ADVERTISEMENT

ಮುರುಡೇಶ್ವರ ಶಿವನ ವಿಗ್ರಹದ ಚಿತ್ರ ವಿರೂಪಗೊಳಿಸಿ ಐಸಿಸ್ ಪತ್ರಿಕೆಯಲ್ಲಿ ಪ್ರಕಟ!

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 2:03 IST
Last Updated 23 ನವೆಂಬರ್ 2021, 2:03 IST
ಮುರುಡೇಶ್ವರದ ಶಿವನ ವಿಗ್ರಹದ ಚಿತ್ರವನ್ನು ವಿರೂಪಗೊಳಿಸಿ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎನ್ನಲಾಗಿರುವ ಚಿತ್ರ
ಮುರುಡೇಶ್ವರದ ಶಿವನ ವಿಗ್ರಹದ ಚಿತ್ರವನ್ನು ವಿರೂಪಗೊಳಿಸಿ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎನ್ನಲಾಗಿರುವ ಚಿತ್ರ   

ಕಾರವಾರ: ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಶಿವನ ವಿಗ್ರಹದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಉಗ್ರ ಸಂಘಟನೆ ‘ಐಸಿಸ್’ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳು ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂಬ ಫೇಸ್‌ಬುಕ್ ಹಾಗೂ ಟ್ವಿಟರ್‌ನ ಬರಹವೊಂದು ಸಾಮಾಹಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಂಶುಲ್ ಸಕ್ಸೇನಾ ಎಂಬುವವರು ಇದನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿ ಸರ್ಕಾರಗಳ ಗಮನ ಸೆಳೆಯಲು ಯತ್ನಿಸಿದ್ದಾರೆ. ‘ಐಸಿಸ್’ ಮುಖವಾಣಿ ಪತ್ರಿಕೆ ‘ದಿ ವಾಯ್ಸ್ ಆಫ್ ಹಿಂದ್’ನಲ್ಲಿ ಮುರುಡೇಶ್ವರದ ಶಿವನ ವಿಗ್ರಹವನ್ನು ಪ್ರಕಟಿಸಲಾಗಿದೆ. ಅದರ ಮೇಲೆ ‘ಇದು ನಕಲಿ ದೇವರನ್ನು ಒಡೆಯುವ ಸಮಯ’ (Its time to Break False Gods) ಎಂಬ ವಾಕ್ಯವನ್ನು ಬರೆಯಲಾಗಿದೆ.

ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ತಲೆಯ ಭಾಗದಲ್ಲಿ ಉಗ್ರ ಸಂಘಟನೆಯ ಮಾದರಿಯ ಧ್ವಜ ಹಾರಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ಕುರಿತು ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

ADVERTISEMENT

ಈ ಬಗ್ಗೆ ಪೊಲೀಸ್ ಇಲಾಖೆಯಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಮುರುಡೇಶ್ವರದ ಶಿವನ ವಿಗ್ರಹದ ಚಿತ್ರವನ್ನು ವಿರೂಪಗೊಳಿಸಿ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎಂದು ಅಂಶುಲ್ ಸಕ್ಸೇನಾ ಎಂಬುವವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಕ್ರಮಕ್ಕೆ ಆಗ್ರಹಿಸಿರುವುದು

***

ಹೆಚ್ಚಿನ ಭದ್ರತೆಗೆ ಕ್ರಮ:ಶಾಸಕ ಸುನೀಲ ನಾಯ್ಕ

ಭಟ್ಕಳ ವರದಿ: ‘ಐಸಿಸ್ ಉಗ್ರ ಸಂಘಟನೆಯ ವಾಯ್ಸ ಆಫ್ ಹಿಂದ್ ಪತ್ರಿಕೆಯು ಮುರುಡೇಶ್ವರದ ಶಿವನ ಮೂರ್ತಿಯನ್ನು ಕೆಡವಿದಂತೆ ತನ್ನ ಮುಖಪುಟದಲ್ಲಿ ಪ್ರಕಟಿಸಿರುವುದು ಸಾಮಾಜಿಕ ಜಾಲತಾಣದ ಮೂಲಕ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಗೃಹ ಸಚಿವರ ಜೊತೆ ದೂರವಾಣಿ ಮೂಲಕ ಚರ್ಚಿಸಲಾಗಿದೆ. ದೇಗುಲದ ಸುತ್ತ ಹೆಚ್ಚಿನ ಭದ್ರತೆಗೆ ಕ್ರಮ ವಹಿಸಲಾಗುವುದು’ ಎಂದು ಶಾಸಕ ಸುನೀಲ ನಾಯ್ಕ ತಿಳಿಸಿದ್ದಾರೆ.

‘ಹಿಂದೂ ದೇವಾಲಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಮ್ಮ ಪಕ್ಷದ ತತ್ವ ಮತ್ತು ಸಿದ್ಧಾಂತಗಳಲ್ಲಿ ಒಂದಾಗಿದೆ. ಉಗ್ರ ಸಂಘಟನೆಯ ಹೆಡೆ ಮುರಿಕಟ್ಟಲು ನಮ್ಮ ರಕ್ಷಣಾ ಇಲಾಖೆಯು ಸದೃಢ ಮತ್ತು ಸಶಕ್ತವಾಗಿದೆ. ಇಂತಹ ಪೊಳ್ಳು ಬೆದರಿಕೆಗೆ ಹೆದರುವ ಆಡಳಿತ ವ್ಯವಸ್ಥೆ ಈಗಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.