ADVERTISEMENT

ಜೊಯಿಡಾ: ತೇರಾಳಿಗೆ ತೆರಳಲು ಬೇಕಿದೆ ರಸ್ತೆ

ಅರಣ್ಯ ಇಲಾಖೆ ಬಿಗು ನಿಯಮ ಆರೋಪ: ರಸ್ತೆ ಸೌಕರ್ಯದಿಂದ ವಂಚಿತವಾದ ಗ್ರಾಮ

ಜ್ಞಾನೇಶ್ವರ ಜಿ.ದೇಸಾಯಿ
Published 11 ಜನವರಿ 2023, 0:15 IST
Last Updated 11 ಜನವರಿ 2023, 0:15 IST
ಜೊಯಿಡಾ ತಾಲ್ಲೂಕಿನ ಕಿರವತ್ತಿಯಿಂದ ತೇರಾಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಜನರು ಸುಮಾರು 15 ಕಿಮೀ ದೂರ ಪಾತಾಗುಡಿ,ಸಿರೋಳೆಗೆ ನಡೆದುಕೊಂಡು ಹೋಗಬೇಕು.
ಜೊಯಿಡಾ ತಾಲ್ಲೂಕಿನ ಕಿರವತ್ತಿಯಿಂದ ತೇರಾಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಜನರು ಸುಮಾರು 15 ಕಿಮೀ ದೂರ ಪಾತಾಗುಡಿ,ಸಿರೋಳೆಗೆ ನಡೆದುಕೊಂಡು ಹೋಗಬೇಕು.   

ಜೊಯಿಡಾ: ಇದು ಕರ್ನಾಟಕ ರತ್ನ ದಿವಂಗತ ಪುನಿತ್ ರಾಜ್ ಕುಮಾರ್ ಎರಡು ದಿನ ಭೇಟಿ ನೀಡಿ ಜನರೊಂದಿಗೆ ಬೆರೆತ ಗ್ರಾಮ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆ ಈ ಗ್ರಾಮಕ್ಕೆ ಹೆಚ್ಚು ಹೋಲಿಕೆ ಯಾಗುತ್ತದೆ. ಸರ್ವ ಋತು ರಸ್ತೆ ಹಾಗೂ ಬಸ್ ವ್ಯವಸ್ಥೆ ಗ್ರಾಮದ ಜನರ ಪ್ರಮುಖ ಬೇಡಿಕೆ.

ತಾಲ್ಲೂಕಿನ ಕುಂಬಾರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೇರಾಳಿ ಗ್ರಾಮಕ್ಕೆ ರಸ್ತೆ ಇಲ್ಲ. ಈ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರಣ ಅರಣ್ಯ ಇಲಾಖೆ ರಸ್ತೆ ಡಾಂಬರೀಕರಣಕ್ಕೆ ಅನುಮತಿ ನೀಡದ ಕಾರಣ ಈ ಭಾಗ ಜನರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾಮಣೆ, ಸಿರೋಳೆ ಹಾಗೂ ಪಾತಾಗುಡಿ ಗ್ರಾಮಗಳು ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿವೆ. ಗ್ರಾಮದ ಒಟ್ಟು ಜನಸಂಖ್ಯೆ ಸುಮಾರು 550 ಕ್ಕೂ ಹೆಚ್ಚಿದೆ. ಭಾಮಣೆ, ಸಿರೋಳೆ ಹಾಗೂ ಪಾತಾಗುಡಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಮೂರು ಶಾಲೆಗಳು ಅತಿಥಿ ಶಿಕ್ಷಕರನ್ನು ಅವಲಂಬಿಸಿವೆ. ಕಾಯಂ ಶಿಕ್ಷಕರ ಕೊರತೆ ಇಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಶಿಕ್ಷಕರ ಕೊರತೆ ಹಾಗೂ ಸಾರಿಗೆ ವ್ಯವಸ್ಥೆ ಇರದ ಕಾರಣ ಗ್ರಾಮಸ್ಥರು ಜೋಯಿಡಾದಲ್ಲಿ ಬಾಡಿಗೆ ಮನೆ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ.

