ADVERTISEMENT

ಸಿದ್ದಾಪುರ | ಶಿಕ್ಷಕರಿಂದ ಡೆಸ್ಕ್‌ಗಳಿಗೆ ಬಣ್ಣ

ಶಾಲೆಯಲ್ಲಿ ಕಳೆಯುವ ಸಮಯದ ಸದುಪಯೋಗ

ರವೀಂದ್ರ ಭಟ್ಟ, ಬಳಗುಳಿ
Published 24 ಜುಲೈ 2020, 19:30 IST
Last Updated 24 ಜುಲೈ 2020, 19:30 IST
ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಚ್ಗೆ ಬಣ್ಣ ಬಳಿಯುತ್ತಿರುವುದು
ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಚ್ಗೆ ಬಣ್ಣ ಬಳಿಯುತ್ತಿರುವುದು   

ಸಿದ್ದಾಪುರ: ಕೋವಿಡ್‌ 19, ಹಲವರ ಕೆಲಸದ ರೀತಿಯನ್ನು ಬದಲಾಯಿಸಿದೆ. ಹೊಸ ಆಲೋಚನೆಗಳಿಗೆ ದಾರಿ ಮಾಡಿದೆ. ತಾಲ್ಲೂಕಿನ ಬೇಡ್ಕಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೂ ಇದಕ್ಕೆ ಹೊರತಾಗಿಲ್ಲ.

ʼಶಾಲೆಗೆ ಮಕ್ಕಳು ಬರುತ್ತಿಲ್ಲವಲ್ಲ ಎಂದು ಸುಮ್ಮನೇ ಕುಳಿತುಕೊಳ್ಳದ ಶಿಕ್ಷಕರು, ತುಕ್ಕು ಹಿಡಿಯಲಾರಂಭಿಸಿದ್ದ ಶಾಲೆಯ ಕಬ್ಬಿಣದ ಡೆಸ್ಕ್ , ಬೆಂಚ್‌, ಟೇಬಲ್ ಮತ್ತು ಕಪಾಟುಗಳಿಗೆ ತಾವೇ ಬಣ್ಣ ಬಳಿದಿದ್ದಾರೆ. ಇದಕ್ಕೆ ಶಾಲೆಯ ಅಡುಗೆ ಸಿಬ್ಬಂದಿ ಕೂಡ ಕೈ ಜೋಡಿಸಿದ್ದಾರೆ. ಈಗಾಗಲೇ 15 ಬೆಂಚ್‌ಗಳು, ಎಂಟು ಆಲ್ಮೆರಾಗಳು ಮತ್ತು ಎರಡು ಸ್ಟ್ಯಾಂಡ್‌ಗಳಿಗೆ ಬಣ್ಣ ಬಳಿಯಲಾಗಿದೆ. ಇನ್ನೂ 20 ಬೆಂಚ್‌ಗಳಿಗೆ ಬಣ್ಣ ಹೊಡೆಯುವ ಕೆಲಸ ಬಾಕಿ ಇದ್ದು, ಆ ಕಾರ್ಯ ಮುಂದುವರಿದಿದೆ.

ಈ ಶಿಕ್ಷಕರ ವಿನೂತನ ಕಾರ್ಯವನ್ನು ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್. ಜಯಪ್ರಕಾಶ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಕೂಡ ಮೆಚ್ಚಿದ್ದಾರೆ.

ADVERTISEMENT

ಬೇಡ್ಕಣಿ ಶಾಲೆಯಲ್ಲಿ ಒಬ್ಬ ಶಿಕ್ಷಕರು ಹಾಗೂ ಐವರು ಶಿಕ್ಷಕಿಯರಿದ್ದಾರೆ. 155 ವಿದ್ಯಾರ್ಥಿಗಳಿದ್ದಾರೆ. ʼಪ್ರತಿದಿನವೂ ಶಾಲೆಗೆ ಬಂದು, ಕುಳಿತು, ವಾಪಸು ಹೋಗಬೇಕಾಗಿದ್ದರಿಂದ, ಬಣ್ಣ ಬಳಿಯುವ ವಿಚಾರವನ್ನು ನಮ್ಮ ಸಹೋದ್ಯೋಗಿಗಳ ಮುಂದಿಟ್ಟೆ. ಅದಕ್ಕೆ ಒಪ್ಪಿ, ಕೈಜೋಡಿಸಿದರುʼ ಎಂದು ಮುಖ್ಯ ಶಿಕ್ಷಕ ಕೆ.ಪಿ.ರವಿ ವಿವರಿಸಿದರು.

ʼಬಣ್ಣವನ್ನು ಶಾಲೆಯಲ್ಲಿ ಇದ್ದ ಹಣದಿಂದ ಖರೀದಿಸಿದ್ದೇವೆ. ಅನುದಾನ ಬಂದ ನಂತರ ಅದನ್ನು ಹೊಂದಿಸಿಕೊಳ್ಳುತ್ತೇವೆʼ ಎಂದೂ ಮುಖ್ಯ ಶಿಕ್ಷಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.