ಗೋಕರ್ಣ: ಇಲ್ಲಿಯ ಮಹಾಬಲೇಶ್ವರ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೇಮಿಸಿದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ, ಶುಕ್ರವಾರ ಗೋಕರ್ಣಕ್ಕೆ ಭೇಟಿ ನೀಡಿದರು. ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.
2021ರ ಏಪ್ರಿಲ್‌ನಲ್ಲಿ ನ್ಯಾಯಾಲಯವು ಇವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ ಬಳಿಕ ಗೋಕರ್ಣಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ಆತ್ಮಲಿಂಗಕ್ಕೆ ಪಂಚಾಮೃತ, ರುದ್ರಾಭಿಷೇಕ ಮುಂತಾದ ಪೂಜೆ ಸಲ್ಲಿಸಿ, ಒಳಿತಿಗಾಗಿ ಪ್ರಾರ್ಥನೆಗೈದರು. ಆಡಳಿತ ಮಂಡಳಿಯ ಸದಸ್ಯರು ಎಲ್ಲಾ ಕಾರ್ಯಗಳನ್ನು ನಡೆಸಿಕೊಟ್ಟರು.
ಸಮಿತಿಯ ಸದಸ್ಯರ ಸಭೆ:
ಮೇಲುಸ್ತುವಾರಿ ಸಮಿತಿ ರಚನೆಯಾದ ನಂತರ ಇದೇ ಪ್ರಥಮ ಬಾರಿಗೆ ಮಹಾಬಲೇಶ್ವರ ದೇವಸ್ಥಾನದಲ್ಲಿಯೇ ಬಿ.ಎನ್.ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯರ ಸಭೆ ನಡೆಯಿತು.
ಎರಡುವರೆ ಗಂಟೆಗಳಿಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಲಾಯಿತು. ದೇವಸ್ಥಾನದ ಅಭಿವೃದ್ಧಿ, ಆರ್ಥಿಕ ವ್ಯವಹಾರಗಳು, ಪೂಜಾ ವಿವಾದದ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಯಿತು. ಪೂಜಾ ವಿವಾದದ ಬಗ್ಗೆ ಸಮಿತಿಯು ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಂದಿನ ಎರಡು ತಿಂಗಳು ಯಥಾಸ್ಥಿತಿ ಕಾಪಾಡುವಂತೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
‘ದೇವಸ್ಥಾನದ ಆಯವ್ಯಯ, ಅಭಿವೃದ್ಧಿ ಮತ್ತು ಭಕ್ತರಿಗೆ ಸೌಲಭ್ಯದ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಅಧ್ಯಕ್ಷರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಅವುಗಳನ್ನು ಜಾರಿಗೆ ತರಲಾಗುವುದು’ ಎಂದು ಸಮಿತಿಯ ಕಾರ್ಯದರ್ಶಿಯಾಗಿರುವ ರಾಘವೇಂದ್ರ ಜಗಳಸಾರ್ ತಿಳಿಸಿದರು.
ಮನವಿ ಸಲ್ಲಿಕೆ:
ದೇವಸ್ಥಾನದ ತಾಂತ್ರಿಕತೆ, ಬಲಿ ಮತ್ತು ಪೂಜಾ ಹಕ್ಕಿಗೆ ಸಂಬಂಧ ಪಟ್ಟಂತೆ ಅನುವಂಶೀಯ ಉಪಾಧಿವಂತ ಮಂಡಳಿಯ ಸದಸ್ಯರು ಸಮಿತಿಯ ಅಧ್ಯಕ್ಷ ಬಿ.ಎನ್.ಶ್ರೀಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಮೊದಲು ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ನೇತೃತ್ವದಲ್ಲಿ ಸಮಿತಿಯು ಅಧ್ಯಕ್ಷರನ್ನು ಶಾಲು ಹೊದಿಸಿ ಗೌರವಿಸಲಾಯಿತು. ನಂತರ ಅನುವಂಶೀಯ ಉಪಾಧಿವಂತರ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಉಳಿದ ಸದಸ್ಯರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಕುಮಟಾ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಳಾಸರ್, ಪ್ರಮುಖರಾದ ಮುರಳೀಧರ ಪ್ರಭು, ಮಹಾಬಲೇಶ್ವರ ಉಪಾಧ್ಯಾಯ, ಪರಮೇಶ್ವರ ಮಾರ್ಕಾಂಡೆ ಮತ್ತು ದತ್ತಾತ್ರೇಯ ಹಿರೇಗಂಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.