ದಾಂಡೇಲಿ: ನಗರದ ಸೋಮಾನಿ ವೃತ್ತದಿಂದ ಬಾಂಬುಗೇಟ್‌ನ ರಸ್ತೆಯ ವರೆಗೆ ಬೀದಿಬದಿ ವ್ಯಾಪಾರಕ್ಕೆ ನಗರಸಭೆಯ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಅಲ್ಲಿನ ವ್ಯಾಪಾರಿಗಳಿಗೆ ಬಸವೇಶ್ವರ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ತಿಳಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಸೋಮಾನಿ ವೃತ್ತದಿಂದ ಬಾಂಬುಗೇಟ್‌ನ ರಸ್ತೆಯಲ್ಲಿ ಮೊದಮೊದಲು ಒಂದೆರಡು ತರಕಾರಿ ಅಂಗಡಿಕಾರರು ಮಾತ್ರ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಅಂಗಡಿಗಳ ಸಂಖ್ಯೆ ಹೆಚ್ಚಾಗಿ, ನಿತ್ಯವು ರಸ್ತೆಯಲ್ಲಿ ಸಂತೆಯ ವಾತಾವರಣ ನಿರ್ಮಾಣವಾಗುತ್ತಿತ್ತು. ಇದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಹೆಚ್ಚಾಗಿತ್ತು.
ಸಾರ್ವಜನಿಕ ಆಸ್ಪತ್ರೆ, ನಾಡಕಚೇರಿ, ಗ್ರಂಥಾಲಯ, ಬಂಗೂರನಗರ ಮತ್ತು ಪ್ರೌಢಶಾಲೆ ಇದೇ ರಸ್ತೆಯಲ್ಲಿದ್ದು, ಜನತಾ ವಿದ್ಯಾಲಯ ಸೇರಿದಂತೆ ನಗರದ ವಿವಿಧ ಕಾಲೇಜುಗಳಿಗೆ ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಕಾರ್ಮಿಕರೂ ಇದೇ ರಸ್ತೆಯ ಮೂಲಕ ಹೋಗಬೇಕು. ಜನದಟ್ಟಣೆ ನಿಯಂತ್ರಿಸಲು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು.
ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಸೋಮಾನಿ ವೃತ್ತದಿಂದ ಬರ್ಚಿ ರಸ್ತೆಯವರೆಗೆ ಬೀದಿಬದಿ ವ್ಯಾಪಾರ ನಡೆಸದಂತೆ ಕ್ರಮ ಕೈಗೊಂಡಿದ್ದು, ರಸ್ತೆಬದಿಯಲ್ಲಿ ಸಾರ್ವಜನಿಕ ಪ್ರಕಟಣಾ ಫಲಕಗಳನ್ನು ಹಾಕಿದ್ದಾರೆ. ಒಂದು ವೇಳೆ ವ್ಯಾಪಾರ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
‘ವ್ಯಾಪಾರಿಗಳನ್ನು ಬಸವೇಶ್ವರ ನಗರದಲ್ಲಿನ ಮಾರುಕಟ್ಟೆಗೆ ವರ್ಗಾವಣೆ ಮಾಡುವ ಕೆಲಸ ನಡೆಯುತ್ತಿದೆ. ಅಲ್ಲಿಯೇ ವ್ಯಾಪಾರ ಮಾಡಬೇಕು’ ಎಂದು ಪೌರಾಯುಕ್ತ ರಾಜಾರಾಮ ಪವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.