ADVERTISEMENT

ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸೌಲಭ್ಯ ಇಲ್ಲ. ಮಾರುಕಟ್ಟೆ, ಆಸ್ಪತ್ರೆ , ಕಚೇರಿಕ್ಕೆ 15 ಕಿ.ಮೀ. ದೂರದ ಕುಂಬಾರವಾಡ ಅಥವಾ 25 ಕಿ.ಮೀ. ದೂರದ ಜೋಯಿಡಾಕ್ಕೆ ಬರಬೇಕು.

‘ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಂದರೂ ಅದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ. 7 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈವರೆಗೂ ಆಗಿಲ್ಲ’ ಎನ್ನುತ್ತಾರೆ ತೆರಾಳಿ ಗ್ರಾಮಸ್ಥರು.

‘ನಮ್ಮಲ್ಲಿ ಮೂರು ಶಾಲೆಗಳಿದ್ದು ಮೂರು ಶಾಲೆಗಳು ಅತಿಥಿ ಶಿಕ್ಷಕರನ್ನು ಅವಲಂಬಿಸಿವೆ ಕಾಯಂ ಶಿಕ್ಷಕರ ನೇಮಕಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸಿರೋಳಿ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಮಲಾಕರ ಗಾವಡಾ.

ಅನಗತ್ಯ ಆರೋಪ:

‘ಅರಣ್ಯ ಇಲಾಖೆ ತೇರಾಳಿ ರಸ್ತೆಗೆ ಅನುಮತಿ ನೀಡುತ್ತಿಲ್ಲ ಎಂಬ ಆರೋಪ ಸರಿಯಲ್ಲ. ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ಪ್ರಾರಂಭದಲ್ಲಿ ಅಥವಾ ನಿಗದಿತ ಸಮಯದಲ್ಲಿ ಕೇಂದ್ರ ಸರ್ಕಾರದ ಇ–ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದರೆ ವನ್ಯಜೀವಿ ವಿಭಾಗದಿಂದ ನಿರಪೇಕ್ಷಣಾ ಪತ್ರ ನೀಡಲು ಅವಕಾಶ ಸಿಗಬಹುದು. ಹಲವು ಬಾರಿ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಲಾಗಿದೆ. ಶೀಘ್ರದಲ್ಲಿ ಸಂಬಂಧಿಸಿದವರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇವೆ’ ಎಂದು ಕುಂಬಾರವಾಡ ಎ.ಸಿ.ಎಫ್. ಅಮರಾಕ್ಷರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

---------------

ತೇರಾಳಿ ಗ್ರಾಮ ಹಾಗೂ ಡಿಗ್ಗಿ ಭಾಗಕ್ಕೆ ತುರ್ತಾಗಿ ರಸ್ತೆ ಹಾಗೂ ಬಸ್ ವ್ಯವಸ್ಥೆ ಆಗಬೇಕು.

ರತ್ನಾಕರ ದೇಸಾಯಿ

ಗ್ರಾಮ ಪಂಚಾಯ್ತಿ ಸದಸ್ಯ

––––––––––––––––

ಭಾಮಣೆ-ಸಿರೋಳೆ ಹಾಗೂ ಪಾತಾಗುಡಿ ರಸ್ತೆಯನ್ನು ತಲಾ ₹15 ಲಕ್ಷ ವೆಚ್ಚದಲ್ಲಿ ದುರಸ್ತಿ ಪಡಿಸಲಾಗಿದೆ. ಸಿರೋಳೆ ರಸ್ತೆಗೆ ತಡೆಗೋಡೆ ನಿರ್ಮಾಣ ಕಾರ್ಯವು ನಡೆಯುತ್ತಿದೆ.

ಮುಹಮ್ಮದ್ ಇಜಾನ್ ಸಬೂರ

ಪಂಚಾಯತರಾಜ್ ಎಂಜಿನಿಯರಿಂಗ್ ಜೊಯಿಡಾ ವಿಭಾಗದ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.