೆತಿದೆ. ಹೆಚ್ಚುವರಿಯಾಗಿ 100 ಕಂಬಗಳಿಗೆ ನಮ್ಮ ಕಡೆಯಿಂದ ಅಳವಡಿಸಿದ್ದೇವೆ. ಇನ್ನೂ 2 ಸಾವಿರ ಹೊಸ ಬಲ್ಬ್ ಅಳವಡಿಸಲು ಅನುಮೋದನೆ ಕೋರಿ ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುಮೋದನೆಯಾದ ಬಳಿಕವಷ್ಟೇ ದುರಸ್ತಿ ಮಾಡಲಾಗುವುದು’ ಎಂದು ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಕಂಪನಿಯ ರೋಹಿತ್ ಪ್ರತಿಕ್ರಿಯಿಸಿದ್ದಾರೆ.
ಬೀದಿದೀಪ ಬದಲಾವಣೆ ಹಾಗೂ ನಿರ್ವಹಣೆಯನ್ನು ಜಿಲ್ಲಾ ನಗರಾಭಿವೃದ್ದಿಕೋಶದಿಂದ ಟೆಂಡರ್ ಕರೆದು ನೀಡಲಾಗಿದೆ. ಹೆಚ್ಚುವರಿ ಬಲ್ಬುಗಳನ್ನು ಪೂರೈಸುವಂತೆ ಜಿಲ್ಲಾ ನಗರಾಭಿವೃದ್ದಿಕೋಶಕ್ಕೆ ಬೇಡಿಕೆ ಸಲ್ಲಿಸಲಾಗಿದೆನೀಲಕಂಠ ಮೇಸ್ತ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.