ADVERTISEMENT

ಮಾರಿಗುಡಿಯಿಂದ ‘ಮಾರಿವನ’ ನಿರ್ಮಾಣವಾಗಲಿ

ಮರ ಕಡಿಯುವ ಸಂಪ್ರದಾಯ ಬದಲಾಗಲಿ: ಪರಿಸರ ತಜ್ಞರ ಅಭಿಮತ

ಸಂಧ್ಯಾ ಹೆಗಡೆ
Published 17 ಅಕ್ಟೋಬರ್ 2019, 7:42 IST
Last Updated 17 ಅಕ್ಟೋಬರ್ 2019, 7:42 IST
ಶಿರಸಿ ಮಾರಿಕಾಂಬಾ ದೇವಾಲಯ
ಶಿರಸಿ ಮಾರಿಕಾಂಬಾ ದೇವಾಲಯ   

ಶಿರಸಿ: ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ಜಾತ್ರೆ ವೇಳೆ ಮರ ಕಡಿದು ರಥ ಕಟ್ಟುವ ಸಂಪ್ರದಾಯವನ್ನು ಪರಿಸ್ನೇಹಿಯಾಗಿ ರೂಪಿಸಲು ಪರಿಸರ ತಜ್ಞರು ಸಲಹೆ ನೀಡಿದ್ದಾರೆ. ಮಾರಿಗುಡಿಯಿಂದ ‘ಮಾರಿವನ’ ನಿರ್ಮಾಣ ಮಾಡಿದರೆ, ಈ ದೇವಾಲಯ ರಾಜ್ಯಕ್ಕೆ ಮಾದರಿಯಾಗಲಿದೆ.

‘ಮಾರಿಗುಡಿಯಿಂದಲೇ ಶಿರಸಿ ಪ್ರಸಿದ್ಧಿ ಪಡೆದಿದೆ. ಮಾರಿಕಾಂಬಾ ದೇವಿಯ ಹೆಸರಿನಲ್ಲಿ ಉತ್ತರ ಕನ್ನಡದ ಜೈವಿಕ ವೈವಿಧ್ಯ ಪ್ರತಿನಿಧಿಸುವ ಉದ್ಯಾನವನ್ನು ಐದು ಎಕರೆ ಜಾಗದಲ್ಲಿ ನಿರ್ಮಾಣ ಮಾಡಿ, ಪ್ರವಾಸಿಗರನ್ನು ಸೆಳೆಯಬಹುದು. ಪಶ್ಚಿಮಘಟ್ಟದಲ್ಲಿ ವಿನಾಶದ ಅಂಚಿಗೆ ಬರುವ ಅನೇಕ ಪ್ರಭೇದಗಳಿವೆ. ಇಂತಹ ಸಸ್ಯಗಳು, ಜಿಲ್ಲೆಯ ವಿಶೇಷ ಸಸ್ಯಗಳನ್ನು ಈ ಉದ್ಯಾನದಲ್ಲಿ ಬೆಳೆಸಬಹುದು. ಕಾಳುಮೆಣಸು ಬಳ್ಳಿ, ಯಾಲಕ್ಕಿ ಗಿಡ ಇಂತಹ ಇಲ್ಲಿನ ವಿಶೇಷತೆ ನೋಡಲು ಪ್ರವಾಸಿಗರು ತೋಟ ಹುಡುಕಿಕೊಂಡು ಹೋಗಬೇಕು. ಅದರ ಬದಲಾಗಿ ಜಿಲ್ಲೆಯ ವೈಶಿಷ್ಟ್ಯಗಳನ್ನು ಒಂದೆಡೆ ಸೃಷ್ಟಿಸುವ ಪ್ರಯತ್ನ ಮಾರಿಕಾಂಬಾ ದೇವಾಲಯದಿಂದ ನಡೆಯಲಿ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಸಲಹೆ ಮಾಡಿದರು.

