ಯಲ್ಲಾಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೌಕರ್ಯಗಳಿದ್ದರೂ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಉಪನ್ಯಾಸಕ ವರ್ಗದ ಚಿಂತೆಗೆ ಕಾರಣವಾಗಿದೆ.
38 ವರ್ಷಗಳ ಹಿಂದೆ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕೊಠಡಿಯಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ 18 ವರ್ಷಗಳಿಂದ ಕಾಳಮ್ಮನಗರದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಏಳು ಎಕರೆಯಷ್ಟು ವಿಶಾಲವಾದ ಕ್ಯಾಂಪಸ್, ನ್ಯಾಕ್ ಮಾನ್ಯತೆ, ಸುಸಜ್ಜಿತ ಸ್ಮಾರ್ಟ್ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಕಂಪ್ಯೂಟರ್ ಕೊಠಡಿ, ಭೌತಶಾಸ್ತ್ರ ಪ್ರಯೋಗಾಲಯ, 19,000ಕ್ಕೂ ಹೆಚ್ಚು ಪುಸ್ತಕ ಹೊಂದಿದ ಗ್ರಂಥಾಲಯ, ಸಿಸಿಟಿವಿ ಕಣ್ಗಾವಲು, ವೈಫೈ ಹೀಗೆ ಅಗತ್ಯ ಮೂಲಸೌಕರ್ಯಗಳಿವೆ. ಆದರೆ ಬಿ.ಬಿ.ಎ. ಮತ್ತು ಬಿ.ಎಸ್.ಸಿ ತರಗತಿಗಳಿಗೆ ವಿದ್ಯಾರ್ಥಿಗಳ ಕೊರತೆ ಇದೆ.
ಬಿ.ಎ, ಬಿ.ಕಾಂ, ಬಿ.ಎಸ್‍ಸಿ., ಎಂ.ಕಾಂ, ಹಾಗೂ ಬಿ.ಬಿ.ಎ ತರಗತಿ ನಡೆಸಲು ಅನುಮತಿ ಪಡೆದಿದೆಯಾದರೂ ವಿದ್ಯಾರ್ಥಿಗಳ ಕೊರತೆಯಿಂದ ಬಿಬಿಎ ತರಗತಿ ಮುಚ್ಚಲ್ಪಟ್ಟಿದೆ. ಬಿಎಸ್‌ಸಿ ಅಂತಿಮ ವರ್ಷದಲ್ಲಿ 18 ವಿದ್ಯಾರ್ಥಿಗಳು ಮಾತ್ರ ಓದುತ್ತಿದ್ದು ಮೊದಲ ವರ್ಷಕ್ಕೆ ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ಬಿ.ಎಸ್‌ಸಿ ವಿಭಾಗವೂ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 582 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾಚಾರ್ಯರೂ ಸೇರಿದಂತೆ 6 ಕಾಯಂ ಸಹಾಯಕ ಪ್ರಾಧ್ಯಾಪಕರು ಮತ್ತು 20 ಅತಿಥಿ ಉಪನ್ಯಾಸಕರು ಇದ್ದಾರೆ. ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರ ಕೊರತೆ ಇದೆ.
‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ಇಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲದೆ ಮುಂಡಗೋಡ ತಾಲ್ಲೂಕಿನ ಮೈನಳ್ಳಿ ಹಾಗೂ ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಭಾಗದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಎಂ.ಕಾಂ ಪದವಿಗೆ ಹೊರ ಜಿಲ್ಲೆಯ ವಿದ್ಯಾರ್ಥಿಗಳೂ ಪ್ರವೇಶ ಪಡೆದಿದ್ದಾರೆ. ಹಳಿಯಾಳದ ದೇಶಪಾಂಡೆ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ವಿದ್ಯಾರ್ಥಿನಿಯರಿಗೆ ಬ್ಯೂಟಿ ಪಾರ್ಲರ್, ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇತ್ತೀಚೆಗೆ ತಾಂತ್ರಿಕ, ವೃತ್ತಿ ಆಧಾರಿತ ಶಿಕ್ಷಣದತ್ತ ಹೆಚ್ಚಿನ ಒಲವು ತೋರುತ್ತಿದ್ದು, ಪದವಿ ತರಗತಿಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಪತ್ರಾಂಕಿತ ವ್ಯವಸ್ಥಾಪಕ ನಾರಾಯಣ ಮೆಣಸೂಮನೆ.
‘ವಿದ್ಯಾರ್ಥಿಗಳಿಗೆ ಉದ್ಯೋಗ ಕೋಶದ ಮೂಲಕ ತರಬೇತಿ ಮತ್ತು ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸಲಾಗುತ್ತಿದ್ದು ಪ್ರತಿವರ್ಷ 8 ರಿಂದ 10 ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿದೆ’ ಎನ್ನುತ್ತಾರೆ ಅವರು.
‘ಕಾಲೇಜಿಗೆ ಬಸ್ ನಿಲ್ದಾಣದಿಂದ ಎರಡು ಕಿ.ಮೀ ನಡೆಯಬೇಕಿದೆ. ಬಸ್ ನಿಲ್ದಾಣದಿಂದ ಕಾಲೇಜಿಗೆ ಬಸ್ ಸೌಕರ್ಯ ಕಲ್ಪಿಸಿದಲ್ಲಿ ಅನುಕೂಲವಾಗಲಿದೆ’ ಎನ್ನುತ್ತಾರೆ ವಿದ್ಯಾರ್ಥಿನಿ ವಿಜೇತ ಗಾಂವ್ಕರ.
ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಬೇರೆಡೆ ಹೋಗುವ ಬದಲು ಸ್ಥಳೀಯವಾಗಿಯೇ ಲಭ್ಯವಿರುವ ಕಾಲೇಜಿನಲ್ಲಿ ಪ್ರವೇಶ ಪಡೆದು ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು
-ಸವಿತಾ ನಾಯಕ ಪ್ರಭಾರ ಪ್ರಾಚಾರ್ಯೆ
ಸಭಾಭವನ ಕಾಮಗಾರಿ ನನೆಗುದಿಗೆ
ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೆಲ ವರ್ಷಗಳ ಹಿಂದೆ ಮಂಜೂರಾದ ಸಭಾಭವನ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿದೆ. ‘ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಸಭಾಂಗಣದ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಇದರಿಂದ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಲು ವ್ಯವಸ್ಥಿತ ಜಾಗದ ಲಭ್ಯತೆ ಇಲ್ಲದಂತಾಗುತ್ತಿದೆ’ ಎಂದು ಉಪನ್ಯಾಸಕರೊಬ್ಬರು ಬೇಸರ ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.