ಭಟ್ಕಳ: ತಾಲ್ಲೂಕಿನ ವಿಶ್ವಪ್ರಸಿದ್ಧ ಮುರ್ಡೇಶ್ವರ ಕಡಲದ ತೀರದ ವ್ಯಾಪಾರಿಗಳ ಈ ವರ್ಷದ ವ್ಯಾಪಾರವನ್ನು ಕೊರೊನಾ ನುಂಗಿ ಹಾಕಿದರೆ, ಅರಬ್ಬಿ ಸಮುದ್ರದಿಂದ ಆಕಸ್ಮಿಕವಾಗಿ ಬಂದೆರಗಿದ 'ತೌಕ್ತೆ' ಚಂಡಮಾರುತ ಅವರ ಬದುಕನ್ನೇ ಕಸಿದುಕೊಂಡಿದೆ.
ಜಿಲ್ಲೆಗೆ ಅತಿ ಹೆಚ್ಚು ಪ್ರವಾಸಿಗರು ಬರುವ ಮುರ್ಡೇಶ್ವರದಲ್ಲಿ ಡಿಸೆಂಬರ್‌ನಿಂದ ಮೇತನಕ ಉತ್ತಮ ವ್ಯಾಪಾರ ವಹಿವಾಟು ನಡೆಯುತಿತ್ತು. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಈ ತಾಣವು, ಕೋವಿಡ್ ಎರಡನೇ ಅಲೆಯ ಕಾರಣದಿಂದ ಒಂದು ತಿಂಗಳಿನಿಂದ ಸಂಪೂರ್ಣ ಸ್ತಬ್ಧವಾಗಿದೆ. ವ್ಯಾಪಾರವಿಲ್ಲದೇ ಕುಳಿತಿದ್ದವರ ಜೀವನದ ಮೇಲೆ ಚಂಡಮಾರುತ ಅಪ್ಪಳಿಸಿದೆ.
ಕಡಲತೀರದಲ್ಲಿದ್ದ ಹತ್ತಾರು ಗೂಡಂಗಡಿಗಳು, ಪ್ರವಾಸಿಗರ ಮನೋರಂಜನೆಗಾಗಿ ಬಳಸುವ ದೋಣಿಗಳು, ಆಟಿಕೆ ಸಾಮಗ್ರಿ ಸಮುದ್ರ ಅಲೆಗೆ ಸಿಲುಕಿ ಹಾನಿಗೀಡಾಗಿವೆ.
ಪರಿಹಾರಕ್ಕಾಗಿ ಮನವಿ:
'ಒಂದು ಕಡೆ ಕೊರೊನಾ ಇನ್ನೊಂದು ಕಡೆ 'ತೌಕ್ತೆ' ಚಂಡಮಾರುತ, ಇವೆರಡರಿಂದ ಕಂಗೆಟ್ಟು ಹೋಗಿದ್ದೇವೆ. ಮುಂಬರುವ ಮೂರು ತಿಂಗಳು ಮಳೆಗಾಲವಿರುತ್ತದೆ. ವ್ಯಾಪಾರ ನಂಬಿಕೊಂಡು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ನಮಗೆ ಈಗ ಸಂಸಾರ ನಡೆಸುವುದು ಕಷ್ಟಸಾಧ್ಯವಾಗಿದೆ. ಕೋವಿಡ್‌ನ ಮೊದಲನೇ ಅಲೆಯಿಂದ ಸಂಕಷ್ಟದಲ್ಲಿದ್ದ ನಮಗೆ ಸರ್ಕಾರ ಏನೂ ಪರಿಹಾರ ನೀಡಲಿಲ್ಲ. ಈಗ ಎರಡನೇ ಅಲೆಯ ಸಂಕಷ್ಟದ ಜೊತೆಗೆ ನಮ್ಮ ಬದುಕನ್ನೇ ಕಳೆದುಕೊಂಡಿದ್ದೇವೆ. ಚಂಡಮಾರುತ ನಮ್ಮ ಎಲ್ಲ ಬಂಡವಾಳವನ್ನು ಹೊತ್ತುಕೊಂಡು ಹೋಗಿ ನೀರಿಗೆ ಹಾಕಿದೆ. ಈಗ ಪುನಃ ಜೀವನ ರೂಪಿಸಲು ಸರ್ಕಾರದ ಸಹಾಯದ ಅಗತ್ಯವಿದೆ' ಎಂದು ಕಡಲತೀರದಲ್ಲಿರುವ ವ್ಯಾಪಾರಸ್ಥರು ಅಳಲು ತೋಡಿಕೊಂಡರು.
'ಲಕ್ಷಾಂತರ ರೂಪಾಯಿಗೆ ಟೆಂಡರ್ ಪಡೆದು ಕಡಲತೀರದಲ್ಲಿ ಮನರಂಜನಾ ಕ್ರೀಡೆಗಳನ್ನು ನಡೆಸುತ್ತಿದ್ದೆವು. ನಮಗೆ ಕೊರೊನಾ ಹೊಡೆತ ಕೊಟ್ಟ ಬೆನ್ನಲ್ಲೇ ತೌಕ್ತೆ ಚಂಡಮಾರುತ ಸಂಕಷ್ಟಕ್ಕೆ ನೂಕಿದೆ. ನಮ್ಮ ದೋಣಿಗಳು, ಆಟಿಕೆ ಸಾಮಗ್ರಿಗೆ ಹಾನಿಯಾಗಿದೆ. ಇವನ್ನು ಪುನಃ ದುರಸ್ತಿ ಮಾಡಬೇಕಾದರೆ ಲಕ್ಷಾಂತರ ರೂಪಾಯಿ ಅಗತ್ಯವಿದೆ. ಚಂಡಮಾರುತದಿಂದ ಹಾನಿಗೊಳಗಾದ ನಮಗೆ ಸರ್ಕಾರ ಸಹಾಯ ಮಾಡಲಿದೆ ಎಂಬ ಭರವಸೆಯಲ್ಲಿದ್ದೇವೆ' ಎನ್ನುತ್ತಾರೆ ಮುರ್ಡೇಶ್ವರದ ಓಶಿಯನ್ ಅಡ್ವೆಂಚರ್ಸ್‌ನ ವೆಂಕಟೇಶ ಹರಿಕಾಂತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.