ADVERTISEMENT

ಗೋಕರ್ಣ: ಬೆಸ್ತರ ಕನ್ಯೆ ಗಂಗೆಯೊಂದಿಗೆ ಶಿವನ ವಿವಾಹ ನಿಶ್ಚಿತಾರ್ಥ 24ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:02 IST
Last Updated 21 ಅಕ್ಟೋಬರ್ 2024, 14:02 IST
ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತೆಯ ಅಲಂಕಾರ ಭರಿತ ಮೂರ್ತಿ
ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತೆಯ ಅಲಂಕಾರ ಭರಿತ ಮೂರ್ತಿ    

ಗೋಕರ್ಣ: ಕ್ಷೇತ್ರನಾಥ ಮಹಾಬಲೇಶ್ವರ ಮತ್ತು ಬೆಸ್ತರ ಕನ್ಯೆ ಗಂಗೆಯೊಂದಿಗಿನ ವಿವಾಹ ನಿಶ್ಚಿತಾರ್ಥ ಅ.24ರಂದು ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ 5.30ರಿಂದ 7ರ ವರೆಗೆ ಗಂಗಾಷ್ಟಮಿಯ ಪರ್ವಕಾಲದಲ್ಲಿ ನಡೆಯಲಿದೆ.

ಅಂದು ಬ್ರಾಹ್ಮಣೋತ್ತಮರು ಶಿವಗಂಗೆಯರ ಸಂವಾದವನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಭಕ್ತರಿಗೆ ತಿಳಿಯುವಂತೆ ನಡೆಸಿಕೊಡುತ್ತಾರೆ. ಇದಕ್ಕೆ ಪೂರ್ವಭಾವಿಯಾಗಿ ಅ.23ರಂದು ರಾತ್ರಿ 12 ಗಂಟೆಗೆ ಮಹಾಬಲೇಶ್ವರ ದೇವಾಲಯದಿಂದ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಡನೆ ವಾದ್ಯ ಘೋಷದೊಂದಿಗೆ ಗಂಗಾವಳಿಗೆ ಹೋಗಲಿದೆ. ಬೆಳಿಗ್ಗೆ ನೇಸರ ಮೂಡುವ ಪೂರ್ವ ಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಹೋಗುತ್ತದೆ. ಆ ಸಮಯದಲ್ಲಿ ಗಂಗೆಯು ಉದ್ಭವ ಆಗುವುದು ವಿಶೇಷವಾಗಿರುತ್ತದೆ.

ಭಕ್ತರ ಸಮ್ಮುಖದಲ್ಲಿ ಗಂಗಾಮಾತೆಯು ಮಹಾಬಲೇಶ್ವರನನ್ನು ಮದುವೆಯಾಗುವುದಾಗಿ ನಿಶ್ಚಿತಾರ್ಥ ಜರುಗುತ್ತದೆ. ಮುಂದೆ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಮತ್ತು ಗಂಗಾವಳಿಯ ಮಧ್ಯೆ ಸಮುದ್ರ ದಂಡೆಯಲ್ಲಿ ಶಿವ-ಗಂಗಾ ವಿವಾಹವು ನಡೆಯುವುದು ಎಂದು ಗಂಗಾಮಾತಾ ದೇವಾಲಯ ಆಡಳಿತ ಸಮಿತಿ ತಿಳಿಸಿದೆ.

ADVERTISEMENT

ಸಭಾ ಕಾರ್ಯಕ್ರಮ: ಗಂಗಾಷ್ಟಮಿಯ ಪ್ರಯುಕ್ತ ಅ.23ರಂದು ರಾತ್ರಿ ವಿರಾಟ ಹಿಂದೂ ಯುವಕ ಸಂಘ ಗಂಗಾವಳಿ ಇವರ ಆಶ್ರಯದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಗೋಕರ್ಣದ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ ಆಗಮಿಸಲಿದ್ದಾರೆ. ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನೀಲಗೋಡು ಯಕ್ಷಿಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾದೇವ ಅಂಬಿಗ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಮಾಜದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಸ್ಥಾನ
ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಸ್ಥಾನ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.