ಶಿರಸಿ: ‘ದೇಶದ ಎಲ್ಲಾ ಭೂಮಿ ಹಕ್ಕಿನ ಫಲಶ್ರುತಿಯಲ್ಲಿ ಹೋರಾಟದ ಇತಿಹಾಸವಿದೆ. ಹೋರಾಟವಿಲ್ಲದೇ ನ್ಯಾಯವಿಲ್ಲ. ಅದರಂತೆ, ಅರಣ್ಯ ಭೂಮಿ ಹಕ್ಕು ಪ್ರಾಪ್ತವಾಗುವವರೆಗೂ ಹೋರಾಟದ ಗರ್ಜನೆ ನಿಲ್ಲಿಸದೆ ಮಲಗಿರುವ ಸರ್ಕಾರವನ್ನು ಎದ್ದೇಳಿಸಿರಿ’ ಎಂದು ಸಾಮಾಜಿಕ ಚಿಂತಕ ಕಾಗೋಡು ತಿಮ್ಮಪ್ಪ ಅರಣ್ಯವಾಸಿಗಳಿಗೆ ಕರೆ ನೀಡಿದರು.
ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಗುರುವಾರ ಅರಣ್ಯಭೂಮಿ ಹಕ್ಕು ಹೋರಾಟಗಾರ ವೇದಿಕೆಯ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯ ಭೂಮಿ ಹಕ್ಕಿನ 33 ವರ್ಷದ ಹೋರಾಟದ ಅಂಗವಾಗಿ ಏರ್ಪಡಿಸಿದ ‘ಅರಣ್ಯ ವಾಸಿಗಳ ಚಿಂತನ’ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಭೂಮಿ ಮಾನವನ ಸಂವಿಧಾನ ಬದ್ಧ ಹಕ್ಕು. ಕಾನೂನು ಬಂದರೂ ಮಂಜೂರಿಯಲ್ಲಿ ವಿಫಲರಾಗಿದ್ದೇವೆ. ಜನಪ್ರತಿನಿಧಿಗಳ ನಿರಾಸಕ್ತಿ ಇದಕ್ಕೆ ಕಾರಣವಾಗಿದೆ. ಹೋರಾಟದೊಂದಿಗೆ ಕಾನೂನು ಜಾಗೃತಿ ಮೂಡಿಸಿ’ ಎಂದು ಹೇಳಿದರು.
ಹೋರಾಟಗಾರ ರವೀಂದ್ರ ನಾಯ್ಕ ಮಾತನಾಡಿ, ‘ಅರಣ್ಯ ಅತಿಕ್ರಮಣದಾರರ ಸಂದಿಗ್ಧತೆಯನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹೋರಾಟದ ಮೂಲಕ ಶಮನ ಮಾಡುವ ಪ್ರಯತ್ನ ನಡೆಸುತ್ತಿದೆ. ಐದು ಸಾವಿರಕ್ಕಿಂತ ಹೆಚ್ಚು ವಿವಿಧ ರೀತಿಯ ಹೋರಾಟ ಮೂಲಕ ವಿಭಿನ್ನ ಮತ್ತು ಸಾಂಘಿಕ ಹೋರಾಟವನ್ನು ಈವರೆಗೆ ಹಮ್ಮಿಕೊಂಡಿದ್ದು ಇತಿಹಾಸ. ಅನಕ್ಷರಸ್ಥ, ಗ್ರಾಮೀಣ ಮತ್ತು ಗುಡ್ಡಗಾಡು ಜನರಲ್ಲಿ ಹೋರಾಟ ಮತ್ತು ಕಾನೂನು ಜಾಗೃತಿ ಮೂಡಿಸುತ್ತ ಹೋರಾಟ ಜೀವಂತಿಕೆ ಇಟ್ಟುಕೊಳ್ಳಲಾಗುವುದು’ ಎಂದರು.
ವೇದಿಕೆ ಪ್ರಧಾನ ಸಂಚಾಲಕ ಜಿ.ಎಂ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಭೂಮಿ ಹಕ್ಕಿಗಾಗಿ ಕಾನೂನು ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ವೇದಿಕೆಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ ಉಪಸ್ಥಿತರಿದ್ದರು. ಪ್ರಮುಖರಾದ ಪಾಂಡುರಂಗ ನಾಯ್ಕ ಬೆಳೆಕೆ, ಸದಾನಂದ ತಿಗಡಿ, ರಮಾನಂದ ನಾಯ್ಕ ಅಂಕೋಲಾ, ಮಾಬ್ಲೇಶ್ವರ್ ನಾಯ್ಕ ಬೇಡ್ಕಣಿ, ಆನಂದ ನಾಯ್ಕ, ರಾಘುವೇಂದ್ರ ಕವಂಚೂರು ಮಾತನಾಡಿದರು.
ಹೋರಾಟಗಾರರಾದ ರಾಜು ನರೇಬೈಲ್, ದೇವರಾಜ ಗೊಂಡ ಭಟ್ಕಳ, ಇಬ್ರಾಹಿಂ ಗೌಡಳ್ಳಿ, ಭೀಮಶಿ ವಾಲ್ಮಿಕಿ, ನೆಹರು ನಾಯ್ಕ, ಎಂ.ಆರ್.ನಾಯ್ಕ, ಮಹೇಂದ್ರ ನಾಯ್ಕ ಕತಗಾಲ, ಯಾಕೂಬ ಬೆಟ್ಕುಳಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.