ADVERTISEMENT

ನಾಡು, ನುಡಿ ಪ್ರೀತಿಗೆ ಕನ್ನಡ ಧ್ವಜಾರೋಹಣ

ಕಾರವಾರ ತಾಲ್ಲೂಕಿನ ತೋಡೂರು ಪ್ರೌಢಶಾಲೆಯಲ್ಲಿ ರಾಜ್ಯೋತ್ಸವದ ವಿನೂತನ ಆಚರಣೆ

ಸದಾಶಿವ ಎಂ.ಎಸ್‌.
Published 31 ಅಕ್ಟೋಬರ್ 2019, 19:45 IST
Last Updated 31 ಅಕ್ಟೋಬರ್ 2019, 19:45 IST
ತೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಧ್ವಜಾರೋಹಣ (ಸಂಗ್ರಹ ಚಿತ್ರ)
ತೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಧ್ವಜಾರೋಹಣ (ಸಂಗ್ರಹ ಚಿತ್ರ)   

ಕಾರವಾರ: ಕರ್ನಾಟಕ ರಾಜ್ಯೋತ್ಸವದ ಸಂಭ್ರಮಕ್ಕೆ ರಾಷ್ಟ್ರ ಧ್ವಜಾರೋಹಣ, ನಾಡಗೀತೆ ಗಾಯನ, ಹಳದಿ, ಕೆಂಪು ಬಣ್ಣದ ಕಾಗದಗಳ ಅಲಂಕಾರ ಸಾಮಾನ್ಯ. ಆದರೆ, ಈ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ‘ಭುವನ ವಂದನ ಗೀತೆ’ ಹಾಗೂ ‘ಕೇತನ ಗೀತೆ’ ಗಾಯನವಿರುತ್ತದೆ.

ತಾಲ್ಲೂಕಿನ ತೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಶಕದಿಂದ ಈ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಇದು ಜನರ ಮೆಚ್ಚುಗೆಯನ್ನೂ ಗಳಿಸಿದೆ.

‘ನಾಡು,ನುಡಿಯ ಬಗ್ಗೆ ಮಕ್ಕಳ ಎಳೆಯ ಮನಸ್ಸಿಗೆ ಕೇವಲ ಮಾತಿನಲ್ಲಿ ಹೇಳುವುದಕ್ಕಿಂತಲೂ ಆಚರಣೆಯ ಮೂಲಕ ತಿಳಿಸಿದಾಗ ಚೆನ್ನಾಗಿ ನಾಟುತ್ತದೆ. ಕನ್ನಡ ಧ್ವಜ, ನಮ್ಮ ಭಾಷೆ, ನಾಡಿನ ಬಗ್ಗೆ ಪರಿಣಾಮಕಾರಿಯಾಗಿ ಅರ್ಥವಾಗಲಿ ಎಂಬ ಕಾರಣಕ್ಕಾಗಿ ನಾನು ಇದನ್ನು ಆರಂಭಿಸಿದೆ’ ಎನ್ನುತ್ತಾರೆ ಈ ಪರಿಕಲ್ಪನೆಯ ರೂವಾರಿಯೂ ಆಗಿರುವ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ ನಾಯಕ.

ADVERTISEMENT

‘ನಾನು ತೋಡೂರಿಗೆ ವರ್ಗಾವಣೆಯಾಗಿ ಬರುವ ಮೊದಲು ಅಂಕೋಲಾ ತಾಲ್ಲೂಕಿನ ಮಂಜಗುಣಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅಲ್ಲಿ 15 ವರ್ಷಗಳ ಹಿಂದೆಯೇ ಕನ್ನಡ ಧ್ವಜಾರೋಹಣ ಮಾಡಿದೆವು. ಅದನ್ನು ಇಲ್ಲೂ ಮುಂದುವರಿಸಿದ್ದೇನೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

‘2006ರಲ್ಲಿ ಸುವರ್ಣ ಕನ್ನಡ ರಾಜ್ಯೋತ್ಸವದ ಸಂಭ್ರಮವಿತ್ತು. ಆ ವರ್ಷ ನ.1ರಂದು ಮಂಜಗುಣಿ ಶಾಲೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಪ್ರಭಾತ ಫೇರಿ ಆಯೋಜಿಸಿ‌ದ್ದೆ. ನಾಡು, ನುಡಿಯ ಬಗ್ಗೆ ಶಾಲೆಯಂಗಳದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಹಾಗೂ ಸಂಜೆ ದೀಪೋತ್ಸವವನ್ನೂ ಹಮ್ಮಿಕೊಳ್ಳಲಾಗಿತ್ತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಹಲವು ಶಿಷ್ಟಾಚಾರ ಪಾಲನೆ: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣದ ಸಮಯದಲ್ಲಿ ಇರುವ ಮಾದರಿಯ ಶಿಷ್ಟಾಚಾರ ಹಾಗೂ ಸಂಪ್ರದಾಯಗಳನ್ನು ನ.1ರಂದು ಕನ್ನಡ ಧ್ವಜಾರೋಹಣ ಮಾಡುವಾಗಲೂ ಪಾಲಿಸಲಾಗುತ್ತದೆ.

‘ವಂದೇ ಮಾತರಂ’ ಗೀತೆಯ ಬದಲು ‘ಭುವನ ವಂದನ’ ಹಾಗೂ ‘ಧ್ವಜಗೀತೆ’ಯ ಸಂದರ್ಭದಲ್ಲಿ ‘ಕೇತನ ಗೀತೆ’ ಹಾಡಲಾಗುತ್ತದೆ. ಧ್ವಜಾರೋಹಣ ಮಾಡುವಾಗ ವಿದ್ಯಾರ್ಥಿಗಳು ನಾಡಗೀತೆ ಮೊಳಗಿಸುತ್ತಾರೆ ಎಂದು ಉಮೇಶ ನಾಯಕ ತಿಳಿಸಿದರು.

ವಿದ್ಯಾರ್ಥಿನಿಯರಿಂದ ಯಕ್ಷಗಾನ: ಈ ಶಾಲೆಯ 11 ವಿದ್ಯಾರ್ಥಿನಿಯರು ಯಕ್ಷಗಾನ ತರಬೇತಿ ಪಡೆದಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ‘ವೀರ ಅಭಿಮನ್ಯು’ ಎಂಬ ಪ್ರಸಂಗವನ್ನು ಪ್ರಸ್ತುತ ಪಡಿಸಲಿದ್ದಾರೆ. ಈ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳೂ ಸೇರಿ 13 ಮಂದಿ ಪಾತ್ರಧಾರಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.