ADVERTISEMENT

ಬಿಸಿಲಿಗೆ ಏರಿದ ಬೇಡಿಕೆ: ಗಗನಕ್ಕೆ ಏರಿದ ಎಳನೀರಿನ ದರ

ಧಗೆ ಹೆಚ್ಚಳ: ಹೆಚ್ಚಿದ ಬೇಡಿಕೆಯ ಪರಿಣಾಮದಿಂದ ₹40ರ ಬದಲು ₹50ಕ್ಕೆ ಜಿಗಿತ

​ಪ್ರಜಾವಾಣಿ ವಾರ್ತೆ
Published 27 ಮೇ 2023, 4:49 IST
Last Updated 27 ಮೇ 2023, 4:49 IST
ಕಾರವಾರ ನಗರದ ಎಂ.ಜಿ.ರಸ್ತೆಯಲ್ಲಿ  ವ್ಯಾಪಾರಿಯೊಬ್ಬರು ಎಳನೀರು ಮಾರಾಟ ಮಾಡುತ್ತಿರುವುದು
ಕಾರವಾರ ನಗರದ ಎಂ.ಜಿ.ರಸ್ತೆಯಲ್ಲಿ  ವ್ಯಾಪಾರಿಯೊಬ್ಬರು ಎಳನೀರು ಮಾರಾಟ ಮಾಡುತ್ತಿರುವುದು   

ಕಾರವಾರ: ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ತಂಪುಪಾನೀಯಗಳಿಗೆ ಜನರು ಮೊರೆಹೋಗುತ್ತಿದ್ದಾರೆ. ಆರೋಗ್ಯ ರಕ್ಷಣೆಯ ಕಾರಣಕ್ಕೆ ಎಳನೀರು ಸೇವಿಸುವವರ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಬೇಡಿಕೆ ವೃದ್ಧಿಯಾಗಿದೆ. ಜತೆಗೆ ದರವೂ ದಿಢೀರ್ ಏರಿಕೆ ಕಂಡಿದೆ.

ಕಳೆದ ಕೆಲವು ತಿಂಗಳ ಹಿಂದೆ ₹35 ಇದ್ದ ದರ ನಾಲ್ಕು ತಿಂಗಳ ಹಿಂದೆ ₹40ಕ್ಕೆ ಏರಿಕೆ ಕಂಡಿತ್ತು. ನಗರದ ಮಾರುಕಟ್ಟೆಯಲ್ಲಿ ಎರಡು ದಿನದಿಂದ ಎಳನೀರಿನ ದರ ₹50ಕ್ಕೆ ಜಿಗಿತ ಕಂಡಿದೆ. ಎಂ.ಜಿ.ರಸ್ತೆ, ಪಿಕಳೆ ರಸ್ತೆ ಸೇರಿದಂತೆ ವಿವಿಧೆಡೆ ಎಳನೀರು ಮಾರುವವರು ದರ ಏರಿಕೆ ಮಾಡಿದ್ದಾರೆ.

ಬಹುತೇಕ ವ್ಯಾಪಾರಿಗಳ ಬಳಿ ಎಳನೀರು ದಾಸ್ತಾನು ಕೂಡ ಇಲ್ಲ. ಕೆಲವರು ಮಾತ್ರ ಹೆಚ್ಚು ದಾಸ್ತಾನು ತರಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಬೇಸಿಗೆಯಲ್ಲಿ ನಿತ್ಯ ಎಳನೀರು ಸೇವಿಸುತ್ತಿದ್ದವರು ಹೆಚ್ಚಿನ ದರ ಕಂಡು ಹೌಹಾರಿದ್ದಾರೆ.

ADVERTISEMENT

‘ಸೆಕೆಗೆ ಬಸವಳಿದವರಿಗೆ ಎಳನೀರು ಶಕ್ತಿವರ್ಧಕದಂತಾಗಿದೆ. ಅಲ್ಲದೆ ರೋಗಿಗಳಿಗೂ ಅತಿ ಅಗತ್ಯವೆನಿಸಿದೆ. ಹೀಗಾಗಿ ವ್ಯಾಪಾರ ವಹಿವಾಟು ಜೋರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ದರ ಏರಿಕೆ ಮಾಡಿರುವುದು ಸರಿಯಲ್ಲ’ ಎನ್ನುತ್ತಾರೆ ಕೋಡಿಬಾಗದ ನಿವಾಸಿ ಸುರೇಶ ನಾಯ್ಕ.

ದರ ಹೆಚ್ಚಳ ಅನಿವಾರ್ಯ ಬೇಸಿಗೆ ಅವಧಿಯಲ್ಲಿ ನಗರಕ್ಕೆ ಬನವಾಸಿ ಸಾಗರ ಭದ್ರಾವತಿ ಭಾಗದಿಂದ ಹೆಚ್ಚಾಗಿ ಎಳನೀರು ಪೂರೈಕೆ ಆಗುತ್ತಿದೆ. ಈಚೆಗೆ ಪೂರೈಕೆ ಕಡಿಮೆ ಆಗಿದೆ. ನಾವು ಇನ್ನೂರು ಎಳನೀರಿಗೆ ಬೇಡಿಕೆ ಇಟ್ಟರೆ 80 ಅಥವಾ 100 ಎಳನೀರು ಮಾತ್ರ ನೀಡುತ್ತಿದ್ದಾರೆ. ಅಲ್ಲದೆ ಅವರು ಕೇಳಿದಷ್ಟು ದರ ನೀಡಿ ಖರೀದಿಸಬೇಕಾಗಿರುವ ಕಾರಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ವ್ಯಾಪಾರಿ ನಾರಾಯಣ ಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.