ಕಾರವಾರ: ಜಿಲ್ಲೆಯಲ್ಲಿ ಆಸ್ತಿ ನೋಂದಣಿ ಪ್ರಮಾಣ ಕಳೆದ ವರ್ಷಕ್ಕಿಂತ ಇಳಿಕೆಯಾಗಿದ್ದು ಇದರಿಂದಾಗಿ ಉಪನೋಂದಣಾಧಿಕಾರಿ ಕಚೇರಿಗಳ ಮೂಲಕ ಸರ್ಕಾರಕ್ಕೆ ಸಂಗ್ರಹವಾಗಬೇಕಿದ್ದ ರಾಜಸ್ವ ನಿರ್ದಿಷ್ಟ ಗುರಿ ತಲುಪಿಲ್ಲ.
ಪ್ರತಿ ವರ್ಷ ಸರ್ಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ರಾಜಸ್ವ ಸಂಗ್ರಹಣೆಗೆ ನಿರ್ದಿಷ್ಟ ಗುರಿ ನೀಡುತ್ತದೆ. ಆರ್ಥಿಕ ವರ್ಷದ ಅವಧಿಯಲ್ಲಿ ಈ ಗುರಿ ತಲುಪುವಂತೆ ಒತ್ತಡ ಹೇರಲಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಹತ್ತು ಉಪನೋಂದಣಾಧಿಕಾರಿ ಕಚೇರಿ, ಜಿಲ್ಲಾ ನೋಂದಣಾಧಿಕಾರಿ ಕಚೇರಿ ಸೇರಿ ಒಟ್ಟು ₹62 ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿತ್ತು. ₹69.67 ಕೋಟಿ ರಾಜಸ್ವ ಸಂಗ್ರಹಿಸುವ ಮೂಲಕ ಗುರಿ ಮೀರಿ ಆದಾಯ ಸಂಗ್ರಹವಾಗಿತ್ತು.
ಆದರೆ, ಈ ಬಾರಿ ಏಪ್ರಿಲ್‍ನಿಂದ ಜನವರಿವರೆಗೆ ನೀಡಲಾದ ₹77.4 ಕೋಟಿ ಗುರಿಯ ಮೊತ್ತವನ್ನು ತಲುಪಲೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹರಸಾಹಸಪಡಬೇಕಾಗಿದೆ. ಜನವರಿ ಅಂತ್ಯದವರೆಗೆ ₹58.05 ಕೋಟಿ ಮಾತ್ರ ಸಂಗ್ರಹವಾಗಿದೆ.
‘ಆಸ್ತಿ ನೋಂದಣಿ, ಮುದ್ರಾಂಕ ಮತ್ತು ಸ್ಕ್ಯಾನಿಂಗ್ ಶುಲ್ಕ ಸಂಗ್ರಹ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಆಗಲು ಆಸ್ತಿ ನೊಂದಣಿ ಪ್ರಕ್ರಿಯೆ ಇಳಿಕೆಯಾಗಿರುವುದು ಮುಖ್ಯ ಕಾರಣ. ಕೋವಿಡ್ ಬಳಿಕ ಆರ್ಥಿಕ ಚಟುವಟಿಕೆ ಅಷ್ಟೇನೂ ವೇಗ ಪಡೆದುಕೊಂಡಿಲ್ಲ. ಆರ್ಥಿಕ ಹಿನ್ನಡೆ ಕಾರಣಕ್ಕೆ ಜಿಲ್ಲೆಯಲ್ಲಿ ಆಸ್ತಿ ವಹಿವಾಟು ಹಿಂದಿನಂತೆ ಇಲ್ಲ. ಜಮೀನುಗಳು, ಫ್ಲ್ಯಾಟ್‍ಗಳ ಮಾರಾಟವೂ ಇಳಿಕೆಯಾಗಿದ್ದು ಇದರಿಂದ ರಾಜಸ್ವ ಸಂಗ್ರಹಣೆಗೆ ಹಿನ್ನಡೆ ಆಗಿದೆ’ ಎಂದು ಜಿಲ್ಲಾ ನೋಂದಣಾಧಿಕಾರಿ ಶ್ರೀಧರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಸ್ತಿ ನೋಂದಣಿಯ ಕಾವೇರಿ ತಂತ್ರಾಂಶದಲ್ಲಿ ಪದೇ ಪದೇ ತಾಂತ್ರಿಕ ವ್ಯತ್ಯಯ ಉಂಟಾಗುತ್ತಲೇ ಇರುತ್ತದೆ. ಇದರಿಂದ ಆಸ್ತಿ ನೋಂದಣಿ ಪ್ರಮಾಣ ಹೆಚ್ಚು ನಡೆಸಲು ಸಮಸ್ಯೆ ಆಗುವುದು ಸಹಜ. ಅಲ್ಲದೆ ಬಹುತೇಕ ಕಚೇರಿಗಳಲ್ಲಿ ಉಪನೋಂದಣಾಧಿಕಾರಿಗಳೇ ಲಭ್ಯರಿರುವುದು ಕಡಿಮೆ. ಒಬ್ಬರಿಗೆ ಎರಡು ಕಡೆ ಹೊಣೆ ನೀಡುವುದರಿಂದ ಸಮಸ್ಯೆ ಉಂಟಾಗುತ್ತಿದೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹೇಳಿದರು.
ಪ್ರಸಕ್ತ ಸಾಲಿಗೆ ₹98 ಕೋಟಿ ರಾಜಸ್ವ ಸಂಗ್ರಹದ ಗುರಿ ನೀಡಲಾಗಿದ್ದು ಗುರಿ ತಲುಪುವ ವಿಶ್ವಾಸವಿದೆ–ಶ್ರೀಧರ್ ಜಿಲ್ಲಾ ನೋಂದಣಾಧಿಕಾರಿ
ಐದು ತಾಲ್ಲೂಕುಗಳಲ್ಲಿಲ್ಲ ಸಬ್ ರಿಜಿಸ್ಟ್ರಾರ್ ‘ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಇಲಾಖೆಗಳಲ್ಲಿ ಮುಂಚೂಣಿಯಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೂ ಸಿಬ್ಬಂದಿ ಕೊರತೆಯ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಈ ಹಿಂದೆ ಐದು ಉಪನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿ ಇದ್ದ ವೇಳೆ ಮಂಜೂರಾಗಿದ್ದ 34 ಹುದ್ದೆಗಳು ಹತ್ತು ಕಚೇರಿ ಆರಂಭಗೊಂಡರೂ ಹಾಗೆಯೇ ಇದೆ. ಈ ಹುದ್ದೆಗಳ ಪೈಕಿ 11 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. 23 ಹುದ್ದೆ ಖಾಲಿಯೇ ಇದೆ. ಯಲ್ಲಾಪುರ ಭಟ್ಕಳ ಹೊನ್ನಾವರ ಅಂಕೋಲಾ ಮತ್ತು ಸಿದ್ದಾಪುರದಲ್ಲಿ ಉಪನೋಂದಣಾಧಿಕಾರಿಯೇ ಇಲ್ಲ. ಪ್ರಥಮ ದರ್ಜೆ ಸಹಾಯಕರಿಗೆ ಪ್ರಭಾರ ಹುದ್ದೆ ನೀಡುವ ಸ್ಥಿತಿ ಉಂಟಾಗಿದೆ’ ಎಂಬುದು ಇಲಾಖೆಯ ಮಾಹಿತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.