ADVERTISEMENT

ಸಾರ್ವಜನಿಕ ತಾಣಗಳಲ್ಲಿ ಸೊಬಗು ಸೃಷ್ಟಿಸುವ ಶಿಕ್ಷಕ

ಕಾವಿ ಕಲೆ, ತ್ರೀಡಿ ಪೇಟಿಂಗ್ ಮೂಲಕ ನೋಡುಗರ ಗಮನಸೆಳೆಯಲು ಪ್ರಯತ್ನ

ಎಂ.ಜಿ.ನಾಯ್ಕ
Published 16 ಜೂನ್ 2024, 6:34 IST
Last Updated 16 ಜೂನ್ 2024, 6:34 IST
ಚಿತ್ರಕಲಾ ಶಿಕ್ಷಕ ಮಹೇಶ ಆಚಾರಿ ಶಾಲೆಯ ಗೋಡೆಯ ಮೇಲೆ ರಚಿಸಿದ ವರ್ಲಿ ಆರ್ಟ್
ಚಿತ್ರಕಲಾ ಶಿಕ್ಷಕ ಮಹೇಶ ಆಚಾರಿ ಶಾಲೆಯ ಗೋಡೆಯ ಮೇಲೆ ರಚಿಸಿದ ವರ್ಲಿ ಆರ್ಟ್   

ಕುಮಟಾ: ಪಟ್ಟಣದ ಹಲವು ದೇವಾಲಯ, ಶಾಲೆ, ಬಸ್ ತಂಗುದಾಣಗಳ ಗೋಡೆಗಳ ಮೇಲೆ ಮನಸ್ಸಿಗೆ ಮುದ ನೀಡುವ ಅತ್ಯಾಕರ್ಷಕ ಕಾವಿ ಕಲೆಯ ಚಿತ್ತಾರ ಮೂಡಿದೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ. ಇಂತಹ ಸೊಬಗು ಸೃಷ್ಟಿಗೊಳ್ಳುವುದರ ಹಿಂದೆ ಚಿತ್ರಕಲೆ ಶಿಕ್ಷಕರೊಬ್ಬರ ಆಸಕ್ತಿ ಮೈದಳೆದಿರುವುದೇ ಕಾರಣವಾಗಿದೆ.

ಪಟ್ಟಣದ ನೆಲ್ಲಿಕೇರಿ ಪಬ್ಲಿಕ್ ಸ್ಕೂಲ್‍ನ ಚಿತ್ರಕಲಾ ಶಿಕ್ಷಕ ಮಹೇಶ ಆಚಾರಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಲಿ ಆರ್ಟ್ (ಕಾವಿ ಕಲೆ) ಸೊಬಗು ಮೂಡಿಸಿದವರು. ಸ್ಟೋನ್ ಆರ್ಟ್, ತ್ರೀಡಿ ಆರ್ಟ್ ಮುಂತಾದ ಬಗೆಯ ಚಿತ್ರಕಲೆಯಲ್ಲಿಯೂ ಆಸಕ್ತಿ ಹೊಂದಿರುವ ಅವರು ಊರಿನ ಶಾಲೆ, ಆಸ್ಪತ್ರೆ, ಬಸ್ ತಂಗುದಾಣ, ಗ್ರಾಮ ಪಂಚಾಯಿತಿ ಕಚೇರಿ ಗೋಡೆಗಳ ಮೇಲೆ ನಮ್ಮ ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರ ಬಿಡಿಸುವ ಮೂಲಕ ಅವುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

‘ನಮ್ಮದೇ ಊರಿನ ಕಾಡು, ನದಿ, ಕೆರೆ, ಯಕ್ಷಗಾನ, ಸುಗ್ಗಿ ಕಲೆಗಳ, ಚಿತ್ರವನ್ನು ಊರ ಗ್ರಾಮ ಪಂಚಾಯ್ತಿ, ಆಸ್ಪತ್ರೆ, ಬಸ್ ತಂಗುದಾಣದ ಗೋಡೆಗಳ ಮೇಲೆ ಬಿಡಿಸಿದರೆ ಊರಿನ ಸಂಸ್ಕೃತಿಯ ಬಗ್ಗೆ ಎಳೆಯರಿಗೆ ಪರಿಚಯ, ಹೆಮ್ಮೆ ಉಂಟಾಗುತ್ತದೆ’ ಎಂದು ಶಿಕ್ಷಕ ಮಹೇಶ ಆಚಾರಿ ತಿಳಿಸಿದರು.

