ಗೋಕರ್ಣ: ಭಾರತ ಇತಿಹಾಸದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಮಹಿಳೆಯರಲ್ಲಿ ಒಬ್ಬರೆನಿಸಿದ, ಮರಾಠಾ ವಂಶಸ್ಥರ ಮಾಳ್ವಾ ಪ್ರದೇಶದ ಮಹಾರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಇಂದಿಗೂ ಪುರಾಣ ಪ್ರಸಿದ್ಧ ಗೋಕರ್ಣ ಕ್ಷೇತ್ರದಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತಿದೆ!
ಪರಮ ಶಿವ ಭಕ್ತೆಯಾದ ಮಹಾರಾಣಿ ದೇಶದ 21 ಶಿವನ ಕ್ಷೇತ್ರದಲ್ಲಿ ಯಾತ್ರಾರ್ಥಿಗಳಿಗೆಂದು ಛತ್ರವನ್ನು ನಿರ್ಮಿಸಿದ್ದರು. ಅವುಗಳ ಪೈಕಿ ಇಲ್ಲಿಯ ರಥಬೀದಿಯಲ್ಲಿರುವ ಛತ್ರವೂ ಒಂದೆನಿಸಿದೆ.
ಸುಮಾರು 300 ವರ್ಷಗಳ ಇತಿಹಾಸವಿರುವ ಛತ್ರವು ಹಿಂದಿನ ಕಾಲದಲ್ಲಿ ಭಕ್ತರಿಗೆ ಆಶ್ರಯ ತಾಣವಾಗಿತ್ತು. ಈಗ ಅಲ್ಲಿ ವಸತಿಗೆ ಅವಕಾಶ ಇಲ್ಲವಾದರೂ, ರೇವಾಳೇಶ್ವರ ಲಿಂಗಕ್ಕೆ ಮತ್ತು ಶಿವಲಿಂಗ ಹಿಡಿದ ಅಹಲ್ಯಾಬಾಯಿ ಹೋಳ್ಕರ್ ಅವರ ಮೂರ್ತಿಗೆ ಪೂಜೆ ಸಲ್ಲಿಕೆಯಾಗುತ್ತಿದೆ.
‘ರಾಣಿ ಅಹಲ್ಯಾಬಾಯಿ ಗೋಕರ್ಣದಲ್ಲಿ ಛತ್ರ ಸ್ಥಾಪಿಸಿದ ಕಾರ್ಯಕ್ಕಾಗಿ ಅವರಿಗೆ ಮಹಾಬಲೇಶ್ವರ ದೇವಸ್ಥಾನದಲ್ಲಿ ಗೌರವ ನೀಡಲಾಗುತ್ತಿದೆ. ವರ್ಷಕ್ಕೊಮ್ಮೆ ರಥಸಪ್ತಮಿಯ ದಿನ ಅಹಿಲ್ಯಾಬಾಯಿ ಹೆಸರಿನಲ್ಲಿ ರಥೋತ್ಸವ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಪ್ರತಿ ರಥೋತ್ಸವದಲ್ಲೂ ರಥಕ್ಕೆ ಸಮರ್ಪಿಸಲು ತೆಂಗಿನಕಾಯಿಯನ್ನು ಛತ್ರದ ಹೆಸರಿನಲ್ಲಿ ಇಂದಿಗೂ ನೀಡಲಾಗುತ್ತಿದೆ’ ಎನ್ನುತ್ತಾರೆ ಛತ್ರದ ವ್ಯವಸ್ಥಾಪಕ ಚಂದ್ರಶೇಖರ ಬುಗದೆ.
‘ಮಹಾಶಿವರಾತ್ರಿಯಲ್ಲಿ ಅಮಾವಾಸ್ಯೆಯ ದಿನ ಕೊನೆಯ ಪೂಜೆ ಅಹಲ್ಯಾಬಾಯಿಯ ಹೆಸರಿನಲ್ಲಿ ನಡೆಯುತ್ತಿತ್ತು. ಕಳೆದ 30 ವರ್ಷಗಳಿಂದ ಈ ಪೂಜೆ ಕಾರಣಾಂತರದಿಂದ ಸ್ಥಗಿತಗೊಂಡಿದೆ’ ಎಂದೂ ಹೇಳಿದರು.