’ಒಣಗಿದ ಮರದ ರೆಂಬೆ–ಕೊಂಬೆಗಳನ್ನು ಬಳಸಿಕೊಂಡು ಕಲಾಕೃತಿ ರಚಿಸಿದರೆ, ಅರಣ್ಯ ಜಿಲ್ಲೆಯಲ್ಲೊಂದು ಅರಣ್ಯ ಮ್ಯೂಸಿಯಂ ಸಿದ್ಧವಾಗುತ್ತದೆ. ಕ್ರಿಯಾಶೀಲ ಚಟುವಟಿಕೆಗಳಿಗೆ ದಾನಿಗಳು, ಕಂಪನಿಗಳ ಸಿಎಸ್‌ಆರ್ ಫಂಡ್‌ಗಳು ಸಹ ಸಿಗುತ್ತವೆ. ಮಾರಿಗುಡಿಯ ಧರ್ಮದರ್ಶಿ ಮಂಡಳಿ ಇಂತಹ ಸೃಜನಶೀಲ ಕಾರ್ಯಗಳಿಗೆ ಮುಂದಾಗಬೇಕು. ಮಾರಿಕಾಂಬಾ ಜಾತ್ರೆಯ ವೇಳೆ ಮರ ಕಡಿಯುವ ಬದಲಾಗಿ, ರಥ ಕಟ್ಟಲು ಅಗತ್ಯವಿರುವಷ್ಟೇ ಪ್ರಮಾಣದಲ್ಲಿ ಟೊಂಗೆ ಬಳಸಬಹುದು. ಈ ಬಗ್ಗೆಯೂ ಯೋಚಿಸಬೇಕು’ ಎಂದು ಅವರು ‘ಪ್ರಜಾವಾಣಿ’ ಜತೆ ಮಾತನಾಡುತ್ತ ಹೇಳಿದರು.

ADVERTISEMENT

‘ಜಾತ್ರೆ, ರಥೋತ್ಸವಗಳು ಈ ಜಿಲ್ಲೆಯ ವಿಶೇಷ. ಅರಣ್ಯ ಜಿಲ್ಲೆಯಲ್ಲಿ ಮರ ಬಳಕೆ ಪಾರಂಪರಿಕವಾಗಿ ನಡೆದುಬಂದಿದೆ. ಇದಕ್ಕೆಲ್ಲ ಯಾವ ಜಾತಿಯ ಕಟ್ಟಿಗೆ ಬಳಸುತ್ತಾರೆ ಎಂದು ಅಧ್ಯಯನ ಮಾಡಿ, ಆ ಜಾತಿಯ ಮರಗಳ ವನ ಬೆಳೆಸುವ ಅಗತ್ಯವಿದೆ. ಭಟ್ಕಳದ ಸೋಡಿಗದ್ದೆ, ಸಿದ್ದಾಪುರ ಶನೇಶ್ವರ ಜಾತ್ರೆ, ಹಳಿಯಾಳದಲ್ಲಿ ಹೋಳಿಗೆ ಘನಿಕಂಬ ಸ್ಥಾಪನೆ ಹೀಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೇರೆ ಬೇರೆ ಸಸ್ಯಗಳ ಬಳಕೆ ರೂಢಿಯಲ್ಲಿದೆ. ಇದಕ್ಕಾಗಿ ವನ ನಿರ್ಮಿಸಿದರೆ ಸಸ್ಯಗಳ ಬೆಳವಣಿಗೆ ಹಂತ ಕೂಡ ಭಕ್ತರಿಗೆ ಅರಿವಾಗುತ್ತದೆ’ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

‘ಒಂದು ಮರದ ಬೆಳವಣಿಗೆಯನ್ನು ಶಿಕ್ಷಣ ಕಲಿಕೆಗಾಗಿ ಬಳಸಿಕೊಳ್ಳಬೇಕು. ಮರ ಕಡಿಯುವುದು ಸುಲಭ. ಆದರೆ, ಗಿಡವೊಂದು ಬೆಳವಣಿಗೆಯಾಗಿ ಮರವಾಗಲು ತೆಗೆದುಕೊಳ್ಳುವ ಅವಧಿಯ ಅರಿವು ಜನರಲ್ಲಿ ಮೂಡಬೇಕು. ಶಿರಸಿ ಸುತ್ತಮುತ್ತ ಮಾತ್ರವಲ್ಲ, ಕರಾವಳಿಯಲ್ಲಿಯೂ ಮಾರಿಕಾಂಬೆ ಭಕ್ತರು ಇದ್ದಾರೆ. ಅಲ್ಲಿನ ಕಲ್ಲುಬಂಡೆಯ ಜಾಗಗಳಲ್ಲಿ ಅರಣ್ಯ ಇಲಾಖೆ ಜೊತೆಗೂಡಿ ವನ ಬೆಳೆಸಲು ಮಾರಿಕಾಂಬಾ ದೇವಾಲಯ ಯೋಚಿಸಬಹುದು’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.