ADVERTISEMENT

‘ಸಾರ್ವಜನಿಕ ತಾಣಗಳ ಬಗ್ಗೆ ಜನರಿಗೆ ಕಾಳಜಿ ಮೂಡಿಸಲು ಚಿತ್ರಕಲೆ ನೆರವಾಗುತ್ತಿದೆ. ಅಲ್ಲದೇ ದೂರದ ಪ್ರವಾಸಿಗರಿಗೆ ಊರಿನ ವಿಶೇಷತೆಗಳ ಬಗ್ಗೆ ಅರಿವಾಗುತ್ತದೆ. ಈಗೀಗ ನಶಿಸುತ್ತಿರುವ ಕಾವಿ ಕಲೆ ನಾಡಿನ ನಾಟ್ಯ, ಸಂಗೀತ, ಪರಂಪರೆ, ಇತಿಹಾಸವನ್ನು ಮೌನವಾಗಿ ಬಿಂಬಿಸುವ ವಿಶೇಷ ಕಲೆ. ಕಲಾಸಕ್ತರು, ಗ್ರಾಮಸ್ಥರು ಬಣ್ಣ ನೀಡಿದಾಗ ಉಚಿತವಾಗಿ ಎಲ್ಲೆಡೆ ಚಿತ್ರ ಬಿಡಿಸಿದ್ದೇನೆ ಎಂದರು.

 ದೇವಾಲವೊಂದರೆ ಗೋಡೆಯ ಮೇಲೆ ಬಿಡಿಸಿದ ಯಕ್ಷಗಾನ ವೇಷಧಾರಿಯ ಚಿತ್ರ
ಮಹೇಶ ಆಚಾರಿ ಅವರ ಸ್ಟೋನ್ ಆರ್ಟ್‌
ಚಿತ್ರಕಲಾ ಶಿಕ್ಷಕ ಮಹೇಶ ಆಚಾರಿ

ಕಾವಿ ಕಲೆಯ ತರಬೇತಿ ‘ನಾನು ಕೆಲಸ ಮಾಡುವ ಕುಮಟಾದ ನೆಲ್ಲಿಕೇರಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾವಿ ಕಲೆ  ಬಗ್ಗೆ ತಿಳಿಸಲು ಯತ್ನಿಸಿದೆ. ಮೊದ ಮೊದಲು ಅವರು ಅಷ್ಟಾಗಿ ಆಸಕ್ತಿ ತೋರಲಿಲ್ಲ. ಶಾಲೆಯ ಗೋಡೆಗಳ ಮೇಲೆ ನಾನೇ ಚಿತ್ರ ಬಿಡಿಸ ತೊಡಗಿದಾಗ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸತೊಡಗಿದರು. ಕಾವಿ ಕಲೆ ಬಗ್ಗೆ ವಿದ್ಯಾರ್ಥಿಗಳ ಒಂದು ಗುಂಪಿಗೆ ತರಬೇತಿ ನೀಡುತ್ತಿದ್ದು ಕೆಲ ತಿಂಗಳ ನಂತರ ಅವರಿಂದಲೇ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಕಾರ್ಯಾಗಾರ ಹಮ್ಮಿಕೊಳ್ಳುವ ಯೋಚನೆ ಇದೆ. ಊರಿನ ಹಲವೆಡೆ ಕಾವಿ ಕಲೆ ಚಿತ್ರಕಲೆ ಬಿಡಿಸುವುದನ್ನು ಮನಗಂಡು ಸರ್ಟಿಫಿಕೇಟ್ ಆಫ್ ವರ್ಲ್ಡ್ ಬುಕ್ ರೆಕಾರ್ಡ್ ಸಂಸ್ಥೆಯವರು ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಪ್ರತಿಯಾಗಿ  ಪ್ರಮಾಣ ಪತ್ರ ಹಾಗೂ ಪದಕಗಳನ್ನು ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.