‘ರಾಣಿ ಅಹಿಲ್ಯಾಭಾಯಿ ಪರಮ ಶಿವಭಕ್ತೆ. ಎಲ್ಲ ರಾಜರೂ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತ ಹೋದರೆ, ಅಹಲ್ಯಾಬಾಯಿ ನಶಿಸಿಹೋಗುತ್ತಿರುವ ಶಿವ ಮಂದಿರಗಳನ್ನು ಜೀರ್ಣೋದ್ಧಾರ ಮಾಡುತ್ತ ಹೋದರು. ಒಮ್ಮೆ ಕಾಶಿಯ ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಕೈಗೆ ಏನೋ ತಾಗಿದ ಅನುಭವ ಆಯಿತಂತೆ. ತಮ್ಮ ಪುರೋಹಿತರ ಹತ್ತಿರ ಈ ವಿಷಯ ತಿಳಿಸಿದಾಗ ಮತ್ತೊಮ್ಮೆ ಹಾಗಾದರೆ ಕೂಡಲೇ ಕೈಗೆ ತಾಗಿದ ವಸ್ತುವನ್ನು ಹೆಕ್ಕಿಬಿಡು ಅಂದರಂತೆ. ಅದರಂತೆ ರಾಣಿ ಗಂಗಾನದಿಯಲ್ಲಿ ಮುಳುಗಿದಾಗ ಕೈಗೆ ತಾಗಿದ ವಸ್ತುವನ್ನು ಹೆಕ್ಕಿದಾಗ, ಅದು ಶಿವಲಿಂಗವಾಗಿತ್ತಂತೆ. ಅದರ ನೆನಪಿಗಾಗಿ ಎಲ್ಲಾ ಕಡೆಯೂ ಅಹಿಲ್ಯಾಭಾಯಿ ಕೈಯಲ್ಲಿ ಶಿವಲಿಂಗ ಹಿಡಿದ ಮೂರ್ತಿಯೇ ಸ್ಥಾಪಿಸಲ್ಪಟ್ಟಿದೆ. ಗೋಕರ್ಣದ ಛತ್ರದಲ್ಲೂ ಸಂಗಮರಿ ಕಲ್ಲಿನ ಅಹಿಲ್ಯಾಭಾಯಿ ಮೂರ್ತಿಯಿದೆ’ ಎಂದು ವಿವರಿಸಿದರು.
ರಾಣಿ ಅಹಲ್ಯಾಭಾಯಿ ಎಲ್ಲ ಶಿವನ ಕ್ಷೇತ್ರದಂತೆ ಗೋಕರ್ಣದಲ್ಲೂ ಯಾತ್ರಾರ್ಥಿಗಳ ಅನುಕೂಲಕ್ಕೆಂದು ಛತ್ರವನ್ನು ಸ್ಥಾಪಿಸಿದ್ದರು. ಈ ಛತ್ರಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ.ಚಂದ್ರಶೇಖರ ಬುಗದೆ ಛತ್ರದ ವ್ಯವಸ್ಥಾಪಕ
ರಾಜ್ಯಭಾರದ ಬಳಿಕ ಗೋಕರ್ಣ ಭೇಟಿ ‘ಮರಾಠಾ ವಂಶದ ಮಾಳ್ವಾ ಪ್ರದೇಶವನ್ನು ಆಳುತ್ತಿದ್ದ ಹೋಳ್ಕರ್ ವಂಶದ ರಾಣಿ ಅಹಿಲ್ಯಾಬಾಯಿ ಹೋಳ್ಕರ್ ತಮ್ಮ ಪತಿ ನಿಧನರಾದ ಬಳಿಕ ರಾಜ್ಯಭಾರ ವಹಿಸಿಕೊಂಡು ಗೋಕರ್ಣಕ್ಕೆ ಬಂದಿದ್ದರು. ಇದಕ್ಕೂ ಮುನ್ನ ಕಾಶಿಗೂ ಅವರು ಭೇಟಿ ನೀಡಿದ್ದರು. ಪುಣ್ಯಕ್ಷೇತ್ರವಾಗಿದ್ದ ಸ್ಥಳದಲ್ಲಿ ಅವರ ಮನೆ ದೇವರಾದ ರೇವಾಳೇಶ್ವರ ಲಿಂಗವನ್ನು ಸ್ಥಾಪಿಸಿ ಗೋಕರ್ಣಕ್ಕೆ ಬರುವ ಭಕ್ತರಿಗೆ ನೆರವಾಗಲು ಛತ್ರ ನಿರ್ಮಿಸಿದ್ದರು’ ಎಂಬುದಾಗಿ ಛತ್ರದ ವ್ಯವಸ್ಥಾಪಕ ಚಂದ್ರಶೇಖರ ಬುಗದೆ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.