ADVERTISEMENT

ಕಾರವಾರ | ತಾಂತ್ರಿಕ ಸಮಸ್ಯೆ: ಬಾಗಿಲು ಮುಚ್ಚಿದ ‘ಟುಪಲೇವ್’ ವಸ್ತು ಸಂಗ್ರಹಾಲಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 14:25 IST
Last Updated 16 ನವೆಂಬರ್ 2024, 14:25 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿರುವ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ   

ಕಾರವಾರ: ಪ್ರವಾಸಿಗರು ಭೇಟಿ ನೀಡುತ್ತಿರುವ ಅವಧಿಯಲ್ಲೇ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಸ್ಥಾಪಿಸಲಾಗಿರುವ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ ಬಾಗಿಲು ಮುಚ್ಚಿದೆ. ಇದರಿಂದ ಪ್ರವಾಸಿಗರು ನಿರಾಸೆಯಿಂದ ಮರಳುವಂತಾಗಿದೆ.

ತಾಂತ್ರಿಕ ಕಾರಣ ನೀಡಿ ಕಳೆದ ಸುಮಾರು ಮೂರು ವಾರದಿಂದ ವಸ್ತು ಸಂಗ್ರಹಾಲಯ ಬಾಗಿಲು ಮುಚ್ಚಿದೆ. ಯುದ್ಧವಿಮಾನ ವಸ್ತು ಸಂಗ್ರಹಾಲಯ ವೀಕ್ಷಿಸಲು ದೂರದ ಊರುಗಳಿಂದ ಬರುತ್ತಿರುವ ಪ್ರವಾಸಿಗರು ವಿಮಾನವನ್ನು ಹೊರಗಿನಿಂದ ಕಣ್ತುಂಬಿಕೊಂಡು ಮರಳುವ ಅನಿವಾರ್ಯತೆ ಉಂಟಾಗಿದೆ.

ಯುದ್ಧವಿಮಾನದ ಬಿಡಿಭಾಗಗಳು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಕಾರವಾರಕ್ಕೆ ರವಾನೆಗೊಂಡಿದ್ದವು. ಎಂಟು ತಿಂಗಳ ಬಳಿಕ ಯುದ್ಧವಿಮಾನ ಮರುಜೋಡಣೆಗೊಂಡು ಜೂ.29 ರಂದು ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿತ್ತು. ಆರಂಭದ ನಾಲ್ಕು ತಿಂಗಳಿನಲ್ಲೇ 28 ಸಾವಿರದಷ್ಟು ಪ್ರವಾಸಿಗರು ಭೇಟಿ ನೀಡಿದ್ದರು.

ADVERTISEMENT

ಆದರೆ, ಪ್ರವಾಸಿಗರು ಕರಾವಳಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಅವಧಿ ಆರಂಭಗೊಂಡ ಆರಂಭದಲ್ಲೇ ಯುದ್ಧವಿಮಾನ ಬಾಗಿಲು ಮುಚ್ಚಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

‘ರಾಜ್ಯದ ಏಕೈಕ ಯುದ್ಧವಿಮಾನ ವಸ್ತುಸಂಗ್ರಹಾಲಯ ಕಾರವಾರದಲ್ಲಿ ಸ್ಥಾಪನೆಯಾಗಿರುವ ವಿಷಯ ತಿಳಿದು ಕುತೂಹಲದೊಂದಿಗೆ ಅದನ್ನು ವೀಕ್ಷಿಸಲು ಕುಟುಂಬ ಸಮೇತರಾಗಿ ಬಂದಿದ್ದೇವೆ. ಆದರೆ ವಿಮಾನದ ಒಳಗೆ ವೀಕ್ಷಣೆಗೆ ಅವಕಾಶ ಇಲ್ಲ ಎಂಬುದನ್ನು ತಿಳಿದು ಬೇಸರ ಉಂಟಾಯಿತು’ ಎಂದು ಹಾಸನದಿಂದ ಬಂದಿದ್ದ ಪ್ರವಾಸಿಗ ಆರ್.ವಿನೀತ್ ಹೇಳಿದರು.

‘ಯುದ್ಧವಿಮಾನದಲ್ಲಿ ಹವಾ ನಿಯಂತ್ರಕ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ವಿದ್ಯುತ್ ಸಂಪರ್ಕದಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಸುರಕ್ಷತೆಯ ಕಾರಣಕ್ಕೆ ಪ್ರವಾಸಿಗರನ್ನು ಒಳಕ್ಕೆ ಬಿಡುತ್ತಿಲ್ಲ. ಸಮಸ್ಯೆ ಪರಿಹರಿಸಿ ನಂತರವೇ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತೇವೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ವಿ.ಜಯಂತ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.